Advertisement
ರೈತರು ಯಾವುದೇ ಆತಂಕ ಪಡದೇ ಸಹಕರಿಸಬೇಕೆಂದು ಕಲಬುರಗಿ-ಯಾದಗಿರಿ ಸಹಕಾರ ಬ್ಯಾಂಕ್ (ಡಿಸಿಸಿ)ನ ನಿರ್ದೇಶಕ ಕೇದಾರಲಿಂಗಯ್ಯ ಹಿರೇಮಠ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಮಾಡಿರುವ 50 ಸಾವಿರ ರೂ. ವರೆಗಿನ ಸಾಲ ಮನ್ನಾದಲ್ಲಿ ಡಿಸಿಸಿ ಬ್ಯಾಂಕ್‌ಗೆ ಒಟ್ಟು 307 ಕೋಟಿ ರೂ. ಮಂಜೂರಾಗಿದೆ. ಇದರಲ್ಲಿ 50 ಕೋಟಿ ರೂ. ಸಾಲದ ಹಣ ಮತ್ತು 50 ಕೋಟಿ ರೂ. ಬಡ್ಡಿ ಹಣ ಸೇರಿದಂತೆ 100 ಕೋಟಿ ರೂ. ಬಾಕಿ ಇದೆ. ಈ ಕುರಿತು ಬೆಂಗಳೂರಿಗೆ ನಿಯೋಗ ಸಮೇತ ತೆರಳಿ ಸೋಮವಾರ ಮುಖ್ಯಮಂತ್ರಿ, ಸಹಕಾರ ಸಚಿವರನ್ನು ಭೇಟಿ ಮಾಡಿ ಬಾಕಿ ಹಣ ಬಿಡುಗಡೆಗೆ ಮನವಿ ಮಡಲಾಗುವುದು ಎಂದು ತಿಳಿಸಿದರು.
ರೈತರಿಗೆ ಸಾಲ ಮನ್ನಾ ಹಣ ವಿತರಿಸಲು ವಿಳಂಬವಾಗುತ್ತಿದೆ ಎಂದರು. ಬ್ಯಾಂಕ್‌ನ ಎದುರು ರೈತರು ಪ್ರತಿಭಟನೆ ನಡೆಸುವುದು ನ್ಯಾಯಯುತವಾಗಿದೆ. ಆದರೆ, ಡಿಸಿಸಿ ಬ್ಯಾಂಕ್‌ನಲ್ಲಿ ಯಾವುದೇ ರೀತಿಯ ಅವ್ಯವಹಾರವಾಗಿಲ್ಲ. ಹೀಗಾಗಿ ರೈತರು ಆತಂಕಕ್ಕೆ ಈಡಾಗುವುದು ಬೇಡ ಎಂದು ಸ್ಪಷ್ಟಪಡಿಸಿದರು. ಪ್ರಭಾವಿಗಳಿಂದ ಸಾಲ ಬಾಕಿ: ಡಿಸಿಸಿ ಬ್ಯಾಂಕ್‌ನಿಂದ ಪಂಪ್ ಸೆಟ್, ಟ್ರ್ಯಕ್ಟರ್ ಸೇರಿದಂತೆ ಕೃಷಿ ಯಂತ್ರೋಪಕರಣಗಳಿಗೆ ರೈತರು ಪಡೆದ ಸಾಲದಲ್ಲಿ 120 ಕೋಟಿ ರೂ. ಮರು ಪಾವತಿ ಆಗಬೇಕಿದೆ. ಇದರಲ್ಲಿ ಪ್ರಭಾವಿ ರಾಜಕಾರಣಿಗಳೇ ಹೆಚ್ಚಾಗಿರುವುದಿಂದ ಸಾಲ ಮರು ಪಾವತಿಸುತ್ತಿಲ್ಲ. ಅಂತಹವರನ್ನು ಸುಸ್ತಿಗಾರರೆಂದು ಪರಿಗಣಿಸಲು ತೀರ್ಮಾನಿಸಲಾಗಿದ್ದು, ಈ ಕುರಿತು ಶೀಘ್ರವೇ ಚರ್ಚೆ ನಡೆಸಿ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. ಜೇವರ್ಗಿ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಎಸ್. ಕೋಬಾಳ ಹಾಜರಿದ್ದರು.