Advertisement

2022-23 ವರ್ಷದಿಂದ ಕನ್ನಡದಲ್ಲಿ ವೃತ್ತಿ ಶಿಕ್ಷಣ ಕಲಿಕೆಗೆ ಅವಕಾಶ :  ಅಶ್ವತ್ಥನಾರಾಯಣ

08:31 PM Jul 18, 2021 | Team Udayavani |

ಬೆಂಗಳೂರು : 2022-23ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಉನ್ನತ ಶಿಕ್ಷಣ ವಿಭಾಗದಲ್ಲಿ ಎಂಜಿನಿಯರಿಂಗ್ ಸೇರಿ ಎಲ್ಲ ವೃತ್ತಿಪರ ಕೋರ್ಸುಗಳನ್ನು ಕನ್ನಡದಲ್ಲಿ ಕಲಿಯಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಈ ನಿಟ್ಟಿನಲ್ಲಿ ಎಂಜಿನಿಯರಿಂಗ್ ಕೋರ್ಸುಗಳ ಪಠ್ಯವನ್ನು ಕನ್ನಡಕ್ಕೆ ಭಾಷಾಂತರಿಸುವ ಕೆಲಸ ನಡೆದಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

Advertisement

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ನಂತರ ಮಾತೃಭಾಷೆಗೆ, ಅಂದರೆ ನಮ್ಮ ಕನ್ನಡಕ್ಕೆ ಇನ್ನೂ ಹೆಚ್ಚಿನ ಶಕ್ತಿ ಬರುತ್ತದೆ. ಅದರ ಬಗ್ಗೆ ಯಾವ ಗೊಂದಲ, ಅನುಮಾನವೂ ಬೇಡ ಎಂದು ಇದೇ ಸಂದರ್ಭದಲ್ಲಿ ಅವರು ಒತ್ತಿ ಹೇಳಿದರು.

ಇದನ್ನೂ ಓದಿ : ಮೂರನೇ ಅಲೆಯನ್ನು ನಿಭಾಯಿಸಲು ಸರ್ಕಾರ ಸರ್ವ ಸನ್ನದ್ಧ: ಕಂದಾಯ ಸಚಿವ ಆರ್ ಅಶೋಕ್ 

ಕರ್ನಾಟಕ ವಿಶ್ವವಿದ್ಯಾಲಯದ ಎಲ್ಲಾ ಭಾಷೆಗಳ ಅಧ್ಯಾಪಕರ ಸಂಘದವರ ವತಿಯಿಂದ ಆಯೋಜಿಸಲಾಗಿದ್ದ ʼಹೊಸ ಶಿಕ್ಷಣ ನೀತಿ; ಭಾರತೀಯ ಭಾಷೆಗಳ ಅಧ್ಯಯನʼ ವಿಷಯದ ಕುರಿತ ವೆಬಿನಾರ್ ನಲ್ಲಿ ಭಾಗವಹಿಸಿ ಡಿಸಿಎಂ ಮಾತನಾಡಿದರು.

ವೃತ್ತಿಪರ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡಬೇಕು ಎಂಬ ಅಂಶವೂ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿದೆ. ಹೊಸ ನೀತಿಯ ಪ್ರಮುಖ ಆಶಯವೂ ಇದಾಗಿದೆ. ಈ ನಿಟ್ಟಿನಲ್ಲಿ ಸರಕಾರ ಕನ್ನಡದಲ್ಲಿಯೇ ವೃತ್ತಿಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಅಗತ್ಯ ಪ್ರೋತ್ಸಾಹ ನೀಡಲಿದೆ. ತಾಂತ್ರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡವನ್ನು ಹೆಚ್ಚೆಚ್ಚು ಅಳವಡಿಸಲಾಗುವುದು ಎಂದು ಅವರು ತಿಳಿಸಿದರು.

Advertisement

ಈ ಕಲಿಕೆಯ ಪರಿಕಲ್ಪನೆ ಅದೆಷ್ಟು ಚೆನ್ನಾಗಿದೆ ಎಂದರೆ, ಹೊಸ ತಂತ್ರಜ್ಞಾನವನ್ನು ತಮ್ಮ ಭಾಷೆಯ ಆಧಾರದ ಮೇಲೆಯೇ ರೂಪಿಸಬಹುದು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲೂ ಕನ್ನಡವನ್ನು ಬಳಸಬಹುದು. ತಂತ್ರಜ್ಞಾನ ಮತ್ತು ಆವಿಷ್ಕಾರ ಬೆಳೆದಂತೆಲ್ಲ ಅದಕ್ಕೆ ಸಮಾನಾಂತರವಾಗಿ ಕನ್ನಡವೂ ಬೆಳೆಯಬೇಕು. ಮಾತೃಭಾಷೆಯ ಅಸ್ತಿತ್ವ ಎಲ್ಲ ಕಡೆಯೂ ಇರಬೇಕು ಎಂಬುದು ಸರಕಾರದ ಉದ್ದೇಶವಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ಶಿಕ್ಷಣ ನೀತಿಯ ಪ್ರಕಾರ ಮಕ್ಕಳು ಎರಡು ದೇಶಿಯ ಭಾಷೆಗಳನ್ನು ಹಾಗೂ ಒಂದು ಅಂತಾರಾಷ್ಟ್ರೀಯ ಭಾಷೆಯನ್ನು ಕಡ್ಡಾಯವಾಗಿ ಕಲಿಯಲೇಬೇಕು. ಅದರಲ್ಲಿ ಮಾತೃಭಾಷೆಗೆ ಮೊದಲ ಪ್ರಾಶಸ್ತ್ಯ ಇರುತ್ತದೆ. ಮೊದಲು ನಮ್ಮ ಭಾಷೆ, ನಂತರ ಅನ್ಯಭಾಷೆ. ಈ ಬಗ್ಗೆ ಯಾವುದೇ ಗೊಂದಲ ಬೇಡ. ಅಲ್ಲದೆ, ಯಾವುದೇ ಕೋರ್ಸುಗಳನ್ನು ಯಾರೋ ರೂಪಿಸಿ ನಮ್ಮ ಮೇಲೆ ಹೇರುತ್ತಾರೆಂಬ ಅನುಮಾನ ಬೇಡ. ಎಲ್ಲವನ್ನೂ ರೂಪಿಸುವುದು ಆಯಾ ವಿಶ್ವವಿದ್ಯಾಲಯಗಳು ಮತ್ತು ಆಯಾ ವಿಷಯಗಳಲ್ಲಿ ತಜ್ಞರಾಗಿರುವ ನಮ್ಮವರೇ ಪ್ರಾಧ್ಯಾಪಕರು ಎಂದು ಡಿಸಿಎಂ ಹೇಳಿದರು.

ಮುಂದಿನ ದಿನಗಳಲ್ಲಿ ಪ್ರತಿಯೊಂದು ಶಿಕ್ಷಣ ಸಂಸ್ಥೆಗೂ ಸ್ವಾಯತ್ತತೆ ಕೊಟ್ಟು ಸಬಲೀಕರಣ ಮಾಡಲಾಗುವುದು. ಆಡಳಿತಾತ್ಮಕ, ಶೈಕ್ಷಣಿಕ, ಆರ್ಥಿಕ ನಿರ್ಧಾರಗಳನ್ನು ಕೈಗೊಳ್ಳುವ ಎಲ್ಲ ಅಧಿಕಾರಗಳನ್ನು ಕೂಡ ಶಿಕ್ಷಣ ಸಂಸ್ಥೆಗಳಿಗೇ ಕೊಡಲಾಗುವುದು. ಈ ಮೂಲಕ ಶಿಕ್ಷಣ ಸಾಂಸ್ಥಿಕ ನೆಲೆಗಟ್ಟಿನಲ್ಲಿ ಸ್ಥಿರವಾಗಿ ಬೆಳವಣಿಗೆ ಹೊಂದಲಿದೆ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.

ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡರು, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಮಿತಿ ಸದಸ್ಯರಾಗಿದ್ದ ಪ್ರೊ.ಟಿ.ವಿ.ಕಟ್ಟಿಮನಿ ಮುಂತಾದವರು ಈ ವೆಬಿನಾರ್ ನಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ : 3.5 ಲಕ್ಷ ರೂ. ವೆಚ್ಚದಲ್ಲಿ ಅಗತ್ಯ ವಸ್ತುಗಳ ಕಿಟ್‌ ಹಾಗೂ ಆರ್ಥಿಕ ನೆರವು ವಿತರಣಾ ಕಾರ್ಯಕ್ರಮ

Advertisement

Udayavani is now on Telegram. Click here to join our channel and stay updated with the latest news.

Next