Advertisement

ಮದುವೆಗೆ ಮುಂಚೆ ಮಕ್ಕಳ ಹೇರುವ ಚಿಂತನೆ ಕಾಂಗ್ರೆಸ್‌ನದ್ದು

07:35 PM Jul 06, 2021 | Team Udayavani |

ಬಾಗಲಕೋಟೆ: ಕೂಸು ಹುಟ್ಟುವ ಮುಂಚೆ ಕುಲಾಯಿ ಹೊಲಿಸಿದಂತೆ ಮದುವೆಗೆ ಮುಂಚೆ ಮಕ್ಕಳ ಹೇರುವ ಚಿಂತನೆ ಕಾಂಗ್ರೆಸ್‌ ಮಾಡುತ್ತಿದೆ. ಕಾಂಗ್ರೆಸ್‌ನವರು ಚುನಾವಣೆಯಲ್ಲಿ 113 ಸ್ಥಾನ ಗೆದ್ದು ಬರಲಿ. ಆ ಬಳಿಕ ಸಿಎಂ ಸ್ಥಾನಕ್ಕೆ ಪೈಪೋಟಿ ನಡೆಸಲಿ ಎಂದು ಡಿಸಿಎಂ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.

Advertisement

ಸೋಮವಾರ ಸಂಜೆ ಕೆಡಿಪಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಮದುವೆ ಆಗೋಕೆ ಮುಂಚೆ ಮಕ್ಕಳನ್ನು ಹೇರಬೇಕು ಅಂತಿದ್ದಾರೆ. ಚುನಾವಣೆಯೇ ನಡೆದಿಲ್ಲ. ದಿನಾಂಕ ನಿಗದಿಯಾಗಿಲ್ಲ. ಈ ಸಂದರ್ಭದಲ್ಲಿ ಸಿಎಂಗಾಗಿ ಓಡಾಡೋದು ಎಷ್ಟು ಪ್ರಸ್ತುತ. ಇನ್ನೂ ಎರಡು ವರ್ಷಗಳ ನಂತರ ಚುನಾವಣೆ ಇದೆ. ಅವರು ಚುನಾವಣೆಯಲ್ಲಿ ಗೆದ್ದು ಬರಲಿ. 113 ಸ್ಥಾನ ಗೆಲ್ಲಲಿ. ಆ ಬಳಿಕ ಸಿಎಂ ಯಾರು ಆಗುತ್ತಾರೆ ಎಂದು ಅವರೇ ನಿರ್ಧಾರ ಮಾಡಲಿ. ಈಗಲೇ ಐದು ಗುಂಪುಗಳಾಗಿ ಸಿಎಂ ಸ್ಥಾನ ಹೋರಾಟ ಮಾಡುತ್ತಿದ್ದಾರೆ. ಅದು ಹೊಡೆದಾಟ ಮಾಡುವಂತದ್ದು. ಕಾಂಗ್ರೆಸ್‌ ಅವಸಾನಕ್ಕೆ ಇದು ಮುನ್ಸೂಚನೆ ಎಂದು ಟೀಕಿಸಿದರು.

ಕೊರೊನಾದಿಂದ ಸಂಭವಿಸಿದ ಸಾವಿನ ಹೊಣೆ ಕಾಂಗ್ರೆಸ್‌ನವರೇ ಹೊರಬೇಕು. ಲಸಿಕೆ ಬಗ್ಗೆ ಜನರಿಗೆ ತಪ್ಪು ಕಲ್ಪನೆ ನೀಡಿದವರೇ ಕಾಂಗ್ರೆಸ್ಸಿಗರು. ಎನರು ಮೊದಲು ಲಸಿಕೆ ಹಾಕಿಕೊಳ್ಳಲು ಹಿಂದೇಟು ಹಾಕಲು ಕಾಂಗ್ರೆಸ್‌ ಕಾರಣ. ಜನರು ಲಸಿಕೆ ಹಾಕಿಕೊಳ್ಳದ ಕಾರಣ, ನಮ್ಮಲ್ಲಿದ್ದ ಲಸಿಕೆ ಬೇರೆಡೆ ರಫ್ತು ಮಾಡಲಾಯಿತು ಎಂದರು.

ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಬಂದವರು ಮರಳಿ ಕಾಂಗ್ರೆಸ್‌ಗೆ ಹೋಗುವುದಿಲ್ಲ. ಹೋಗುವ ಮನಸ್ಥಿತಿಯಲ್ಲಿ ಇಲ್ಲ. ರಾಜ್ಯದಲ್ಲಿ ಯಡಿಯೂರಪ್ಪ, ದೇಶದಲ್ಲಿ ನರೇಂದ್ರ ಮೋದಿ ಅವರ ನಾಯಕತ್ವ ಬೆಂಬಲಿಸಿ, ಮೆಚ್ಚಿಕೊಂಡೇ ಬಿಜೆಪಿ ಸೇರಿದವರು ಮರಳಿ ಕಾಂಗ್ರೆಸ್‌ಗೆ ಹೇಗೆ ಹೋಗುತ್ತಾರೆ ಎಂದು ಪ್ರಶ್ನಿಸಿದರು.

60 ಸಾವಿರ ಕೋಟಿ ಲಾಸ್‌: ರಾಜ್ಯದಲ್ಲಿ ಕೊರೊನಾ, ಪ್ರವಾಹದಿಂದ ಎರಡು ವರ್ಷದಲ್ಲಿ 60 ಸಾವಿರಕ್ಕೂ ಹೆಚ್ಚು ನಷ್ಟವಾಗಿದೆ. ಕೇಂದ್ರ ಸರ್ಕಾರ, ಇಡೀ ದೇಶಕ್ಕೆ ಒಂದೇ ಮಾರ್ಗಸೂಚಿಯಡಿ ಅನುದಾನ ನೀಡುತ್ತದೆ. 60 ಸಾವಿರ ಕೋಟಿ ನಷ್ಟವಾಗಿದ್ದಕ್ಕೆ 60 ಸಾವಿರ ಕೋಟಿಯೂ ಕೇಂದ್ರ ಸರ್ಕಾರ ಕೊಡುವುದಿಲ್ಲ. ನಿಯಮಾವಳಿ ಪ್ರಕಾರ ಎಷ್ಟು ಬರಬೇಕೋ ಅಷ್ಟು ಬರುತ್ತದೆ ಎಂದು ಹೇಳಿದರು.

Advertisement

ರಾಜ್ಯದಲ್ಲಿ ಎರಡು ವರ್ಷದಿಂದ ವ್ಯಾಪಾರ, ವಹಿವಾಟು ಕಡಿಮೆ ಆಗಿದೆ. ಉದ್ಯಮಗಳು ಬಂದ್‌ ಆಗಿವೆ. ಹೀಗಾಗಿ ಸರ್ಕಾರಕ್ಕೆ ಬರುಂತಹ ನಿಗದಿತ ಆದಾಯ ಬರುತ್ತಿಲ್ಲ. ಈ ಹಿಂದೆ ತ್ತೈಮಾಸಿಕವಾಗಿ ಸರ್ಕಾರಕ್ಕೆ ಶೇ.15ರಷ್ಟು ಆದಾಯ ಬಂದಿದೆ. ಸ್ವಾಭಾವಿಕವಾಗಿ ಆರ್ಥಿಕ ತೊಂದರೆ ಇದೆ ಎಂದು ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಹಳ ಅತ್ಯುತ್ತಮವಾಗಿ ಹಣಕಾಸು ಇಲಾಖೆ ನಿರ್ವಹಣೆ ಮಾಡುತ್ತಿದ್ದಾರೆ. ಹೆಚ್ಚಿನ ಅನುದಾನಕ್ಕೆ ಕೇಂದ್ರ ಸರ್ಕಾರವನ್ನು ಕೇಳುತ್ತೇವೆ. ಸ್ವಾತಂತ್ರ್ಯ ನಂತರ ಈ ವರೆಗಿನ ಎಲ್ಲ ಸರ್ಕಾರಗಳೂ ಕೇಂದ್ರಕ್ಕೆ ನಿಯೋಗದ ಮೂಲಕ ಅನುದಾನ ಕೇಳುತ್ತಲೇ ಬಂದಿವೆ. ಹಾಗೆಯೇ ನಾವು ಕೇಳುತ್ತೇವೆ ಎಂದು ತಿಳಿಸಿದರು.

ಅಂಬಾರಿ ಆನೆ ಹೊರಬೇಕು, ಮರಿ ಆನೆ ಅಲ್ಲ ಎಂಬ ಸಚಿವ ಸಿ.ಪಿ. ಯೋಗೇಶ್ವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸಿಎಂ ಕಾರಜೋಳ, ಯಡಿಯೂರಪ್ಪ ಅಧಿಕಾರ ವಹಿಸಿಕೊಂಡ ನಂತರ ಅತ್ಯಂತ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ನಿರ್ವಹಣೆಯ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಪ್ರವಾಹದಲ್ಲಿ ಬಾರಿ ಪ್ರಮಾಣದಲ್ಲಿ ಹಾನಿ ಆಗಿದೆ. ಅದಕ್ಕೆ ದೊಡ್ಡ ಮೊತ್ತದ ಪರಿಹಾರ ಕೊಡುವ ಕೆಲಸ ಮಾಡಿದ್ದಾರೆ. ಅವರ ನಾಯಕತ್ವದಲ್ಲಿ ಸರ್ಕಾರ ಇರುತ್ತದೆ. ಹೈಕಮಾಂಡ್‌ ಮುಂದೆ ಮುಖ್ಯಮಂತ್ರಿ ಬದಲಾವಣೆ ವಿಷಯವಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next