Advertisement

ಹನಮಂತನ ವಿರುದ್ಧ “ಕೈ”ಗೆ ಸಿಗುತ್ತಿಲ್ಲ ಅಭ್ಯರ್ಥಿ! ಬಹುತೇಕ ಅವಿರೋಧ ಸಾಧ್ಯತೆ

11:25 AM Oct 20, 2020 | sudhir |

ಬಾಗಲಕೋಟೆ: ಡಿಸಿಸಿ ಬ್ಯಾಂಕ್‌ನ ಮತ್ತೂಂದು ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಇತರೆ ಸಹಕಾರ ಸಂಘಗಳಿಂದ ಆಯ್ಕೆಗೊಳ್ಳುವ ನಿರ್ದೇಶಕ ಸ್ಥಾನವೂ ಒಂದು. ಕಳೆದ ಬಾರಿ ಈ ಕ್ಷೇತ್ರಕ್ಕೆ ಸ್ನೇಹಿತರೇ ಪರಸ್ಪರ ವಿರುದ್ಧ ಸ್ಪರ್ಧಿಸಿದ್ದರು. ಹೀಗಾಗಿ ಈ ಕ್ಷೇತ್ರ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲೇ ಅತ್ಯಂತ ಪ್ರತಿಷ್ಠೆ ಹಾಗೂ ತುರುಸಿನಿಂದ ನಡೆದಿತ್ತು. ಹೌದು. ಈ ಬಾರಿ ಇತರೆ ಸಹಕಾರ ಸಂಘಗಳ
ಕ್ಷೇತ್ರದಿಂದ ಡಿಸಿಸಿ ಬ್ಯಾಂಕ್‌ಗೆ ನಡೆಯುವ ಒಂದು ಸ್ಥಾನದ ನಿರ್ದೇಶಕ ಸ್ಥಾನಕ್ಕೆ ವಿಧಾನ ಪರಿಷತ್‌ ಸದಸ್ಯ, ಬಿಜೆಪಿಯ ಹಾಲಿ ನಿರ್ದೇಶಕ ಹನಮಂತ ಆರ್‌. ನಿರಾಣಿ ಅವರ ವಿರುದ್ಧ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಯೇ ಇಲ್ಲ ಎನ್ನಲಾಗುತ್ತಿದೆ. ಹೀಗಾಗಿ ಹನಮಂತ ನಿರಾಣಿ ಅವರು ಈ ಬಾರಿ ಬಹುತೇಕ ಅವಿರೋಧವಾಗಿ ಆಯ್ಕೆಗೊಳ್ಳುವ ಸಾಧ್ಯತೆ ಇದೆ.

Advertisement

ನಿರಂತರ ಸಂಪರ್ಕ: ಪಿಕೆಪಿಎಸ್‌ ಕ್ಷೇತ್ರಗಳಿಂದ ನಡೆಯುವ ನಿರ್ದೇಶಕ ಸ್ಥಾನದ ಚುನಾವಣೆ, ಆಯಾ ತಾಲೂಕಿಗೆ ಮಾತ್ರ ಸಿಮೀತವಾಗಿರುತ್ತದೆ. ಆದರೆ, ಇತರೆ ಸಹಕಾರ ಸಂಘಗಳು, ನೇಕಾರ, ಉಣ್ಣೆ ನೇಕಾರ, ಪಟ್ಟಣ ಸಹಕಾರ ಸಂಘಗಳ ಕ್ಷೇತ್ರದ ಮತದಾರರು, ಇಡೀ ಜಿಲ್ಲೆಯಾದ್ಯಂತ ಇರುತ್ತಾರೆ. ಕಳೆದ ಐದು ವರ್ಷಗಳಿಂದ ನಿರ್ದೇಶಕರಾಗಿರುವ ಹನಮಂತ ನಿರಾಣಿ ಅವರು,
ಎಲ್ಲ ಸಂಘಗಳೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದಾರೆ. ಜತೆಗೆ ಪ್ರತಿ ವರ್ಷ ದೀಪಾವಳಿ, ಯುಗಾದಿ ಹಾಗೂ ವಿಶೇಷ ಸಂದರ್ಭಗಳಲ್ಲಿ ಅವರನ್ನು ಭೇಟಿ ಮಾಡಿ, ಅವರ ಕೆಲಸ ಕಾರ್ಯಗಳನ್ನೂ ಮಾಡಿ ಕೊಟ್ಟಿದ್ದಾರೆ. ವಿಧಾನ ಪರಿಷತ್‌ ಸದಸ್ಯರೂ ಆಗಿದ್ದರಿಂದ ಇತರೆ ಸಹಕಾರ ಸಂಘಗಳ ಪ್ರತಿನಿಧಿಗಳೊಂದಿಗೆ ನಿಟಕ ಸಂಪರ್ಕ ಹೊಂದಲು ಮತ್ತಷ್ಟು ಸಹಕಾರಿಯಾಗಿದ್ದು,
ಅದು ಮುಂದುವರಿದಿದೆ.

ಇದನ್ನೂ ಓದಿ :4 ಲಕ್ಷ ಕ್ಯೂಸೆಕ್ ಗೆ ಏರಿದ ಒಳಹರಿವು: ಭೀಮಾ ತೀರದ ಗ್ರಾಮಗಳಿಗೆ ಮತ್ತೆ ಪ್ರವಾಹ ಭೀತಿ

250 ಮತಗಳು: ಇತರೆ ಸಹಕಾರ ಸಂಘಗಳ ಕ್ಷೇತ್ರಕ್ಕೆ ಕಳೆದ ಬಾರಿ ನಡೆದ ಚುನಾವಣೆ ವೇಳೆ 200 ಮತದಾರರಿದ್ದರು. 200 ಸಂಘಗಳು, ಮತದಾನ ಮಾಡಲು ಅರ್ಹತೆ ಹೊಂದಿದ್ದು, ಒಂದು ಸಂಘದಿಂದ ತಲಾ ಒಬ್ಬ (ಮತದಾನ ಮಾಡುವ ಹಕ್ಕು ಪಡೆದ ವ್ಯಕ್ತಿ) ಮತದಾನ ಮಾಡುವ ಹಕ್ಕು ಪಡೆದಿದ್ದರು. ಈ ಬಾರಿ ಜಿಲ್ಲೆಯಲ್ಲಿ 50 ಸಂಘಗಳು ಹೆಚ್ಚಾಗಿವೆ. ಹೀಗಾಗಿ ಈ ಬಾರಿ ಒಟ್ಟು
ಮತದಾರ ಸಂಖ್ಯೆ 250 ದಾಟಿದ್ದು, ಅಂತಿಮ ಮತದಾರರ ಪಟ್ಟಿ ಇನ್ನೆರಡು ದಿನಗಳಲ್ಲಿ ಹೊರ ಬೀಳಲಿದೆ.

ಕಳೆದ ಗೆಳೆಯರ ಕಾಳಗ :ಇತರೆ ಸಹಕಾರ ಸಂಘಗಳ ಕ್ಷೇತ್ರದಿಂದ ಬೀಳಗಿ ತಾಲೂಕಿನ ಗಲಗಲಿಯ ಮೋಹನ ಜಾಧವ ಅವರು 2010-15ರ ಅವಧಿಗೆ ಆಯ್ಕೆಯಾಗಿದ್ದರು. ಒಂದು ಬಾರಿ ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷರೂ ಆಗಿದ್ದರು. ಇದಕ್ಕೆ ಶಾಸಕ ಮುರಗೇಶ
ನಿರಾಣಿ ಸಹಕಾರ-ಬಲ ಎರಡೂ ಇತ್ತು. ನಿರಾಣಿ ಅವರ ಅತ್ಯಾಪ್ತರಾಗಿದ್ದ ಮೋಹನ ಜಾಧವ ಅವರು, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷರಾಗಿದ್ದ ವೇಳೆಯೇ ಅವರೊಂದಿಗೆ ಮುನಿಸಿಕೊಂಡು ಕಳೆದ 20013ರ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು.

Advertisement

ಇದನ್ನೂ ಓದಿ: ನೋ ಪಾರ್ಕಿಂಗ್‌ ನಲ್ಲಿ ಬೈಕ್‌ ನಿಲ್ಲಿಸಿದಕ್ಕೆ ಗಲಾಟೆ! ಮಹಿಳೆಯಿಂದ ಪೊಲೀಸ್ ಗೆ ಕಪಾಳ ಮೋಕ್ಷ

ಬಳಿಕ 2015ರಲ್ಲಿ ನಡೆದ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಮೋಹನ ಜಾಧವ ಅವರು ಪುನಃ ಈ ಕ್ಷೇತ್ರದಿಂದ ಸ್ಪರ್ಧಿಸಿದಾಗ ಮುರಗೇಶ ನಿರಾಣಿ ಅವರು ತಮ್ಮ ಸಹೋದರ, ಆಗ ಜಿಪಂ ಸದಸ್ಯರಾಗಿದ್ದ ಹನಮಂತ ನಿರಾಣಿ ಅವರನ್ನು ತಮ್ಮ ಮಾಜಿ ಶಿಷ್ಯನ ವಿರುದ್ಧ ಸ್ಪರ್ಧೆಗಿಳಿಸಿದ್ದರು. ಆಗ 200 ಮತಗಳಲ್ಲಿ ಬರೋಬ್ಬರಿ 150 ಮತಗಳನ್ನು ಹನಮಂತ ನಿರಾಣಿ ಅವರು ಪಡೆದರೆ,
ಕೇವಲ 50 ಮತಗಳನ್ನು ಮೋಹನ ಜಾಧವ ಪಡೆದಿದ್ದರು. ಆ ಮೂಲಕ ನಿರಾಣಿ ಕುಟುಂಬ ಡಿಸಿಸಿ ಬ್ಯಾಂಕ್‌ನ ಆಡಳಿತ ಮಂಡಳಿಗೆ ಸೇರ್ಪಡೆಯಾಗಿತ್ತು.

ಮರಳಿ ಬಂದ ಮೋಹನ : ಮೋಹನ ಜಾಧವ ಅವರು ಬದಲಾದ ರಾಜಕೀಯದಲ್ಲಿ 2018ರ ವಿಧಾನಸಭೆ ಚುನಾವಣೆ ವೇಳೆ ಪುನಃ ಬಿಜೆಪಿಗೆ ಬಂದಿದ್ದು, ಸದ್ಯ ಹನಮಂತ ನಿರಾಣಿ ಅವರ ಸಹಕಾರ ಚುನಾವಣೆಯಲ್ಲಿ ರಾಜಕೀಯ ಸಹಕಾರ ನೀಡುತ್ತಿದ್ದಾರೆ. ಈ ಕ್ಷೇತ್ರದಿಂದ ಕಾಂಗ್ರೆಸ್‌ನಲ್ಲಿ ಸ್ಪರ್ಧಿಸಲು ಯಾರೂ ಮುಂದೆ ಬಂದಿಲ್ಲ. ಅಲ್ಲದೇ ನಿರಾಣಿ ಕುಟುಂಬದ ರಾಜಕೀಯ
ಚತುರತೆ ಎದುರಿಸಲು ಯಾರೂ ಮುಂದೆ ಬರುತ್ತಿಲ್ಲ ಎನ್ನಲಾಗಿದೆ.

ಬಿಜೆಪಿಯಲ್ಲಿದ್ದರು ಆಕಾಂಕ್ಷಿ: ಈ ಕ್ಷೇತ್ರದಿಂದ ಕಾಂಗ್ರೆಸ್‌ ನಲ್ಲಿ ಸೂಕ್ತ ಅಭ್ಯರ್ಥಿ ಕೊರತೆ ಎದುರಾಗಿದ್ದರೆ, ಬಿಜೆಪಿಯಲ್ಲಿ ಕೆಲವರು ಅಭ್ಯರ್ಥಿಗಳಾಗಲು ಬೇಡಿಕೆ ಸಲ್ಲಿಸಿದ್ದರು. ಜಮಖಂಡಿಯ ಜಿಪಂ ಸದಸ್ಯ ಬಸವರಾಜ ಬಿರಾದಾರ, ಇತರೆ ಸಹಕಾರ ಸಂಘಗಳಿಂದ ಸ್ಪರ್ಧಿಸಲು ಪಕ್ಷದ ಬೆಂಬಲ ಕೇಳಿದ್ದರು. 20 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿದ್ದು, ಸಂಘ-ಪರಿವಾರದಿಂದ ಬಂದಿದ್ದೇನೆ.  ನನಗೆ ಅವಕಾಶ ಕೊಟ್ಟರೆ ಸ್ಪರ್ಧಿಸುವುದಾಗಿ ಬಿಜೆಪಿ ಜಿಲ್ಲಾ ಅಧ್ಯಕ್ಷರಿಗೆ ಅಧಿಕೃತ ಮನವಿಯನ್ನೂ ಕೊಟ್ಟಿದ್ದರು.
ಆದರೆ, ಬಿಜೆಪಿಯಿಂದ ಈ ಕ್ಷೇತ್ರಕ್ಕೆ ಎಂಎಲ್‌ಸಿ ಹನಮಂತ ನಿರಾಣಿ ಅವರನ್ನು ಬೆಂಬಲಿತ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಲಾಗಿದೆ.

ಇದನ್ನೂ ಓದಿ: ಇನ್ಸುಲಿನ್‌ಗಾಗಿ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಕಾದ ಸಿದ್ದರಾಮಯ್ಯ!

ಒಟ್ಟಾರೆ ಕಳೆದ ಬಾರಿ ಅತ್ಯಂತ ಪ್ರತಿಷ್ಠೆಯಿಂದ ನಡೆದ ಈ ಕ್ಷೇತ್ರದ ಚುನಾವಣೆ ಫಲಿತಾಂಶ ಬಂದ ದಿನ ನೀನೇ ಸಾಕಿದಾ ಗಿಣಿ, ಹದ್ದಾಗಿ ಕುಕ್ಕಿತ್ತಲ್ಲೋ ಎಂಬ ಡಿಜೆ ಹಾಡಿನೊಂದಿಗೆ ಬೃಹತ್‌ ಮೆರವಣಿಗೆಗೆ ಸಾಕ್ಷಿಯಾಗಿತ್ತು. ಆದರೆ, ಈ ಬಾರಿ ಕಾಂಗ್ರೆಸ್‌ನಲ್ಲಿ ಗೆಲ್ಲುವ ಕುದುರೆ ಸಿಗದ ಕಾರಣ ಬಿಜೆಪಿಯ ಹನಮಂತ ನಿರಾಣಿ ಅವರು ಅವಿರೋಧ ಆಯ್ಕೆಯಾಗುವ ವಿಶ್ವಾಸದಲ್ಲಿದ್ದಾರೆ.

ಕಳೆದ ಐದು ವರ್ಷದಿಂದ ಈ ಕ್ಷೇತ್ರದ ಪ್ರತಿಯೊಂದು ಸಂಘದೊಂದಿಗೆ ಸಂಪರ್ಕ ಹೊಂದಿದ್ದೇನೆ. ಅವರ ಕೆಲಸ ಕಾರ್ಯ ಮಾಡಿದ್ದು, ಎಲ್ಲರೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. 250 ಸಂಘಗಳೊಂದಿಗೆ ಸಂಪರ್ಕ ಹೊಂದಿ ಅವರ ಕೆಲಸ
ಮಾಡುವುದು ದೊಡ್ಡ ಕೆಲಸವೇನಲ್ಲ. ಈ ಕ್ಷೇತ್ರದಿಂದ ನಾನು ಪುನಃ ಸ್ಪರ್ಧಿಸಿದ್ದು, ಪಕ್ಷವೂ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿದೆ. ಅ.26ರಂದು ನಾನು ನಾಮಪತ್ರ ಸಲ್ಲಿಸಲಿದ್ದೇನೆ. ಕಾಂಗ್ರೆಸ್‌ನಿಂದ ಯಾರೇ ಅಭ್ಯರ್ಥಿ ಹಾಕಿದರೂ ನಾನು ಗೆಲ್ಲುವುದು ನಿಶ್ಚಿತ.
– ಹನಮಂತ ನಿರಾಣಿ, ಎಂಎಲ್‌ಸಿ, ಇತರೆ ಸಹಕಾರ ಸಂಘಗಳ ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ

ಪಕ್ಷದ ಎಲ್ಲ ಹಿರಿಯರು ಚರ್ಚಿಸಿ ಈ ಕ್ಷೇತ್ರಕ್ಕೆ ಕಾಂಗ್ರೆಸ್‌ ನಿಂದ ಸೂಕ್ತ ಅಭ್ಯರ್ಥಿ ಹಾಕುತ್ತೇವೆ. ಡಿಸಿಸಿ ಬ್ಯಾಂಕ್‌ನ ಎಲ್ಲಾ ಕ್ಷೇತ್ರಗಳಿಗೂ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಡಿಸಿಸಿ ಬ್ಯಾಂಕ್‌ನಲ್ಲಿ ಕಾಂಗ್ರೆಸ್‌ ಬೆಂಬಲಿತ ಆಡಳಿತವಿದ್ದು,
ಈ ಬಾರಿಯೂ ಪಕ್ಷದ ಬೆಂಬಲಿತರೇ ಬಹುಸಂಖ್ಯೆಯಲ್ಲಿ ಆಯ್ಕೆಯಾಗಿ ಆಡಳಿತಕ್ಕೆ ಬರಲಿದ್ದೇವೆ.
– ನಾಗರಾಜ ಹದ್ಲಿ, ಕಾಂಗ್ರೆಸ್‌ ಜಿಲ್ಲಾ ವಕ್ತಾರ.

– ಶ್ರೀಶೈಲ ಕೆ.ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next