Advertisement

ಡಿಸಿಸಿ ಬ್ಯಾಂಕ್‌ಗೆ ಇತಿಹಾಸದಲ್ಲೇ ಅತಿ ಹೆಚ್ಚು ಲಾಭ

04:11 PM Apr 17, 2022 | Niyatha Bhat |

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಬ್ಯಾಂಕಿನ ಇತಿಹಾಸದಲ್ಲೇ ಅತಿ ಹೆಚ್ಚು ಲಾಭ ಗಳಿಸಿದ್ದು, 2021-22ನೇ ಸಾಲಿಗೆ 23.26 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಠೇವಣಿ ಮೊತ್ತ ಕೂಡ ಹೆಚ್ಚಾಗಿದ್ದು, 2022ರ ಮಾರ್ಚ್‌ ಅಂತ್ಯಕ್ಕೆ 1244.36 ಕೋಟಿ ರೂ.ಗಳ ಠೇವಣಿ ಸಂಗ್ರಹವಾಗಿದೆ. ಇದು ಕೂಡ ದಾಖಲೆಯಾಗಿದೆ. ಎನ್‌.ಪಿ.ಎ. ಪ್ರಮಾಣ ಕಡಿಮೆಯಾಗಿರುವುದು ಕೂಡ ಸ್ವಾಗತದ ವಿಷಯ. ಈ ಹಿಂದೆ ಎನ್‌.ಪಿ.ಎ. ಪ್ರಮಾಣ ಶೇ.5ರಷ್ಟು ನಿಗದಿಯಿದೆ. ಅದು ಈಗ 4.21ಕ್ಕೆ ಇಳಿದಿದೆ. ಬ್ಯಾಂಕ್‌ 2517.36 ಕೋಟಿ ವಾರ್ಷಿಕ ವಹಿವಾಟು ನಡೆಸುತ್ತಿದೆ. 89945 ರೈತರಿಗೆ 976.33 ಕೋಟಿ ಬೆಳೆ ಸಾಲ ನೀಡಲಾಗಿದೆ. ಸಾಲ ವಸೂಲಾತಿ ಪ್ರಮಾಣ ಕೂಡ ಶೇ. 99.32ರಷ್ಟಿದೆ. 387 ರೈತರಿಗೆ 40.43 ಕೋಟಿ ಮಧ್ಯಮಾವಧಿ ಸಾಲ ನೀಡಲಾಗಿದೆ ಎಂದರು.

ಬ್ಯಾಂಕಿನಿಂದ 2823 ಸ್ವ-ಸಹಾಯ ಗುಂಪುಗಳಿಗೆ 84.65 ಕೋಟಿ ರೂ. ಸಾಲ ನೀಡಲಾಗಿದೆ. ಸರ್ಕಾರದ ಕಾಯಕ ಯೋಜನೆಯಡಿ 10 ಲಕ್ಷಗಳವರೆಗೆ ಸಾಲ ನೀಡುತ್ತಿದ್ದು, 44 ಮಹಿಳಾ ಗುಂಪುಗಳಿಗೆ 3.21 ಕೋಟಿ ರೂ. ಸಾಲ ನೀಡಲಾಗಿದೆ. 2019-20ರ ಸಾಲಿಗೆ ನಬಾರ್ಡ್‌ ಪರಿವೀಕ್ಷಣೆ ವರದಿಯಲ್ಲಿ ಬ್ಯಾಂಕಿಗೆ ಎ- ದರ್ಜೆ ಪ್ರಮಾಣ ಪತ್ರ ಕೂಡ ನೀಡಿರುವುದು ಬ್ಯಾಂಕಿನ ಹೆಮ್ಮೆಯಾಗಿದೆ ಎಂದರು.

ಬ್ಯಾಂಕ್‌ ಕೃಷಿಯೇತರ ಸಾಲವಾಗಿ 286.12 ಕೋಟಿ ಸಾಲ ನೀಡಲಾಗಿದೆ. ಕೇಂದ್ರ ಸರ್ಕಾರದ ಯೋಜನೆಯಡಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಶೂನ್ಯ ಬಡ್ಡಿದರದಲ್ಲಿ 1313 ಸದಸ್ಯರಿಗೆ 204.26 ಲಕ್ಷ ಸಾಲ ವಿತರಣೆ ಮಾಡಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಹುಸೇವಾ ಕೇಂದ್ರಗಳನ್ನಾಗಿ ಮಾರ್ಪಡಿಸಿ 38 ಸಹಕಾರ ಸಂಘಗಳಿಗೆ 21.45 ಕೋಟಿ ರೂ. ಗಳನ್ನು ಮೂಲ ಸೌಕರ್ಯ ನಿಧಿಗೆ ನೀಡುವಂತೆ ನಬಾರ್ಡ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಹೀಗೆ ಬ್ಯಾಂಕ್‌ ವರ್ಷದಿಂದ ವರ್ಷಕ್ಕೆ ಪ್ರಗತಿಯಲ್ಲಿದ್ದು, ಮೈಕ್ರೋ ಎಟಿಎಂ ಮಿಷನ್‌ ಸೌಲಭ್ಯ, ಮೊಬೈಲ್‌ ಬ್ಯಾಂಕಿಂಗ್‌, ಬಿಬಿಪಿಎಸ್‌ ಠೇವಣಿ ಸಂಗ್ರಹಕ್ಕೆ ಆದ್ಯತೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಏಕರೂಪ ತಂತ್ರಾಂಶದ ಯೋಜನೆ ಅಡಿಯಲ್ಲಿ ಗಣಕೀಕರಣಗೊಳಿಸಲಾಗುವುದು. ಮುಂದಿನ ವರ್ಷ 30 ಕೋಟಿ ರೂ. ನಿವ್ವಳ ಲಾಭ ಗಳಿಸುವ ಗುರಿಯಿದೆ ಎಂದರು.

Advertisement

ಬ್ಯಾಂಕ್‌ಗಳ ವಿಲೀನಕ್ಕೆ ವಿರೋಧ ವ್ಯಕ್ತಪಡಿಸಿದ ಅವರು, ಡಿಸಿಸಿ ಬ್ಯಾಂಕ್‌ ಅನ್ನು ಅಪೆಕ್ಸ್‌ ಬ್ಯಾಂಕ್‌ನೊಂದಿಗೆ ಯಾವುದೇ ಕಾರಣಕ್ಕೂ ವಿಲೀನಗೊಳಿಸಬಾರದು. ರಾಜ್ಯದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಸಹಕಾರ ಸಂಘಗಳಿವೆ. ಈ ಎಲ್ಲ ಸಹಕಾರ ಸಂಘಗಳ ಮೇಲ್ವಿಚಾರಣೆಯನ್ನು ಡಿಸಿಸಿ ಬ್ಯಾಂಕ್‌ ನೋಡಿಕೊಳ್ಳುತ್ತದೆ. ಆದರೆ, ಅಪೆಕ್ಸ್‌ ಬ್ಯಾಂಕ್‌ಗೆ ವಿಲೀನ ಮಾಡುವುದರಿಂದ ತೊಂದರೆಯಾಗುತ್ತದೆ. ಅಪೆಕ್ಸ್‌ ಬ್ಯಾಂಕ್‌ ಇರುವುದು ಬೆಂಗಳೂರಿನಲ್ಲಿ ವಿವಿಧ ವಿಷಯಗಳಿಗಾಗಿ ಬೀದರ್‌ನಂತಹ ಜಿಲ್ಲೆಯಿಂದ ಸುಮಾರು 800 ಕಿ.ಮೀ. ದೂರದ ಬೆಂಗಳೂರಿಗೆ ಬರುವುದು ಕೂಡ ಕಷ್ಟವಾಗುತ್ತದೆ. ಆಡಳಿತಾತ್ಮಕ ದೃಷ್ಟಿಯಿಂದಲೂ ಕೂಡ ಇದು ಅವೈಜ್ಞಾನಿಕವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಎಚ್.ಎಲ್. ಷಡಾಕ್ಷರಿ, ನಿರ್ದೇಶಕರಾದ ಕೆ.ಪಿ. ದುಗ್ಗಪ್ಪ ಗೌಡ, ಎಂ.ಎಂ. ಪರಮೇಶ್‌, ಜೆ.ಪಿ. ಯೋಗೀಶ್‌, ಎಚ್‌.ಕೆ. ವೆಂಕಟೇಶ್‌, ಎಸ್‌.ಪಿ. ದಿನೇಶ್‌, ಜಿ.ಎನ್. ಸುಧೀರ್‌, ಬಿ.ಕೆ. ಗುರುರಾಜ್‌, ಬ್ಯಾಂಕ್‌ ನ ವ್ಯವಸ್ಥಾಪಕ ನಿರ್ದೇಶಕ ನಾಗೇಶ್‌ ಡೋಂಗ್ರೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next