Advertisement

ಕೋವಿಡ್ 19 ಸೋಂಕು ಪೀಡಿತರಿಗೆ ಉಚಿತ ಚಿಕಿತ್ಸೆ: ಡಿಸಿಎಂ ಸೂಚನೆ

01:50 AM Jul 18, 2020 | Hari Prasad |

ಬೆಂಗಳೂರು: ಸರಕಾರದಿಂದ ಶಿಫಾರಸಾದ ಕೋವಿಡ್ 19 ಸೋಂಕುಪೀಡಿತರಿಗೆ ಚಿಕಿತ್ಸೆ ಪೂರ್ಣ ಉಚಿತ ಎಂದು ಡಿಸಿಎಂ ಡಾ| ಅಶ್ವತ್ಥ ನಾರಾಯಣ ಸ್ಪಷ್ಟಪಡಿಸಿದ್ದಾರೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ 19 ಪೀಡಿತರಿಗೆ ಉಚಿತ ಚಿಕಿತ್ಸೆ ಒದಗಿಸುವ ಸಂಬಂಧ ವಿಕಾಸಸೌಧದಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೆ ತುರ್ತು ಸಭೆ ನಡೆಸಿದ ಅವರು, ದ.ಕ. ಜಿಲ್ಲಾಧಿಕಾರಿ ಸಿಂಧೂ ರೂಪೇಶ್‌ ಮತ್ತು ಇತರ ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದರು.

ಕೋವಿಡ್ 19 ಚಿಕಿತ್ಸೆಗೆ ಖಾಸಗಿಯಿರಲಿ, ಸರಕಾರಿ ಇರಲಿ; ರೋಗಿಗಳಿಂದ ಹಣ ಪಡೆಯುವಂತಿಲ್ಲ. ಮುಖ್ಯವಾಗಿ ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ರೋಗಿಗಳನ್ನು ಚಿಕಿತ್ಸೆ ಲಭ್ಯವಿರುವ ಆಸ್ಪತ್ರೆಗಳಿಗೆ ಕಳುಹಿಸಬೇಕು. ವಿನಾಕಾರಣ ಅಲೆದಾಡಿಸಬಾರದು. ಆಸ್ಪತ್ರೆಗೆ ಬರುವ ರೋಗಿಗಳಿಗೆ ತತ್‌ಕ್ಷಣ ಹಾಸಿಗೆ ಹಂಚಿಕೆಯಾಗಬೇಕು ಎಂದು ಸೂಚನೆ ನೀಡಿದರು.

ದ.ಕ. ಜಿಲ್ಲೆಯ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ ಮತ್ತು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಮ್ಲಜನಕ ಸೌಲಭ್ಯಯುಕ್ತ ಹಾಸಿಗೆಗಳ ಸಂಖ್ಯೆಯನ್ನು ಕೂಡಲೇ ಹೆಚ್ಚಿಸಬೇಕು ಎಂದು ಸೂಚಿಸಿದರು.

ವೆನ್ಲಾಕ್‌ ಆಸ್ಪತ್ರೆಯಲ್ಲಿ ಈಗಾಗಲೇ 150 ಹಾಸಿಗೆಗಳಿಗೆ ಆಮ್ಲಜನಕಯುಕ್ತ ವ್ಯವಸ್ಥೆ ಕಲ್ಪಿಸಿರುವ ಅಂಶವನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಇಷ್ಟು ಸಾಕಾಗುವುದಿಲ್ಲ. ಇದನ್ನು 450ಕ್ಕೆ ಹೆಚ್ಚಿಸಬೇಕು. ಈ ಸಂಬಂಧ ಪ್ರಸ್ತಾವನೆಯನ್ನು ಕೂಡಲೇ ಆರೋಗ್ಯ ಇಲಾಖೆ ಆಯುಕ್ತರಿಗೆ ಸಲ್ಲಿಸಿ. ಶೀಘ್ರವಾಗಿ ಮಂಜೂರಾತಿ ಕೊಡಿಸಲಾಗುವುದು. ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲೂ ಇಂತಹ ಹಾಸಿಗೆ ವ್ಯವಸ್ಥೆ ಕೂಡಲೇ ಆಗಬೇಕು ಎಂದು ಸೂಚನೆ ನೀಡಿದರು.

Advertisement

ಜಿಲ್ಲೆಯ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ 250 ಹಾಸಿಗೆಗಳು ಸಿದ್ಧವಾಗಿದ್ದು, ಕೆಲವೇ ದಿನಗಳಲ್ಲಿ 3,800 ಹಾಸಿಗೆಗಳು ಲಭ್ಯವಾಗಲಿವೆ ಎಂದು ಇದೇ ವೇಳೆ ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಡ್ಯಾಶ್‌ಬೋರ್ಡ್‌ ಸ್ಥಾಪನೆಗೆ ಸೂಚನೆ
ಕೋವಿಡ್ 19 ಸೋಂಕು ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಡ್ಯಾಶ್‌ಬೋರ್ಡ್‌ ವ್ಯವಸ್ಥೆಯನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು. ಯಾವುದೇ ವ್ಯಕ್ತಿಗೆ ಕೋವಿಡ್ 19 ಪಾಸಿಟಿವ್‌ ಕಂಡು ಬಂದರೆ ಜನರಿಗೆ ತಿಳಿಸಬೇಕು. ಆಗ ಜನರಲ್ಲಿ ಆತಂಕ, ಗೊಂದಲ ತಪ್ಪುತ್ತದೆ. ಹಾಗೆಯೇ ಕೋವಿಡೇತರ ರೋಗಿಗಳಿಗೂ ಆದ್ಯತೆ ಮೇರೆಗೆ ಚಿಕಿತ್ಸೆ ಸಿಗಬೇಕು. ಕೇಂದ್ರೀಕೃತ ಮಾಹಿತಿ ವ್ಯವಸ್ಥೆ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಸದ್ಯ 59 ಆ್ಯಂಬುಲೆನ್ಸ್‌ಗಳಿದ್ದು, ಮತ್ತಷ್ಟು ಆ್ಯಂಬುಲೆನ್ಸ್‌ ಖರೀದಿಸಬೇಕು. ಜತೆಗೆ ಹೆಚ್ಚುವರಿ ಚಾಲಕರನ್ನು ನೇಮಿಸಿಕೊಳ್ಳಬೇಕು. ಊಟ, ಔಷಧ, ಪಿಪಿಇ ಕಿಟ್‌ನ ಕೊರತೆಯಾಗದಂತೆ ಎಚ್ಚರ ವಹಿಸಬೇಕು. ಹೋಮ್‌ ಕೇರ್‌ ಬಗ್ಗೆಯೂ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಸೂಚಿಸಿದರು. ವಿಕಾಸ ಸೌಧದಲ್ಲಿ ನಡೆದ ಸಭೆಯಲ್ಲಿ ಶಾಸಕ ಹರೀಶ್‌ ಪೂಂಜ ಪಾಲ್ಗೊಂಡಿದ್ದರು. ಶಾಸಕರಾದ ಯು.ಟಿ. ಖಾದರ್‌, ವೇದವ್ಯಾಸ ಕಾಮತ್‌ ವೀಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು.

ಹಾಸಿಗೆ ಪಡೆಯಲು ಸೂಚನೆ
ಜಿಲ್ಲೆಯಲ್ಲಿ ಎಂಟು ವೈದ್ಯಕೀಯ ಕಾಲೇಜುಗಳು, ಸಾಕಷ್ಟು ಖಾಸಗಿ ಆಸ್ಪತ್ರೆಗಳಿವೆ. ವೈದ್ಯಕೀಯ ಕಾಲೇಜು, ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸಹಿತ ಕನಿಷ್ಠ 8,000ಕ್ಕೂ ಹೆಚ್ಚು ಹಾಸಿಗೆಗಳಿವೆ. ಕೂಡಲೇ ವೈದ್ಯಕೀಯ ಕಾಲೇಜು, ಖಾಸಗಿ ಆಸ್ಪತ್ರೆಗಳಿಂದ ಹಾಸಿಗೆಗಳನ್ನು ಸರಕಾರದ ವಶಕ್ಕೆ ಪಡೆಯಬೇಕು. ತತ್‌ಕ್ಷಣವೇ ಈ ಸಂಬಂಧ ಆಯಾ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿ ಒಪ್ಪಂದ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next