Advertisement

ಕೋವಿಡ್ ಭೀತಿ ಮಧ್ಯೆ ಸಿಇಟಿ ಪರೀಕ್ಷೆ: ಪರೀಕ್ಷಾ ಕೇಂದ್ರಗಳನ್ನು ಪರಿಶೀಲಿಸಿದ ಡಿಸಿಎಂ

03:50 PM Jul 30, 2020 | keerthan |

ಬೆಂಗಳೂರು: ಕೋವಿಡ್ ಸೋಂಕು ಭೀತಿ ಮಧ್ಯೆ ರಾಜ್ಯಾದ್ಯಂತ ಸಿಇಟಿ ಪರೀಕ್ಷೆ ಇಂದು ಆರಂಭವಾಗಿದ್ದು, ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್ . ಅಶ್ವತ್ಥನಾರಾಯಣ, ಬೆಂಗಳೂರಿನ ಎರಡು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಕೋವಿಡ್-19 ಹಿನ್ನೆಲೆಯಲ್ಲಿ ಕೈಗೊಂಡಿರುವ ಎಲ್ಲ ಎಚ್ಚರಿಕೆ ಕ್ರಮಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದರು.

Advertisement

ಮಲ್ಲೇಶ್ವರದ ಎಂಇಎಸ್ ಕಾಲೇಜು ಹಾಗೂ ಶೇಷಾದ್ರಿಪುರಂ ಕಾಂಪೋಸಿಟ್ ಪಿಯು ಕಾಲೇಜಿಗೆ ಭೇಟಿ ನೀಡಿದ ಅವರು, ಸ್ಯಾನಿಟೈಸರ್ ಹಾಕುವುದು, ಥರ್ಮೊಮೀಟರ್ ಇಟ್ಟು ಪರಿಶೀಲಿಸುವ ವ್ಯವಸ್ಥೆ ಪರಿಶೀಲನೆ ನಡೆಸಿದರು. ಸಾರಿಗೆ, ಆರೋಗ್ಯ, ಪೊಲೀಸ್ ಮತ್ತು ಉನ್ನತ ಶಿಕ್ಷಣ ಇಲಾಖೆಗಳೆಲ್ಲ ಸೇರಿ ಕೈಗೊಂಡಿರುವ ಕ್ರಮಗಳ ಬಗ್ಗೆ ಡಿಸಿಎಂ ಮೆಚ್ವುಗೆ ವ್ಯಕ್ತಪಡಿಸಿದರು.

ಜತೆಗೆ, ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರಲ್ಲದೆ ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ಬರಲು ಏನಾದರೂ ಸಮಸ್ಯೆ ಆಯತೇ? ಬಸ್ ವ್ಯವಸ್ಥೆ ಇತ್ತೆ? ಪರೀಕ್ಷಾ ಕೇಂದ್ರದಲ್ಲಿ ಎಲ್ಲ ರೀತಿಯ ಮಾರ್ಗದರ್ಶನ ಸಿಕ್ಕಿತೆ? ಎಂಬಿತ್ಯಾದಿ ಸಂಗತಿಗಳ ಬಗ್ಗೆ ಮಾಹಿತಿ ಪಡೆದರು.

ಕೋವಿಡ್-19 ಹಿನ್ನೆಲೆ ಹಾಗೂ ಹೈಕೋರ್ಟ್ ನೀಡಿರುವ ಸೂಚನೆಯ ಅನುಸಾರ ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಮಾಸ್ಕ್ ಕಡ್ಡಾಯ, ಸ್ಯಾನಿಟೈಸರ್ ಬಳಕೆ, ದೈಹಿಕ ಅಂತರ ಇತ್ಯಾದಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ. ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳನ್ನು ಕೂರಿಸಲಾಗಿದೆ. ಪಾಸಿಟಿವ್ ಬಂದಿರುವ ವಿದ್ಯಾರ್ಥಿಗಳಿಗೆ ಸಂಪೂರ್ಣ ಪ್ರತ್ಯೇಕ ಕೊಠಡಿಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಸರಕಾರದಿಂದ ಮಾಡಲಾಗಿರುವ ವ್ಯವಸ್ಥೆಗಳಲ್ಲಿ ಎಲ್ಲೂ ಲೋಪವಾಗಿಲ್ಲ. ವಿದ್ಯಾರ್ಥಿಗಳು ಸಂತೋಷದಿಂದ ಪರೀಕ್ಷೆ ಬರೆಯುತ್ತಿದ್ದಾರೆಂದು ಡಿಸಿಎಂ ಮಾಹಿತಿ ನೀಡಿದರು.

ರಾಜ್ಯಾದ್ಯಂತ 1,94,356 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಒಟ್ಟು 497 ಕೇಂದ್ರಗಳಿವೆ. ಬೆಂಗಳೂರು ನಗರದಲ್ಲಿ 83 ಕೇಂದ್ರಗಳಲ್ಲಿ, 40,200 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಬಂದಿರುವ 40 ವಿದ್ಯಾರ್ಥಿಗಳು ಇದ್ದಾರೆ. ಇವರನ್ನು ಅವರಿದ್ದ ಸ್ಥಳದಿಂದಲೇ ಆಂಬುಲೆನ್ಸ್ ನಲ್ಲಿ ಕರೆತರಲಾಗಿದೆ. ಮತ್ತೆ ಅವರನ್ನು ನಮ್ಮ ಸಿಬ್ಬಂದಿಯೇ ವಾಪಸ್ ಬಿಡುವರು. ಕೋವಿಡ್‌ ಹಿನ್ನೆಲೆಯಲ್ಲಿ 30 ಸಾವಿರ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಬದಲಿಸಿಕೊಂಡಿದ್ದಾರೆ. ಹೀಗಾಗಿ ಯಾವುದೇ ಸಮಸ್ಯೆ ಆಗಿಲ್ಲ ಎಂದು ಉಪ ಮುಖ್ಯಮಂತ್ರಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next