Advertisement

ಗ್ರಾಮ ಕಾರ್ಯಪಡೆ ರಚಿಸಿ

05:14 PM May 01, 2021 | Team Udayavani |

ಬಾಗಲಕೋಟೆ: ಕೊರೊನಾ ನಿಯಂತ್ರಣಕ್ಕೆ ತರುವುದು ಸರ್ಕಾರದ ಮೊದಲ ಆದ್ಯತೆ. ಜಿಲ್ಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಹಾಗೂ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಮತ್ತಷ್ಟು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುವಂತೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲಾಡಳಿತಕ್ಕೆ ಕೋವಿಡ್‌ ಮಾರ್ಗಸೂಚಿ ಪಾಲನೆಗೆ ಕಟ್ಟುನಿಟ್ಟಿನ ಕ್ರಮಕ್ಕಾಗಿ ಸೂಚಿಸಿದ್ದಾರೆ. ಗುಳೆ ಹೋದ ಜನ ಮರಳಿ ತಮ್ಮ ತಮ್ಮ ಊರುಗಳಿಗೆ ಹಿಂದಿರುಗುತ್ತಿದ್ದು, ಅವರಿಗೆ ಪ್ರತಿ ಗ್ರಾಮದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅವಶ್ಯಕತೆ ಇದ್ದವರೆಲ್ಲರಿಗೂ ಕಡ್ಡಾಯವಾಗಿ ಉದ್ಯೋಗ ನೀಡಬೇಕು ಎಂದು ತಿಳಿಸಿದ್ದಾರೆ.

ಕೋವಿಡ್‌ ಹೆಚ್ಚಾಗಿ ಹರಡುತ್ತಿರುವ ಗ್ರಾಮಗಳಲ್ಲಿ ಯಾವ ಕಾರಣಕ್ಕಾಗಿ ಹರಡುತ್ತಿದೆ ಎನ್ನುವುದನ್ನು ಪತ್ತೆ ಹಚ್ಚಲು ಗ್ರಾಮಗಳಲ್ಲಿ ಕಾರ್ಯಪಡೆಗಳನ್ನು ಕಡ್ಡಾಯವಾಗಿ ರಚನೆ ಮಾಡಿ ನಿಯಂತ್ರಿಸಲು ಕ್ರಮ ಜರುಗಿಸಬೇಕು. ತರಕಾರಿ ಮಾರುಕಟ್ಟೆಗಳಲ್ಲಿ ಜನಜಂಗುಳಿ ಹೆಚ್ಚಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಎಲ್ಲ ವಾರ್ಡ್‌ಗಳಲ್ಲಿ ಸುಲಲಿತವಾಗಿ ತರಕಾರಿ ದೊರಕುವಂತೆ ವ್ಯವಸ್ಥೆ ಕಲ್ಪಿಸಬೇಕು. ವಿನಾಕಾರಣ ಜನರನ್ನು ಭಯಭೀತರನ್ನಾಗಿ ಮಾಡಲು ಕೆಲವರು ಸುಳ್ಳುಸುದ್ದಿ- ವದಂತಿಯನ್ನು ಹಬ್ಬಿಸುತ್ತಿದ್ದಾರೆ. ಅಂತಹವರ ಬಗ್ಗೆ ನಿಗಾ ವಹಿಸಲು ಸೂಚಿಸಿದ್ದಾರೆ. ರೆಮಿಡಿಸಿವಿರ್‌ ಚುಚ್ಚುಮದ್ದು ಅನ್ನು ಅವಶ್ಯಕತೆಗನುಗುಣವಾಗಿ ಸರ್ಕಾರ ಪೂರೈಕೆ ಮಾಡುತ್ತಿದೆ. ಕೆಲವರು ಕೃತಕ ಅಭಾವ ಸೃಷ್ಟಿ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ.

ಕಾಳಸಂತೆಯಲ್ಲಿ ಈ ಚುಚ್ಚುಮದ್ದನ್ನು ಮಾರಾಟ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಅಂತಹವರ ಬಗ್ಗೆ ಹೆಚ್ಚು ತೀವ್ರ ನಿಗಾವಹಿಸಲು ಪೊಲೀಸರು ಎಚ್ಚರ ವಹಿಸಿ, ಅವರ ವಿರುದ್ಧ ಕ್ರಮಕೈಗೊಳ್ಳಬೇಕು. ಎಲ್ಲ ತಾಲೂಕುಗಳಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಪ್ರಾರಂಭಿಸಿ, ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಂಡು ವರದಿ ಸರ್ಕಾರಕ್ಕೆ ಸಲ್ಲಿಸಲು ತಿಳಿಸಿದ್ದಾರೆ. ಆಸ್ಪತ್ರೆಗಳಲ್ಲಿ ಬೆಡ್‌ (ಹಾಸಿಗೆ) ಲಭ್ಯತೆ ಮಾಹಿತಿಯನ್ನು ಸಾರ್ವಜನಿಕರಿಗೆ ಪಾರದರ್ಶಕವಾಗಿ ನೀಡಬೇಕು. ಜಿಲ್ಲೆಯಲ್ಲಿ ಲಸಿಕೆ ಹಾಕಿಸಿಕೊಳ್ಳುವವರ ಮಾಹಿತಿ, ಆಕ್ಸಿಜನ್‌ ಲಭ್ಯತೆಯ ಮಾಹಿತಿ ಸಂಗ್ರಹಿಸುವುದು ಮತ್ತು ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು. ಕಡ್ಡಾಯವಾಗಿ ವಲಸಿಗರ ಮಾಹಿತಿ ಸಂಗ್ರಹಿಸುವುದು. ಅವಶ್ಯವಿರುವ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಕೋವಿಡ್‌-19 ನಿಯಂತ್ರಣ ಕರ್ತವ್ಯಕ್ಕೆ ನಿಯೋಜಿಸಿ, ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕೋವಿಡ್‌ ಸೊಂಕಿತ ರೋಗಿಗಳಿಗೆ ಹಾಸಿಗೆ ಕೊರತೆಯಾಗದಂತೆ ವಸತಿ ಶಾಲೆ, ವಸತಿ ನಿಲಯಗಳನ್ನು ಸಜ್ಜುಗೊಳಿಸಿ ಆಸ್ಪತ್ರೆಯ ಅನೆಕ್ಸ್‌ ಕಟ್ಟಡವೆಂದು ಗುರುತಿಸಿ, ಸೌಲಭ್ಯ ಕಲ್ಪಿಸಬೇಕು. ಸಣ್ಣ-ಸಣ್ಣ ಮನೆ ಇದ್ದವರಿಗೆ ಕ್ವಾರಂಟೈನ್‌ನಲ್ಲಿಡುವ ಪರಿಸ್ಥಿತಿ ಎದುರಾದರೆ ವಸತಿ ನಿಲಯ, ವಸತಿ ಶಾಲೆಗಳಲ್ಲಿ ಕ್ವಾರಂಟೈನ್‌ನಲ್ಲಿಟ್ಟು ಆರೈಕೆ ಮಾಡಬೇಕು. ಹೋಬಳಿ ಮಟ್ಟದಲ್ಲಿ ಸಾರ್ವಜನಿಕರ ಸಲಹಾ ಸಮಿತಿ ರಚಿಸಿ, ಸರ್ಕಾರದ ಮಾರ್ಗಸೂಚಿಗಳ ಅನುಷ್ಠಾನದ ಬಗ್ಗೆ ಪಾರದರ್ಶಕತೆ ಇರುವಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಬೇಕು. ಜಿಲ್ಲಾಡಳಿತವು ಈ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಅನುಪಾಲನಾ ವರದಿ ಸಲ್ಲಿಸಲು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next