Advertisement

ಮೈತ್ರಿ ಅಭ್ಯರ್ಥಿ ಗೆಲ್ಲಿಸಿಕೊಡುವಂತೆ ಡಿಸಿಎಂ ಒತ್ತಾಯ

03:44 PM Mar 25, 2019 | Team Udayavani |

ತುಮಕೂರು: ಕಾಂಗ್ರೆಸ್‌, ಜೆಡಿಎಸ್‌ ಒಟ್ಟಾಗಿ ರಾಜ್ಯದ ಎಲ್ಲಾ ಕಡೆ ಅಭ್ಯರ್ಥಿಗಳನ್ನು ಈ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಿದ್ದೇವೆ. ನಮ್ಮ ಉದ್ದೇಶ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

Advertisement

ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಮಾಜಿ ಶಾಸಕರು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರದಿಂದ ನಮ್ಮ ರಾಜ್ಯಕೆ ಅನ್ಯಾಯವಾಗಿದೆ. ರಾಜ್ಯದಲ್ಲಿ ರೈತರು ಸರಣಿ ಆತ್ಮಹತ್ಯೆ ಮಾಡಿಕೊಂಡರು ರೈತರಿಗೆ ಯಾವುದೇ ಅನುಕೂಲವಾಗುವಂಥ ಯೋಜನೆಗಳನ್ನು ನೀಡಲಿಲ್ಲ ಎಂದರು.

ಜವಾಬ್ದಾರಿ: ದೇವೇಗೌಡರನ್ನು ಈ ಕ್ಷೇತ್ರದಿಂದ ಗೆಲ್ಲಿಸಬೇಕು ಎನ್ನುವ ಜವಾಬ್ದಾರಿ ನನ್ನ ಮೇಲೆ ಹಾಕಿದ್ದಾರೆ. ನಾವೆಲ್ಲ ಒಗ್ಗಟ್ಟಾಗಿ ಅವರ ಗೆಲುವಿಗೆ ಶ್ರಮಿಸಬೇಕು. ಚುನಾವಣೆಯಲ್ಲಿ ಎಲ್ಲ ರಣತಂತ್ರಗಳನ್ನು ಪ್ರಯೋಗಿಸಿ ದೇವೇಗೌಡರನ್ನು ಗೆಲ್ಲಿಸಬೇಕು ಎಂದರು.

ಸಭೆಯಲ್ಲಿ ಮುದ್ದಹನುಮೇಗೌಡರಿಗೆ ಕಾಂಗ್ರೆಸ್‌ನಿಂದ ಟಿಕೆಟ್‌ ಏಕೆ ಕೈತಪ್ಪಿದೆ. ಇನ್ನು ಕಾಲಾವಕಾಶ ಇದೆ. ಅವರಿಗೆ ತುಮಕೂರು ಲೋಕಸಭಾ ಟಿಕೆಟ್‌ ನೀಡಿ ಎಂದು ಸಂಸದ ಮುದ್ದಹನುಮೇಗೌಡ ಬೆಂಬಲಿತ ಕಾಂಗ್ರೆಸ್‌ ಕಾರ್ಯಕರ್ತರು ಒತ್ತಾಯಿಸಿದರು. ಡಾ.ಜಿ.ಪರಮೇಶ್ವರ್‌ ಅವರನ್ನು ಸಮಾಧಾನ ಮಾಡಲು ಪ್ರಯತ್ನಿಸಿದರು ಆದರೆ ಕಾರ್ಯಕರ್ತರು ಅವರ ಮಾತು ಕೇಳದೆ ಸಭೆಯಿಂದ ಹೊರನಡೆದರು.

ಮೈತ್ರಿ ಧರ್ಮವೇ?: ಸಂಸದ ಮುದ್ದಹನುಮೇಗೌಡರಿಗೆ ಟಿಕೆಟ್‌ ತಪ್ಪಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕಾರ್ಯಕರ್ತರು, ಮುದ್ದಹನುಮೇಗೌಡರು ಸಂಸದರಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಹಾಲಿ ಒಂಬತ್ತು ಜನರಿಗೆ ಟಿಕೆಟ್‌ ನೀಡಿ ಮುದ್ದಹನುಮೇಗೌಡರಿಗೆ ಯಾಕೆ ನೀಡಲಿಲ್ಲ. ಇದು ಮೈತ್ರಿ ಧರ್ಮವೇ ಎಂದರು.

Advertisement

ಸಭೆ ಬಳಿಕ ಮಾತನಾಡಿದ ಡಿಸಿಎಂ ಪರಮೇಶ್ವರ್‌, ಸಭೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ದೇವೇಗೌಡರನ್ನು ಬೆಂಬಲಿಸುವಂತೆ ಕಾರ್ಯಕರ್ತರಿಗೆ ತಿಳಿಸಲಾಗಿದೆ, ದೇವೇಗೌಡರು ನಾಮಪತ್ರವನ್ನು ಸಲ್ಲಿಸುವ ವೇಳೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದ ಕಾರ್ಯಕರ್ತರು ದೇವೇಗೌಡರಿಗೆ ಬೆಂಬಲವನ್ನ ನೀಡಲಿದ್ದಾರೆ ಎಂದು ನುಡಿದರು.

ಕಾಂಗ್ರೆಸ್‌ ಜೆಡಿಎಸ್‌ ಒಂದಾಗಿ ಅಭ್ಯರ್ಥಿಗಳನ್ನು ಹಾಕಿದ್ದೇವೆ. ಒಪ್ಪಂದದಂತೆ 8 ಕ್ಷೇತ್ರಗಳನ್ನು ಅವರಿಗೆ ಬಿಟ್ಟುಕೊಟ್ಟಿದ್ದೇವೆ. ತುಮಕೂರು ಕ್ಷೇತ್ರದಲ್ಲಿ ದೇವೇಗೌಡರೇ ಸ್ಪರ್ಧಿಸುತ್ತಿದ್ದಾರೆ. ಮುದ್ದಹನುಮೇಗೌಡರಿಗೆ ಟಿಕೆಟ್‌ ಸಾಧ್ಯವಾಗಿಲ್ಲ. ಅವರಲ್ಲಿ ವಿನಂತಿ ಮಾಡುತ್ತೇನೆ ಎಂದರು.
ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಶಾಸಕರಾದ ಎಸ್‌.ರಫೀಕ್‌ ಅಹಮದ್‌, ಎಸ್‌.ಷಫೀ ಅಹಮದ್‌, ಕೆ.ಷಡಕ್ಷರಿ, ಆರ್‌.ನಾರಾಯಣ್‌ ಇತರ ಮುಖಂಡರು ಹಾಜರಿದ್ದರು.

ಸಂಸದರ ಜತೆ ಮಾತನಾಡುವೆ – ಪರಂ: ನಮ್ಮ ಪಕ್ಷದ ಮುಖಂಡರ ಯಾರೇ ಇರಲಿ, ಇಲ್ಲಿಬಂಡಾಯ ಮಾಡಬೇಡಿ, ಎಲ್ಲರೂ ಒಗ್ಗಟ್ಟಾಗಿ ದೇವೇಗೌಡರನ್ನು ಗೆಲ್ಲಿಸೋಣ. ಮುದ್ದಹನುಮೇಗೌಡರಿಗೆ ಉದ್ದೇಶ ಪೂರಿತವಾಗಿ ಟಿಕೆಟ್‌ ತಪ್ಪಿಸಿಲ್ಲ. ಎಲ್ಲ ಪಕ್ಷಗಳು ಒಟ್ಟಿಗೆ ಸೇರಿ ಬಿಜೆಪಿಯನ್ನು ದೂರ ಇಡಬೇಕು ಎಂದು ಹೊಂದಾಣಿಕೆ ಮಾಡಿಕೊಂಡಿದ್ದೇವೆ.

ಮುದ್ದಹನುಮೇಗೌಡರಿಗೆ ಟಿಕೆಟ್‌ ನೀಡಬೇಕು ಎಂದು ಸ್ಕಿನಿಂಗ್‌ ಕಮಿಟಿಯಲ್ಲಿ ನಾನು ಮಾತನಾಡಿದ್ದೇನೆ. ಹಾಲಿ ಇರುವ ಸಂಸದರಿಗೆ ಟಿಕೆಟ್‌ ತಪ್ಪಿಸಬೇಡಿ ಎಂದು ಹೇಳಿದ್ದೆ. ಆದರೆ, ಇದು ಪಕ್ಷದ ವರಿಷ್ಠರ ತೀರ್ಮಾನವಾಗಿದೆ. ಯಾರೂ ಬಂಡಾಯ ಏಳಬೇಡಿ. ನಾನೇ ಸಂಸದರ ಮನೆಗೆ ಹೋಗಿ ಮನವಿ ಮಾಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next