ಬೆಂಗಳೂರು: ಕೋವಿಡ್-19 ಪಿಡುಗು ನಿಯಂತ್ರಿಸಲು ನೆರವಾಗುವ ಹಾಗೂ ಸೋಂಕು ಸಂಕಷ್ಟದ ಸಂದರ್ಭದಲ್ಲಿ ಕರ್ನಾಟಕದ ಅನ್ವೇಷಣಾ ಸಾಮರ್ಥ್ಯ ಪ್ರತಿಬಿಂಬಿಸುವ 22 ಉತ್ಪನ್ನಗಳನ್ನು ಐಟಿ/ ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮಂತ್ರಿಯೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಬುಧವಾರ ಲೋಕಾರ್ಪಣೆಗೊಳಿಸಿದರು.
ಇಲಾಖೆಯ ಕರ್ನಾಟಕ ಅವಿಷ್ಕಾರ ಮತ್ತು ತಂತ್ರಜ್ಞಾನ ಸಂಸ್ಥೆಯ (KITS) ಆಶ್ರಯದಲ್ಲಿ ಬೆಂಗಳೂರು ಬಯೋ ಇನ್ನೊವೇಷನ್ ಸೆಂಟರ್ (ಬಿಬಿಸಿ- ಬೆಂಗಳೂರು ಜೈವಿಕ ಆವಿಷ್ಕಾರ ಕೇಂದ್ರ) ಮೇಲ್ವಿಚಾರಣೆಯಡಿ 6 ಉತ್ಪನ್ನಗಳು ಅಭಿವೃದ್ಧಿಗೊಂಡಿದ್ದರೆ, KITS ನ ಕರ್ನಾಟಕ ನವೋದ್ಯಮ ಕೋಶದ (ಕರ್ನಾಟಕ ಸ್ಟಾರ್ಟ್ ಅಪ್ ಸೆಲ್) ಮೇಲ್ವಿಚಾರಣೆಯಡಿ 16 ಉತ್ಪನ್ನಗಳು ಅಭಿವೃದ್ಧಿಗೊಂಡಿವೆ.
ಈ ಉತ್ಪನ್ನಗಳು ಬೆಂಗಳೂರಿನ ಮತ್ತು ಕರ್ನಾಟಕದ ಅನ್ವೇಷಣಾ ಸಾಮರ್ಥ್ಯವನ್ನು ಮತ್ತೊಮ್ಮೆ ಎತ್ತಿತೋರಿಸಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಡಿಸಿಎಂ ಅವರು, ಈ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದ ನವೋದ್ಯಮಗಳನ್ನು ಅಭಿನಂದಿಸಿದರು.
ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಬಿಬಿಸಿ ಛೇರ್ ಮ್ಯಾನ್ ಡಾ.ಇ.ವಿ.ರಮಣ ರೆಡ್ಡಿ, ಈ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದವರನ್ನು ಮುಂದಿನ ಹಂತದಲ್ಲಿ ಕರ್ನಾಟಕ ನವೋದ್ಯಮ ಕೋಶ ಹಾಗೂ ಬಿಬಿಸಿ ಮೂಲಕ ಸೂಕ್ತ ವ್ಯಾಪಾರ ಪಾಲುದಾರರೊಂದಿಗೆ ಸಂಪರ್ಕಿಸಲಾಗುವುದು ಎಂದರು.
ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಲಹೆಗಾರ್ತಿ ಮತ್ತು ರಾಷ್ಟ್ರೀಯ ವಿಜ್ಞಾನ ಹಾಗೂ ತಂತ್ರಜ್ಞಾನ ಉದ್ಯಮಶೀಲತಾ ಅಭಿವೃದ್ಧಿ ಆಯೋಗದ (NSTEDB) ಮುಖ್ಯಸ್ಥೆ ಡಾ.ಅನಿತಾ ಗುಪ್ತಾ, ಬಿಬಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಜಿತೇಂದ್ರ ಕುಮಾರ್, ರಾಜ್ಯದ ಎಲೆಕ್ಟ್ರಾನಿಕ್ಸ್, ಐಟಿ/ಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್ ಸಿ.ಎನ್. ಅವರು ಕಾರ್ಯಕ್ರಮದಲ್ಲಿ ಹಾಜರಿದ್ದು ಮಾತನಾಡಿದರು.
IIT-SINE ಜೊತೆ ಎಂಒಯು
ಇದೇ ಸಂದರ್ಭದಲ್ಲಿ ಮುಂಬೈನ IIT-SINE ಮತ್ತು ಬಿಬಿಸಿ ನಡುವೆ ಪರಸ್ಪರ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. IIT-SINEನ ಪ್ರೊ.ಸಂತೋಷ್ ಘರ್ ಪುರೆ ಅವರು ಈ ಸಂದರ್ಭದಲ್ಲಿ ಮಾತನಾಡಿ, ಹಣಕಾಸು ಸಂಪನ್ಮೂಲ ಕ್ರೋಡೀಕರಣ, ತಾಂತ್ರಿಕ ನೆರವಿನ ಮೂಲಕ ಬಿಬಿಸಿ ಯ ನವೋದ್ಯಮಗಳಿಗೆ ಈ ಒಪ್ಪಂದವು ನೆರವಾಗಲಿದೆ ಎಂದರು.
ಉತ್ಪನ್ನ ಆಯ್ಕೆ ಹೇಗೆ?
ಕರ್ನಾಟಕ ನವೋದ್ಯಮ ಕೋಶವು ‘ಕೋವಿಡ್-19 ಚಾಲೆಂಜ್’ ಶೀರ್ಷಿಕೆಯಡಿ ಅನ್ವೇಷಣಾಕಾರದಿಂದ ಅರ್ಜಿಗಳನ್ನು ಆಹ್ವಾನಿಸಿತ್ತು. ಇದಕ್ಕೆ 3 ಹಂತಗಳಲ್ಲಿ 356 ಅರ್ಜಿಗಳು ಬಂದಿದ್ದವು. ಉದ್ಯಮ ಸಂಘಟನೆಗಳು ನಿರ್ದೇಶನ ಮಾಡಿದ ಸ್ವತಂತ್ರ ಜ್ಯೂರಿಯು ಕ್ರಮಬದ್ಧ ಮೌಲ್ಯಮಾಪನ ನಡೆಸಿದೆ. ವಿನೂತನತೆ, ಸಂಶೋಧನೆಯ ಕಾಲಮಿತಿ, ತಯಾರಿಕಾ ಸಾಮರ್ಥ್ಯ, ತಂಡದ ಶಕ್ತಿ, ಪ್ರಮಾಣಪತ್ರ & ಅನುಪಾಲನೆಗಳು ಇತ್ಯಾದಿಗಳನ್ನು ಆಧರಿಸಿ ಈ 16 ಉತ್ಪನ್ನಗಳನ್ನು ಆಯ್ಕೆ ಮಾಡಲಾಗಿದೆ.