Advertisement

ಮುಸ್ಲಿಂ,ದಲಿತರಿಗೆ ಡಿಸಿಎಂ ಕೊಡುಗೆ? ಜೆಡಿಎಸ್‌ನಿಂದ ರಾಜಕೀಯ ತಂತ್ರ

03:45 AM May 09, 2017 | Team Udayavani |

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ದಲಿತ ಹಾಗೂ ಮುಸ್ಲಿಂ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಘೋಷಣೆ ಮಾಡುವ ಬಗ್ಗೆ ಜೆಡಿಎಸ್‌ ಗಂಭೀರ ಚಿಂತನೆ ನಡೆಸಿದೆ.

Advertisement

2018ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕು ಎಂದು ಹಠ ತೊಟ್ಟಿರುವ ಜೆಡಿಎಸ್‌ ರಾಜಕೀಯ ತಂತ್ರಗಾರಿಕೆ ಭಾಗವಾಗಿ, ಎರಡು ಉಪ ಮುಖ್ಯಮಂತ್ರಿ ಸ್ಥಾನ ಸೃಷ್ಟಿಸಿ ದಲಿತರು ಹಾಗೂ ಮುಸ್ಲಿಮರಿಗೆ ನೀಡುವ ವಾಗ್ಧಾನದ ಮೂಲಕ ಆ ಎರಡೂ ಸಮುದಾಯವನ್ನು ಸೆಳೆಯಲು ಮುಂದಾಗಿದೆ.

ರಾಜ್ಯದ ರಾಜಕೀಯ ಇತಿಹಾಸದಲ್ಲಿ ಮುಸ್ಲಿಂ ಹಾಗೂ ದಲಿತರಿಗೆ ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿ ಸ್ಥಾನ ಇದುವರೆಗೂ ದೊರೆತಿಲ್ಲ. ಕಾಂಗ್ರೆಸ್‌ನಲ್ಲಿ ದಲಿತರಿಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಡಬೇಕು ಎಂದು ಬಹು ಚರ್ಚೆಯಾಯಿತಾದರೂ ಅವಕಾಶ ಸಿಗಲಿಲ್ಲ. ಇದೇ ವಿಷಯ ಮುಂದಿಟ್ಟುಕೊಂಡು ಕಾಂಗ್ರೆಸ್‌ ವೋಟ್‌ ಬ್ಯಾಂಕ್‌ಗೆ ಲಗ್ಗೆ ಇಡುವ ಲೆಕ್ಕಾಚಾರ ಹಾಕಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

2018ರ ವಿಧಾನಸಭೆ ಚುನಾವಣೆಗೆ 100 ಅಭ್ಯರ್ಥಿಗಳ ಪಟ್ಟಿಯನ್ನು ಜೂನ್‌ ವೇಳೆಗೆ ಬಿಡುಗಡೆ ಮಾಡುವ ಸಾಧ್ಯತೆಯಿದ್ದು, ಆ ಸಂದರ್ಭದಲ್ಲಿ ಬೃಹತ್‌ ಸಮಾವೇಶ ನಡೆಸುವ ಉದ್ದೇಶ ಪಕ್ಷಕ್ಕಿದೆ ಎನ್ನಲಾಗಿದೆ. ಅದೇ ವೇಳೆ, ಈ ಉಪ ಮುಖ್ಯಮಂತ್ರಿ ಸ್ಥಾನದ ಪ್ರಸ್ತಾಪವನ್ನು ಘೋಷಣೆ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಇತ್ತೀಚೆಗೆ ಎಚ್‌.ಡಿ.ದೇವೇಗೌಡರ ಜತೆ  ಈ ಪ್ರಸ್ತಾವನೆ ಬಗ್ಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಆಂತರಿಕವಾಗಿ ಚರ್ಚಿಸಿದ್ದು, ತಮ್ಮ ಅನಿಸಿಕೆ ಹೊರಹಾಕಿದ್ದಾರೆ ಎನ್ನಲಾಗಿದೆ. “”ದಲಿತ ಹಾಗೂ ಮುಸ್ಲಿಂ ಸಮುದಾಯ ಜೆಡಿಎಸ್‌ ಪಕ್ಷದ ಕೈ ಹಿಡಿದರೆ ಅಧಿಕಾರಕ್ಕೆ ಬರುವುದು ಕಷ್ಟವಲ್ಲ. ಈ ಎರಡೂ ಸಮುದಾಯದ ಜೆಡಿಎಸ್‌ ಜತೆಗಿದೆ ಎಂಬ ಸಂದೇಶ ರವಾನೆಯಾದರೆ ಚುನಾವಣೆಯ ಇಡೀ ಚಿತ್ರಣ ಬದಲಾಗುತ್ತದೆ. ಹೀಗಾಗಿ, ಇಂತಹ ಘೋಷಣೆ ಚುನಾವಣೆಗೆ ಮುನ್ನವೇ ಮಾಡಬೇಕು ಎನ್ನುವುದು ಕುಮಾರಸ್ವಾಮಿ ಲೆಕ್ಕಾಚಾರ. ಆದರೆ, ದೇವೇಗೌಡರು,  ಈ ವಿಚಾರದಲ್ಲಿ ಅವಸರ ಬೇಡ. ಇತರೆ ಸಮುದಾಯಕ್ಕೆ ಬೇರೆ ರೀತಿಯ ಸಂದೇಶ ರವಾನೆಯಾಗಬಹುದು ಎಂದು ಸಲಹೆ ನೀಡಿದರೆನ್ನಲಾಗಿದೆ. ಅಂತಿಮವಾಗಿ ಕೋರ್‌ ಕಮಿಟಿಯಲ್ಲಿ ಚರ್ಚಿಸಿ  ಈ ಕುರಿತು ಅಧಿಕೃತ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Advertisement

ಲೆಕ್ಕಾಚಾರ
ಈ ಪ್ರಸ್ತಾಪದ ಹಿಂದೆ ಕುಮಾರಸ್ವಾಮಿಯವರದ್ದು ಬೇರೆಯೇ ತಂತ್ರಗಾರಿಕೆ ಇದೆ.  ಪಕ್ಷದ ವಿರುದ್ಧ ತಿರುಗಿಬಿದ್ದಿರುವ ಜಮೀರ್‌ ಅಹಮದ್‌ಗೆ ಟಾಂಗ್‌ ನೀಡುವುದು ಜತೆಗೆ ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದರೂ ದಲಿತರಿಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಟ್ಟಿಲ್ಲ ಎಂಬುದನ್ನು ಬಿಂಬಿಸಿ ನಾವು ಅಧಿಕಾರಕ್ಕೆ ಬಂದರೆ ಎರಡೂ ಸಮುದಾಯಕ್ಕೆ ಅವಕಾಶ ಕೊಡುತ್ತೇವೆ ಎಂದು ವಾಗ್ಧಾœನ ನೀಡಿ ಎರಡೂ ಸಮುದಾಯ ತಮ್ಮ ಪಕ್ಷದತ್ತ ಸೆಳೆಯುವುದಾಗಿದೆ.

ಜತೆಗೆ, ದಲಿತ ಹಾಗೂ ಮುಸ್ಲಿಂ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ಕೊಡುವ ಘೋಷಣೆ ಮಾಡಿದರೆ ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿರುವ ಆ ಸಮುದಾಯದ ಪ್ರಭಾವಿ ಹಾಗೂ ವರ್ಚಸ್ಸಿನ ನಾಯಕರು ಜೆಡಿಎಸ್‌ಗೆ ಬರಲು ಉತ್ಸುಕತೆ ತೋರಬಹುದು.  ಈಗಾಗಲೇ ಜೆಡಿಎಸ್‌ಗೆ ಬರಲು ಮಾನಸಿಕವಾಗಿ ಸಿದ್ಧತೆ ನಡೆಸಿರುವವರು ಗಟ್ಟಿ ಮನಸ್ಸು ಮಾಡಬಹುದು ಎಂಬ ಲೆಕ್ಕಾಚಾರವೂ ಇದೆ ಎಂದು ಹೇಳಲಾಗಿದೆ.  ಒಟ್ಟಾರೆ,  ಮುಂದಿನ ಚುನಾವಣೆಗೆ ಜಾತಿ-ಸಮುದಾಯ ಸಮೀಕರಣದ ಆಧಾರದ ಮೇಲೆ ಜೆಡಿಎಸ್‌ನಲ್ಲಿ ರಣತಂತ್ರ ರೂಪಿಸಲಾಗುತ್ತಿದ್ದು, ದಿನಕ್ಕೊಂದು ರಾಜಕೀಯ ಲೆಕ್ಕಾಚಾರ ನಡೆದಿವೆ.

ರಾಜ್ಯದಲ್ಲಿ ಅನ್ಯಾಯಕ್ಕೊಳಗಾಗಿರುವ ಸಮುದಾಯಕ್ಕೆ ಅಧಿಕಾರ ನೀಡುವ ಮೂಲಕ ನ್ಯಾಯ ಒದಗಿಸುವ ವಿಚಾರದಲ್ಲಿ ನಾನು ಮುಕ್ತ ಮನಸ್ಸಿನಿಂದ ಇದ್ದೇನೆ. ಜೆಡಿಎಸ್‌ ಒಂದು ಸಮುದಾಯಕ್ಕೆ ಸೇರಿದ ಪಕ್ಷ ಎಂಬ ಲೇಬಲ್‌ ಕಳಚಬೇಕು ಆ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಸದ್ಯಕ್ಕೆ ಇಷ್ಟು ಮಾತ್ರ ಹೇಳಬಲ್ಲೆ.
– ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ

*ಎಸ್.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next