ರಾಯಚೂರು: ಭೂ ಒಡೆತನ ಯೋಜನೆಯಡಿ ಸಲ್ಲಿಕೆಯಾದ 3,800 ಅರ್ಜಿಗಳನ್ನು ವಿಲೇವಾರಿ ಮಾಡದೆ ಬಾಕಿ ಉಳಿಸಿಕೊಂಡಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕ ವೈ.ಎ.ಕಾಳೆ ಅಮಾನತಿಗೆ ಸೂಚಿಸುವ ಮೂಲಕ ಸಮಾಜ ಕಲ್ಯಾಣ ಇಲಾಖೆ ಸಚಿವ ಡಿಸಿಎಂ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಮಾಜ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇಲಾಖೆ ಕಾರ್ಯದರ್ಶಿಗೆ ಕರೆ ಮಾಡಿದ ಸಚಿವರು, ಸಂಜೆ ಐದು ಗಂಟೆಯೊಳಗೆ ಅಧಿಕಾರಿ ಅಮಾನತು ಆದೇಶ ನನ್ನ ಮೇಜಿನ ಮೇಲಿರಬೇಕು ಎಂದು ಸೂಚಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ಅಧಿಕಾರಿ ವೈ.ಎ.ಕಾಳೆ ಅಗತ್ಯ ದಾಖಲೆ ಸಂಗ್ರಹಿಸಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದರು. ಇದರಿಂದ ಮತ್ತಷ್ಟು ಆಕ್ರೋಶ ವ್ಯಕ್ತಪಡಿಸಿದ ಸಚಿವರು, ದಾಖಲೆ ಸಂಗ್ರಹಿಸಲು ಎಷ್ಟು ವರ್ಷ ಬೇಕು. ಕನಿಷ್ಟ ಪಕ್ಷ ಒಂದು ಸಭೆಯನ್ನು ನಡೆಸಿಲ್ಲ. ಅಭಿವೃದ್ಧಿ ಮಾಡಲು ಮತ್ತೆ ಡಾ| ಅಂಬೇಡ್ಕರ್ ಹುಟ್ಟಿ ಬರಬೇಕೇ ಎಂದು ತರಾಟೆಗೆ ತೆಗೆದುಕೊಂಡರು.
ಜಿಲ್ಲೆಯ ಶಾಸಕರು, ಸಂಸದರು ಅಧಿಕಾರಿಗಳ ಪರ ವಹಿಸಿಕೊಂಡು ಬರುವುದನ್ನು ಬಿಟ್ಟುಬಿಡಿ ಎಂದು ನಗರ ಶಾಸಕ ಡಾ| ಶಿವರಾಜ ಪಾಟೀಲರಿಗೆ ಸೂಚಿಸಿದರು. ನೀವು ಅಡ್ಡಿಪಡಿಸದಿದ್ದರೆ ಇಲಾಖೆಯನ್ನು ಸೀದಾ ಮಾಡುತ್ತೇನೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನಗರ ಶಾಸಕ, ನಮಗಂತೂ ಹೇಳಿ ಸಾಕಾಗಿದೆ. ನೀವೇ ಏನಾದರು ಮಾಡಿ ಎಂದರು.
ಜಿಲ್ಲೆಯಲ್ಲಿ ಸ್ಮಶಾನ ಸ್ಥಳದ ಬಗ್ಗೆ ಸೂಕ್ತ ಮಾಹಿತಿ ನೀಡದ್ದಕ್ಕೆ ಸಚಿವ ಕಾರಜೋಳ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಊಟ ಮಾಡಲು ಇಲ್ಲದಿದ್ದರೆ ಹೇಗೋ ಇರಬಹುದು. ಆದರೆ, ಸತ್ತವರಿಗೆ ಹೂಳಲು ಸ್ಮಶಾನ ಇಲ್ಲವೆಂದರೆ ಹೇಗೆ ಎಂದು ಪ್ರಶ್ನಿಸಿದರು. ಸ್ಥಳದಲ್ಲೇ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿಗೆ ಕರೆ ಮಾಡಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ದಲಿತರಿಗೆ ಮೀಸಲಾದ ಸ್ಮಶಾನ ಜಾಗದ ಬಗ್ಗೆ ಮಾಹಿತಿ ಪಡೆದು ಕೂಡಲೇ ಕಳುಹಿಸಿ ಎಂದು ಸೂಚಿಸಿದರು.
ಇನ್ನು ಸಮರ್ಪಕವಾಗಿ ಕಾರ್ಯನಿರ್ವಹಿಸದ ಜಿಲ್ಲೆಯ ಅಧಿಕಾರಿಗಳಿಗೆ ವರ್ಗಾವಣೆಯ ಎಚ್ಚರಿಕೆ ನೀಡಿದರು. ಎಂಟು ದಿನದೊಳಗೆ ಮಾಹಿತಿ ನೀಡದಿದ್ದರೆ, ಸರಿಯಾಗಿ ಕೆಲಸ ಮಾಡದಿದ್ದರೆ ಕೋಲಾರಕ್ಕೆ ವರ್ಗಾವಣೆ ಮಾಡುತ್ತೇನೆ ಎಂದು ರಾಯಚೂರಿನ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದರು.