ಚಿಕ್ಕಬಳ್ಳಾಪುರ: ಜಿಲ್ಲೆಯ ಉಸ್ತುವಾರಿ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲೆಗೆ ಪ್ರವಾಸ ಕೈಗೊಂಡಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಅವರು ನಂದಿ ಗಿರಿಧಾಮದ ಸಮೀಪ ಇರುವ ಖಾಸಗಿ ರೆಸಾರ್ಟ್ ನಲ್ಲಿ ನಂದಿಗಿರಿಧಾಮ ಅಭಿವೃದ್ಧಿ ಕುರಿತು ಚರ್ಚೆ ನಡೆಸಿರುವುದು ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಚಿಕ್ಕಬಳ್ಳಾಪುರ ಸಮೀಪ ಇರುವ ಡಿಸ್ಕವರಿ ವಿಲೇಜ್ ನ ಖಾಸಗಿ ರೆಸಾರ್ಟ್‌ನಲ್ಲಿ ಅಧಿಕಾರಿಗಳ ಸಭೆ ನಡೆಸಿ ನಂದಗಿರಿಧಾಮದ ಅಭಿವೃದ್ದಿ ಬಗ್ಗೆ ಚರ್ಚೆ ನಡೆಸಿದರು.
ನಂದಿ ಗಿರಿಧಾಮದಲ್ಲಿಯೆ ಸಭೆ ನಡೆಸಿ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸುವುದರ ಬದಲು ರಾಜ್ಯದ ಉಪ ಮುಖ್ಯಮಂತ್ರಿ ಖಾಸಗಿ ರೆಸಾರ್ಟ್ ನಲ್ಲಿ ಸಭೆ ನಡೆಸಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.
ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ್, ಪ್ರವಾಸ ಕಾರ್ಯಕ್ರಮದಲ್ಲಿ ನಂದಿಗಿರಿ ಧಾಮಕ್ಕೆ ಹೋಗುವ ಬಗ್ಗೆ ನಿರ್ಧಾರ ಆಗಿರಲಿಲ್ಲ. ಆದ್ದರಿಂದ ಬೆಟ್ಟದ ಕೆಳಗೆ ಸಭೆ ನಡೆಸಿದ್ದೇವೆ. ಒಂದು ಒಳ್ಳೆಯ ಉದ್ದೇಶದಿಂದ ಸಭೆ ನಡೆಸಿದ್ದೇವೆ. ಬರೀ ನಂದಿಗಿರಿಧಾಮ ವಿಚಾರ ಅಷ್ಟೇ ಅಲ್ಲ ಸುತ್ತಮುತ್ತಲಿನ ಪರಿಸರ ಸಂರಕ್ಷಣೆ ಬಗ್ಗೆ ಚರ್ಚೆ ನಡೆಸಿದ್ದೇವೆ. ಅಲ್ಲಿ ಏನು ಕೊಡುವುದು ತಗೊಳ್ಳುವುದು ಏನು ಇರಲಿಲ್ಲ. ನಮ್ಮ ಉದ್ದೇಶ ನಂದಿಗಿರಿಧಾಮ ಸಮಗ್ರ ಅಭಿವೃದ್ಧಿಗೆ ಸಭೆ ನಡೆಸಬೇಕಾಗಿತ್ತು. ಆದ್ದರಿಂದ ಅಲ್ಲಿ ಸಭೆ ನಡೆಸಿದ್ದೇವೆಂದು ಖಾಸಗಿ ರೆಸಾರ್ಟ್‌ನಲ್ಲಿ ಸಭೆ ನಡೆಸಿದ್ದನ್ನು ಸಮರ್ಥಿಸಿಕೊಂಡರು.