ಮಂಡ್ಯ: ಎಂಡಿಸಿಸಿ ಬ್ಯಾಂಕ್ ಕಳೆದ 5 ವರ್ಷಗಳಿಂದ ಸತತವಾಗಿ ಲಾಭ ಗಳಿಸುತ್ತಿದ್ದು, 2021-22ನೇ ಸಾಲಿನಲ್ಲಿ 4.51 ಕೋಟಿ ರೂ. ಲಾಭಗಳಿಸಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಪಿ.ಉಮೇಶ್ ಶ್ಲಾಘಿಸಿದರು. ನಗರದ ಹೊಳಲು ರಸ್ತೆಯ ಎ ಅಂಡ್ ಎ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ 2021-22ನೇ ಸಾಲಿನ 61ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶೇ.97.71 ಸಾಲ ವಸೂಲಾತಿ: ಬ್ಯಾಂಕ್ ಕೃಷಿ ಸಾಲ ವಸೂಲಾತಿಯಲ್ಲಿ ಶೇ.96.88 ಹಾಗೂ ಕೃಷಿಯೇತರ ಸಾಲಗಳಲ್ಲಿ ಶೇ.98.65ರಂತೆ ಒಟ್ಟಾರೆ ಶೇ.97.71 ವಸೂಲಾತಿಯಲ್ಲಿ ಪ್ರಗತಿ ಸಾಧಿ ಸಿದೆ. ಗ್ರಾಮೀಣ ಪ್ರದೇಶದ ರೈತರಿಗೆ ಬ್ಯಾಂಕಿಂಗ್ ವ್ಯವಹಾರ ಉತ್ತೇಜಿಸುವ ದೃಷ್ಟಿಯಿಂದ ಬ್ಯಾಂಕಿನ ವಹಿವಾಟನ್ನು ಆಧರಿಸಿ ಡಿಸಿಸಿ ಬ್ಯಾಂಕ್ 10 ನೂತನ ಗ್ರಾಮಾಂತರ ಶಾಖೆ ತೆರೆಯಲು ಸಹಕಾರ ಸಂಘಗಳ ನಿಬಂಧಕರು ಅನುಮತಿ ನೀಡಿದ್ದಾರೆ ಎಂದು ವಿವರಿಸಿದರು.
19 ಶಾಖೆ ತೆರೆಯಲು ಕ್ರಮ: ನೂತನ ಶಾಖೆಗಳನ್ನು ಪ್ರಾರಂಭಿಸಲು ಬ್ಯಾಂಕ್ ನಿರ್ಧರಿಸಿದೆ. ಇದಲ್ಲದೆ 19 ಶಾಖೆ ತೆರೆಯುವ ಸಂಬಂಧ ಸಹಕಾರ ಸಂಘಗಳ ನಿಬಂಧಕರ ಅನುಮತಿಗಾಗಿ ಪತ್ರ ಬರೆಯಲಾಗಿದೆ. ಈ ಮೂಲಕ ಬ್ಯಾಂಕಿನ ಆರ್ಥಿಕ ವ್ಯವಹಾರ ಹೆಚ್ಚಿಸಲು ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿಗಳ ಆತ್ಮ ನಿರ್ಭರ ಯೋಜನೆಯಡಿ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಮಂಡ್ಯ ಜಿಲ್ಲೆಯ ರೈತಾಪಿ ವರ್ಗದವರಿಗೆ ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆ ಘಟಕ ಸ್ಥಾಪನೆ ದೇಶಕ್ಕಾಗಿ ಬ್ಯಾಂಕಿನ ವತಿಯಿಂದ ಸಾಲ ಸೌಲಭ್ಯ ಒದಗಿಸುವ ಯೋಜನೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
826.76 ಕೋಟಿ ರೂ.ಸಾಲ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕೃಷಿ ಅಲ್ಪಾವಧಿ ಬೆಳೆ ಸಾಲವನ್ನು 3 ಲಕ್ಷ ರೂ.ಗಳ ಮಿತಿಗೊಳಪಟ್ಟು ಶೂನ್ಯ ಬಡ್ಡಿದರದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರ ಸದಸ್ಯರಿಗೆ ವಿತರಿಸುತ್ತಿದೆ. 2021-22 ನೇ ಸಾಲಿನಲ್ಲಿ 139872 ರೈತ ಸದಸ್ಯರಿಗೆ 826.76 ಕೋಟಿ ರೂ.ಸಾಲ ಸೌಲಭ್ಯ ಒದಗಿಸಲಾಗಿದೆ. 2022-23ನೇ ಸಾಲಿಗೆ ಯೋಜನೆ ಮುಂದುವರಿಸಿದ್ದು 1004.00 ಕೋಟಿ ರೂ. ಕೃಷಿ ಅಲ್ಪಾವ ಧಿ ಬೆಳೆ ಸಾಲ ವಿತರಿಸಲು ಯೋಜಿಸಲಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಚ್.ಕೆ.ಅಶೋಕ, ಆಡಳಿತ ಮಂಡ ಳಿಯ ನಿರ್ದೇಶಕರಾದ ಗುರುಸ್ವಾಮಿ, ಅಮರಾವತಿ ಸಿ.ಅಶ್ವಥ್, ಕೆ.ಸಿ.ಜೋಗಿಗೌಡ, ಪಿ.ಎಸ್. ಚಂದ್ರಶೇಖರ್, ಎಚ್.ಎಸ್.ನರಸಿಂಹಯ್ಯ, ಪಿ.ಸಂದರ್ಶ, ಕೆ.ವಿ. ದಿನೇಶ್, ಎಚ್.ಸಿ.ಕಾಳೇಗೌಡ, ಪಿ.ಚೆಲುವರಾಜು, ಎಚ್.ಅಶೋಕ, ವೃತ್ತಿಪರ ನಿರ್ದೇಶಕರಾದ ಕೆ.ಎ.ಚಂದ್ರ ಶೇಖರ, ಎಚ್.ವಿ.ಅಶ್ವಿನ್ ಕುಮಾರ್, ಸಹಕಾರ ಸಂಘ ಗಳ ಉಪ ನಿಬಂಧಕ ಜೆ.ವಿಕ್ರಮರಾಜ ಅರಸ್, ಪ್ರಭಾರ ಪ್ರಧಾನ ವ್ಯವಸ್ಥಾಪಕಿ ಆರ್.ಜೆ.ರೂಪಾಶ್ರೀ ಮತ್ತಿತರರು ಉಪಸ್ಥಿತರಿದ್ದರು.
ಕೃಷಿಯೇತರ ಸಾಲ ವಿತರಣೆ : ಬ್ಯಾಂಕಿನಿಂದ ಕೃಷಿಯೇತರ ಸಾಲಗಳಾದ ವಾಹನ ಸಾಲ, ಆಭರಣ ಸಾಲ, ಮನೆ ನಿರ್ಮಾಣ, ಸ್ಥಿರಾಸ್ತಿ ಒತ್ತೆ ಸಾಲ, ಪಿಎಂ ಸ್ವನಿಧಿ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ಸಾಲ ಮತ್ತು ಕ್ಷೀರ ಸಮೃದ್ಧಿ ಸಾಲ ವಿತರಿಸಲಾಗುತ್ತಿದೆ. ಸಾರ್ವಜನಿಕರಿಗೆ ಬ್ಯಾಂಕ್ ತ್ವರಿತವಾಗಿ ಸೇವಾ ಸೌಲಭ್ಯ ನೀಡುವ ನಿಟ್ಟಿನಲ್ಲಿ ವಾಣಿಜ್ಯ ಬ್ಯಾಂಕುಗಳ ಮತ್ತು ಗ್ರಾಮೀಣ ಬ್ಯಾಂಕುಗಳ ನಡುವೆ ಪೈಪೋಟಿ ನೀಡಿ ರಾಜ್ಯದಲ್ಲಿ ಅತ್ಯುತ್ತಮ ಸಹಕಾರಿ ಬ್ಯಾಂಕ್ ಆಗಿ ಡಿಸಿಸಿ ಬ್ಯಾಂಕ್ ಕೆಲಸ ನಿರ್ವಹಿಸುತ್ತಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಪಿ.ಉಮೇಶ್ ಹೇಳಿದರು.