ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಇತ್ತೀಚೆಗೆ ಗುಡುಗಿದ್ದ ವಿಧಾನ ಪರಿಷತ್ತಿನ ಪ್ರತಿಪಕ್ಷದ ಮಾಜಿ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿರುವುದು ಕುತೂಹಲ ಕೆರಳಿಸಿದೆ.
ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರೊಂದಿಗೆ ಡಿಕೆಶಿ ನಿವಾಸಕ್ಕೆ ಆಗಮಿಸಿದ ಹರಿಪ್ರಸಾದ್ ಅವರು ಕೆಲಕಾಲ ರಾಜ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದಾರೆ.
ವಿಶೇಷವಾಗಿ ಸಿಎಂ ವಿರುದ್ಧ ಪರೋಕ್ಷವಾಗಿ ಟೀಕಿಸಿದ್ದ ಹಿನ್ನೆಲೆಯಲ್ಲಿ ಕಾರಣ ಕೇಳಿ ಎಐಸಿಸಿ ಶೋಕಾಸ್ ನೋಟಿಸ್ ಕೂಡ ಜಾರಿ ಮಾಡಿತ್ತು.
ಹರಿಪ್ರಸಾದ್ ಹಾಗೂ ಸಚಿವ ಮುನಿಯಪ್ಪ ಅವರ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿ.ಕೆ.ಶಿವಕುಮಾರ್ ಅವರು, ಈ ಇಬ್ಬರು ನಾಯಕರು ಲೋಕಸಭೆ ಚುನಾವಣೆಯ ವಿಚಾರವಾಗಿ ಚರ್ಚೆ ನಡೆಸಲು ಬಂದಿದ್ದರು. ಇದೇ ವೇಳೆ ನಿಗಮ- ಮಂಡಳಿಗಳಿಗೆ ಅಧ್ಯಕ್ಷರನ್ನು ಆದಷ್ಟು ಬೇಗ ನೇಮಿಸುವಂತೆಯೂ ಮುನಿಯಪ್ಪ ಅವರು ಸಲಹೆ ನೀಡಿದರು ಎಂದು ತಿಳಿಸಿದರು.
ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಅಭ್ಯರ್ಥಿಗಳನ್ನು ಶೀಘ್ರ ಆಯ್ಕೆ ಮಾಡುವ ಸಂಬಂಧ ಸಲಹೆ ಪಡೆಯಲಾಗುತ್ತಿದೆ. ಈಶ್ವರ ಖಂಡ್ರೆ, ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ ಸೇರಿದಂತೆ ಎಲ್ಲಾ ಭಾಗದ ನಾಯಕರ ಜತೆ ಎಂಎಲ್ಸಿ ಚುನಾವಣೆ ಬಗ್ಗೆ ಚರ್ಚೆ ನಡಸಲಾಗುತ್ತಿದೆ ಎಂದು ಹೇಳಿದರು.