ಬೆಂಗಳೂರು: ರಾಜ್ಯದಲ್ಲಿ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಸೃಷ್ಟಿ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಿಸಲು ಮುಂದಿನ ದಿನಗಳಲ್ಲಿ ಶಾಲಾ-ಕಾಲೇಜು ಪಠ್ಯದಲ್ಲಿಯೇ ಕೌಶಲ್ಯ ತರಬೇತಿ ವಿಷಯವನ್ನು ಸೇರಿಸಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಬೆಂಗಳೂರಿನ ಮಲ್ಲೇಶ್ವರದ ಒಳಾಂಗಣ ಕ್ರೀಡಾಂಗಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ನಾರಾಯಣ ತರಬೇತಿ ಸಂಸ್ಥೆಗಳ ಸಹಯೋಗದಲ್ಲಿ ಆರಂಭಿಸಿರುವ ಮಲ್ಲೇಶ್ವರಂ ಕೌಶಲ್ಯ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕೌಶಲ್ಯಕ್ಕೆ ತಕ್ಕಂತೆ ಉದ್ಯೋಗ ಲಭ್ಯತೆಯೂ ಅತಿ ಅವ್ಯಶಕವಾಗಿದೆ. ಈ ನಿಟ್ಟಿನಲ್ಲಿ ಕೈಗಾರಿಕೆಗಳಿಗೆ ಅಗತ್ಯವಿರುವ ಕೌಶಲ್ಯತೆಯನ್ನು ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಾಂಕ್ಷಿಗಳಿಗೆ ನೀಡಲು ತರಬೇತಿ ಹಮ್ಮಿಕೊಳ್ಳಲಾಗುವುದು ಎಂದರು.
ನಿರುದ್ಯೋಗ ನಿವಾರಣೆ ಹಾಗೂ ಓದಿಗೆ ತಕ್ಕಂತೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಪಠ್ಯದಲ್ಲೇ ಕೌಶಲ್ಯಕ್ಕೆ ಸಂಬಂಧಿಸಿದ ವಿಷಯವನ್ನು ಅಡಕಗೊಳಿಸಲು ಮುಂದಾಗಿದೆ. ಶಿಕ್ಷಣದ ಹಂತದಲ್ಲೇ ಅಗತ್ಯವಾದ ಕುಶಲತೆಯನ್ನು ಹೊಂದಬೇಕಾಗುತ್ತದೆ. ಉದ್ಯೋಗದ ನಂತರ ಅದನ್ನು ಯಾರೂ ಹೇಳಿಕೊಡುವ ಸನ್ನಿವೇಶ ಇರುವುದಿಲ್ಲ ಎಂದು ಹೇಳಿದರು.
ಕೋವಿಡ್ ನಿಂದಾಗಿ ಉದ್ಯಮಗಳ ನಷ್ಟದಿಂದ ಅನೇಕ ಮಂದಿ ನಿರುದ್ಯೋಗಿಗಳಾಗುತ್ತಿದ್ದಾರೆ.ಕೋವಿಡ್ ನಂತರ ಉಂಟಾಗಿರುವ ಉದ್ಯೋಗ ನಷ್ಟವನ್ನು ಸರ್ಕಾರ ಸರಿಪಡಿಸಲಿದೆ. ಔದ್ಯೋಗಿಕವಾಗಿ ಆಕಾಂಕ್ಷಿಗಳಿಗೆ ಸಹಾಯವಾಗುವ ಹಲವು ಯೋಜನೆಗಳನ್ನು ಹಮ್ಮಿಕೊಂಡಿವೆ. ಕೋವಿಡ್‌ನಿಂದ ಸಂಕಷ್ಟಕ್ಕೆ ತುತ್ತಾಗಿ ಉದ್ಯೋಗ ವಂಚಿತರಾದ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಯುವಕ- ಯುವತಿಯರಿಗೆ ಕೌಶಲ್ಯ ತರಬೇತಿ ನೀಡುವ ಸಲುವಾಗಿ ಮಲ್ಲೇಶ್ವರಂ ಕೌಶಲ್ಯ ಕೇಂದ್ರ ಆರಂಭಿಸಲಾಗಿದೆ ಎಂದರು.
ಬ್ಯಾಂಕಿಂಗ್, ಹಣಕಾಸು ಸೇವೆ, ವಿಮಾ ಸೇವೆ, ಲೆಕ್ಕ ನಿರ್ವಹಣೆ, ಐಟಿ ಸೆಕ್ಯೂರಿಟಿ ವಿಶ್ಲೇಷಣೆ ಸೇರಿದಂತೆ ಹಲವು ಉಪಯುಕ್ತ ವಿಭಾಗಗಳಲ್ಲಿ ದಿನಕ್ಕೆ ಎರಡು ಬ್ಯಾಚ್‌ಗಳ ತರಬೇತಿ ನೀಡಲಾಗುವುದು ಎಂದು ವಿವರಿಸಿದರು. ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ರಾಜು ಸೇರಿದಂತೆ ಪಾಲಿಕೆ ಸದಸ್ಯರು ಹಾಗು ಅಧಿಕಾರಿಗಳು ಇದ್ದರು.