ಚಾಮರಾಜನಗರ: ನಮಗೆ ಆಪರೇಷನ್ ಹಸ್ತ ಅವಶ್ಯಕತೆಯಿಲ್ಲ. ಬೇರೆ ಪಕ್ಷದ ನಾಯಕರು, ಕಾರ್ಯಕರ್ತರು ಅವರಾಗಿಯೇ ಇಚ್ಚೆಪಟ್ಟು ಬಂದರೆ ತಡೆಯಲು ಸಾದ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಚಾಮರಾಜನಗರದಲ್ಲಿ ಖಾಸಗಿ ಕಾರ್ಖಾನೆ ಶಂಕುಸ್ಥಾಪನೆ ಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ರೇಣುಕಾಚಾರ್ಯ ಭೇಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ,’ನಾನೊಬ್ಬ ಉಪಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷ. ಹಾಗಾಗಿ ಅವರ ಕ್ಷೇತ್ರದ ಸಮಸ್ಯೆ ಬಗ್ಗೆ ಚರ್ಚಿಸಲು ಬಂದಿದ್ದರು’ ಎಂದರು.
ಅಶೋಕ್ ಗೆ ಮಾಹಿತಿಯಿಲ್ಲ: ಮೋದಿ ಭೇಟಿ ವೇಳೆ ಸಿಎಂ- ಡಿಸಿಎಂ ಆಗಮಿಸದ ಬಗ್ಗೆ ಅಶೋಕ್ ಟೀಕೆಗೆ ಪ್ರತಿಕ್ರಿಯೆ ನೀಡಿ, ಮೋದಿ ಭೇಟಿ ಬಗ್ಗೆ ರಾಜ್ಯ ಬಿಜೆಪಿ ನಾಯಕರಿಗೆ ಪ್ರಧಾನಿ ಕಾರ್ಯಾಲಯದಿಂದ ಮಾಹಿತಿಯನ್ನೇ ನೀಡಿಲ್ಲ. ಆರ್ ಅಶೋಕ್‌ಗೆ ಪ್ರಧಾನಿ ಭೇಟಿಯ ಸರಿಯಾದ ಮಾಹಿತಿಯೇ ಇಲ್ಲ! ಪ್ರಧಾನಿ ಕಾರ್ಯಕ್ರಮಕ್ಕೆ ಯಾರನ್ನು ಕರೆದಿದ್ದಾರೆ ಅನ್ನೋ ಮಾಹಿತಿನೆ ಇಲ್ಲಿನ ಬಿಜೆಪಿ ನಾಯಕರಿಗೆ ಇಲ್ಲ ಎಂದು ಟಾಂಗ್ ನೀಡಿದರು.
ಸಿಎಂ, ಡಿಸಿಎಂ, ರಾಜ್ಯಪಾಲರು ಬರುವುದದು ಬೇಡವೆಂದು ಪ್ರಧಾನ ಮಂತ್ರಿ ಹೇಳುತ್ತಾರೆ. ಆದರೆ ಇಲ್ಲಿ ಶಿಷ್ಠಾಚಾರ ಪಾಲನೆ ಮಾಡಿಲ್ಲವೆಂದು ಅಶೋಕ್ ಹೇಳುತ್ತಿದ್ದಾರೆ. ಏನೋ ಪ್ರಚಾರಕ್ಕೆ ಮಾತಾಡಬೇಕು ಅಂತ ಮಾಧ್ಯಮದವರ ಮುಂದೆ ಸುಖಾಸುಮ್ಮನೆ ಮಾತನಾಡಿದ್ದಾರೆ ಅಷ್ಟೇ. ನಾವು ಕಾಂಗ್ರೆಸ್ ನವರು ಎಲ್ಲಾ ರೀತಿಯ ಪ್ರೋಟೊಕಾಲ್ ಪಾಲಿಸುತ್ತೇವೆ ಎಂದರು.
ಆಕ್ಸಿಜನ್ ದುರಂತದ ಸಂತ್ರಸ್ತರಿಗೆ ಚಾಮರಾಜನಗರ ಮೆಡಿಕಲ್ ಕಾಲೇಜಿನಲ್ಲೇ ಉದ್ಯೋಗ ನೀಡಲಾಗುವುದು. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವರು ಹಾಗು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಲಾಗಿದೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೊಂದಿಗು ಸಭೆ ಮಾಡಲಾಗಿದೆ. ಆಕ್ಸಿಜನ್ ದುರಂತದ ಬಗ್ಗೆ ಪರಿಶೀಲಿಸಲು ಸೂಚಿಸಲಾಗಿದೆ. ಸಂತ್ರಸ್ತರಿಗೆ ಸಹಾಯ ಹಾಗು ನ್ಯಾಯ ಒದಗಿಸುವುದು ಮುಖ್ಯಮಂತ್ರಿ ಗಳು ಹಾಗೂ ನನ್ನ ಆದ್ಯತೆಯಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.