Advertisement

ಶಾಲೆ ತೆರೆಯಲು ಕಾಲ ಕೂಡಿ ಬರಬೇಕು: ಡಿಸಿಎಂ ಅಶ್ವಥ್ ನಾರಾಯಣ್

04:09 PM Jun 29, 2021 | keerthan |

ಮೈಸೂರು: ವಿದ್ಯಾರ್ಥಿಗಳಿಗೆ ಅವಕಾಶ ಸಿಗಬೇಕು ಎಂಬುದು ಹಲವರ ಅಭಿಪ್ರಾಯವಾಗಿದೆ. ಆದರೆ ಅದಕ್ಕೆ ಆದಂತಹ ಕಾಲ ಕೂಡಿ ಬರಬೇಕು. ಸೂಕ್ತವಾದ ಕಾಲ ಬರಬೇಕು ಎಂದು ಉಪಮುಖ್ಯಮಂತ್ರಿ  ಅಶ್ವಥ್ ನಾರಾಯಣ್ ಹೇಳಿದರು.

Advertisement

ಸುತ್ತೂರು ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳು ಶಾಲೆಗೆ ಹೋಗಬೇಕಾದಂತಹ ಪರಿಸ್ಥಿತಿ ನಿರ್ಮಾಣವಾದಾಗ ಎಲ್ಲರ ಸಲಹೆ ಪಡೆಯುತ್ತೇವೆ. ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಬೇರೆ ಬೇರೆ ಕ್ಷೇತ್ರಗಳ ತಜ್ಞರ ಸಲಹೆ ಪಡೆಯುತ್ತೇವೆ. ಸಮಾಜದ ಹಿತದೃಷ್ಟಿಯಿಂದ ಯಾವ ಕಾಲಕ್ಕೆ ಏನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ. ಜನರ ಕಲ್ಯಾಣಕ್ಕಾಗಿ ಸರ್ಕಾರ ಸೂಕ್ತ ರೀತಿಯಲ್ಲಿ ತೀರ್ಮಾನ ಮಾಡಲಿದೆ ಎಂದರು.

ನಾವು ಶಾಲೆಗಳನ್ನು ತೆರೆಯುತ್ತೇವೆ ಎಂದು ಎಲ್ಲೂ ಹೇಳಿಲ್ಲ. ಈ ದಿಕ್ಕಿನಲ್ಲಿ ಸಾಗಬೇಕೆಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ:ಶ್ಯಾಮಪ್ರಸಾದ ಮುಖರ್ಜಿ ಸ್ಮರಣಾರ್ಥ ಬಿಜೆಪಿಯಿಂದ 11 ಲಕ್ಷ ಸಸಿ ನೆಡುವ ಕಾರ್ಯಕ್ರಮ: ಡಿಸಿಎಂ

ಶ್ರೀಗಳ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಬಗ್ಗೆ ಚರ್ಚಿಸಲಾಯಿತು. ಜೊತೆಗೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಬಗ್ಗೆ ಶ್ರೀಗಳ ಸಹಕಾರ ಕೇಳಿದೆ. ಉತ್ತಮ ಭವಿಷ್ಯ ರೂಪಿಸಲು ಹಲವು ಸಲಹೆ ನೀಡಿದ್ದಾರೆ. ಶಿಕ್ಷಣಕ್ಕೆ ಸಂಬಂಧಿಸಿದ ಹಲವು ಸುಧಾರಣೆ, ಕೋವಿಡ್ ನಿಯಂತ್ರಣ ಕುರಿತು ಚರ್ಚಿಸಲಾಯಿತು. ಉತ್ತಮ ಆರೋಗ್ಯ ಸೇವೆ ಒದಗಿಸುವುದು ಶ್ರೀಗಳ ಇಚ್ಛೆಯಾಗಿದೆ. ಆಕ್ಸಿಜನ್ ಉತ್ಪಾದನೆ, ಐಸಿಯು ಸೇರಿದಂತೆ ಹಲವು ವಿಚಾರ ಚರ್ಚೆ ಮಾಡಲಾಯಿತು. ಗ್ರಾಮೀಣ ಮಟ್ಟದಲ್ಲಿ ಆರೋಗ್ಯ ಸೌಲಭ್ಯ ಕಲ್ಪಿಸಬೇಕೆಂಬ ಅಪೇಕ್ಷೆ ಶ್ರೀಗಳಿಗಿದೆ. ಸರ್ಕಾರ ಕೂಡ ಕೋವಿಡ್ ವಿಚಾರದಲ್ಲಿ ಹೆಚ್ಚಿನ ಕೆಲಸ ಮಾಡಿದೆ ಎಂದರು.

Advertisement

ಎಸ್‌ಎಸ್‌ಎಲ್ ಸಿ ಪರೀಕ್ಷೆ ಬಗ್ಗೆ ಕೆಲವರ ಆತಂಕ ವಿಚಾರವಾಗಿ ಮಾತನಾಡಿದ ಡಿಸಿಎಂ, ಈಗಲೇ ಏನು ಪರೀಕ್ಷೆ ನಡೆಯುತ್ತಿಲ್ಲವಲ್ಲಾ. ಜುಲೈನಲ್ಲಿ ಪರೀಕ್ಷೆಗಳು ನಡೆಯಲಿದೆ. ಈಗಾಗಲೇ ಕೋವಿಡ್ ನಿಯಂತ್ರಣಕ್ಕೆ ಬರುತ್ತಿದೆ. ಸೂಕ್ತವಾದ ಕಾಲ ಆಗಿರುವ ಕಾರಣ ಎಸ್‌ಎಸ್‌ಎಲ್ ಸಿ ಪರೀಕ್ಷೆಗೆ ನಿರ್ಧಾರವಾಗಿದೆ. ಎಲ್ಲದಕ್ಕೂ ಅವಕಾಶ ನೀಡಲಾಗುತ್ತಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಬೇರೆ ಬೇರೆ ತರಗತಿಗಳಿಗೆ ಹೋಗಬೇಕಾಗುತ್ತೆ. ಹಾಗಾಗಿ ಈಗ ಪರೀಕ್ಷೆ ನಡೆಸಲು ಸೂಕ್ತವಾಗಿದೆ ಎಂದು ಸಮರ್ಥನೆ ನೀಡಿದರು.

ಇದನ್ನೂ ಓದಿ: ರಾಜ್ಯದಲ್ಲಿ ಈಗಲೂ ಐದು ಲಕ್ಷ ಕೋವಿಡ್ ಲಸಿಕೆ ದಾಸ್ತಾನಿದೆ: ಸಚಿವ ಸುಧಾಕರ್

ಸುತ್ತೂರು ಮಠ ರಾಜಕಾರಣಿಗಳ ಕೇಂದ್ರವಾಗಿದೆ ಎಂಬ ಮಾತುಗಳ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲರೂ ಎಲ್ಲಾ ಕಾಲದಲ್ಲೂ ನಾಡಿನ ಸ್ವಾಮೀಜಿಗಳ ಸಂಪರ್ಕದಲ್ಲಿದ್ದಾರೆ. ಎಲ್ಲಾ ಪಕ್ಷಗಳ ನಾಯಕರೂ ಸುತ್ತೂರು ಶ್ರೀಗಳ ಜೊತೆ ಸಂಪರ್ಕ ಹೊಂದಿದ್ದಾರೆ. ಕ್ಷೇತ್ರಗಳಿಂದ ಬಂದು ಶ್ರೀಗಳ ಜೊತೆ ಚರ್ಚೆ ನಡೆಯುತ್ತಿದೆ. ಶ್ರೀಗಳ ಜೊತೆಗಿನ ಚರ್ಚೆಯಿಂದ ಮನಸ್ಸಿಗೆ ಸಮಾಧಾನ ಸಿಗಲಿದೆ. ನಾನು ಶಿಕ್ಷಣ ಕ್ಷೇತ್ರದ ಬಗ್ಗೆ ಚರ್ಚಿಸಲು ಆಗಮಿಸಿದ್ದೆ ಎಂದು ಡಿಸಿಎಂ ಅಶ್ವಥ್ ನಾರಾಯಣ ಹೇಳಿದರು.

ಅನ್ ಲಾಕ್ ಬಗ್ಗೆ ಸಿಎಂ ನಿರ್ಧಾರ: ಮತ್ತೊಂದು ಹಂತದ ಅನ್ ಲಾಕ್ ವಿಚಾರವಾಗಿ ಮಾತನಾಡಿದ ಡಿಸಿಎಂ ಜುಲೈ 5ರಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಯಲಿದೆ. ಅಂದು ಯಾವ ಯಾವ ಕ್ಷೇತ್ರಕ್ಕೆ ಅವಕಾಶ ಕೊಡಬೇಕೆಂಬ ಬಗ್ಗೆ ಚರ್ಚೆ ನಡೆಯಲಿದೆ. ಮುಂದೆ ಏನು ಮಾಡಬೇಕು ಎನ್ನುವ ಬಗ್ಗೆ ಚರ್ಚೆ ನಡೆಯಲಿದೆ. ಚಿತ್ರಮಂದಿರ ಸೇರಿದಂತೆ ಬೇರೆ ಕ್ಷೇತ್ರಗಳಿಗೆ ಅವಕಾಶ ನೀಡುವ ಬಗ್ಗೆ ಜುಲೈ 5ರಂದು ತೀರ್ಮಾನವಾಗಲಿದೆ. ತಜ್ಞರೆಲ್ಲರ ಸಲಹೆ ಪಡೆದ ಬಳಿಕ ಸಿಎಂ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next