Advertisement
ರಾಜ್ಯದಲ್ಲಿ ಸಹಕಾರಿ ವಲಯ ಹಾಗೂ ರೈತಾಪಿ ಸಮುದಾಯಕ್ಕೆ ಡಿಸಿಸಿ ಬ್ಯಾಂಕ್‌ಗಳ ಕೊಡುಗೆ ಅಪಾರ. ಹೀಗಾಗಿ ಸರಕಾರ ಸಹಕಾರಿ ಕ್ಷೇತ್ರವನ್ನು ಇನ್ನಷ್ಟು ಬಲವರ್ಧನೆಗೊಳಿಸುವ ಕೆಲಸ ಮಾಡಬೇಕೇ ಹೊರತು ಯಾವುದೇ ಕಾರಣಕ್ಕೂ ಡಿಸಿಸಿ ಬ್ಯಾಂಕ್ ವಿಲೀನ ಸರಿಯಲ್ಲ.
ರಾಜ್ಯದಲ್ಲಿರುವ ಡಿಸಿಸಿ ಬ್ಯಾಂಕ್‌ಗಳನ್ನು ಸಮರ್ಥ ಬ್ಯಾಂಕ್‌ಗಳನ್ನಾಗಿ ಮಾಡಬೇಕೇ ವಿನಾ ಅವುಗಳನ್ನು ವಿಲೀನಗೊಳಿಸಿ ದುರ್ಬಲ ಬ್ಯಾಂಕ್‌ಗಳನ್ನಾಗಿ ಮಾಡಬಾರದು. ಕೇಂದ್ರ ಸರಕಾರ ಸಾರ್ವಜನಿಕ ಬ್ಯಾಂಕ್‌ಗಳಿಗೆ ಬಂಡವಾಳ ಸೇರ್ಪಡೆ ಮಾಡುವಂತೆ ರಾಜ್ಯದಲ್ಲಿ ಕಷ್ಟದಲ್ಲಿ ಇಲ್ಲವೇ ತೊಂದರೆಯಲ್ಲಿ ಸಿಲುಕಿರುವ ಬ್ಯಾಂಕ್‌ಗಳಿಗೆ ಅದರಲ್ಲೂ ಡಿಸಿಸಿ ಬ್ಯಾಂಕ್‌ಗಳಿಗೆ ರಾಜ್ಯ ಸರಕಾರ ಬಂಡವಾಳ ಸೇರ್ಪಡೆ ಮಾಡಬೇಕಾಗಿದೆ. 2022ರ ಜನವರಿಯಲ್ಲಿ ಕಲಬುರಗಿ ಹಾಗೂ ಯಾದಗಿರಿ ಜಿಲ್ಲಾ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ ರೀತಿಯಲ್ಲಿ ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳ ಮಾದರಿಯಲ್ಲಿ ಸಹಕಾರ ಕ್ಷೇತ್ರವನ್ನು ಬಲಪಡಿಸಬೇಕಾಗಿದೆ. ಸಹಕಾರ ಚಳವಳಿಯಿಂದ ಅಲ್ಲಿನ ರೈತಾಪಿ ಜನರ ಜೀವನ ಸುಧಾರಿಸಿದೆ ಹಾಗೂ ಅಲ್ಲಿನ ಜನರಿಗೆ ಸಹಕಾರ ಕ್ಷೇತ್ರವೇ ಜೀವನದ ಅಂಗವಾಗಿದೆ. ದೇಶಾದ್ಯಂತ ಸಹಕಾರಿ ಕ್ಷೇತ್ರವನ್ನು ಬಲಪಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಅಮಿತ್ ಶಾ ಅವರನ್ನು ಸಹಕಾರ ಸಚಿವರನ್ನಾಗಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರು ಕೂಡ ದಿಟ್ಟ ಹೆಜ್ಜೆ ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆ ಇದೆ.
Related Articles
Advertisement
ಇತ್ತೀಚೆಗೆ ಲೋಕಸಭೆಯಲ್ಲಿ ರಾಜ್ಯ ಹಣಕಾಸು ಸಚಿವರು ಮಾಹಿತಿ ನೀಡಿದಂತೆ 2022-23ರ ಅವಧಿಯಲ್ಲಿ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳಿಗೆ 15,000 ಕೋಟಿ ರೂ. ಬಂಡವಾಳ ಸೇರ್ಪಡೆ ಮಾಡಲಾಗಿದೆ. ಮೊದಲು ಅಂದಾಜು ಮಾಡಿದಂತೆ 20,000 ಕೋಟಿ ರೂ.ಗಳಿಂದ 15,000 ಕೋಟಿ ರೂ.ಹಣವನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಸಿಂಹಪಾಲು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಪಂಜಾಬ್ ಸಿಂಧ್ ಬ್ಯಾಂಕ್‌ಗೆ ದೊರೆತಿದೆ. ಈ ಬಂಡವಾಳ ಸೇರ್ಪಡೆಯಿಂದ ಈ ಎರಡು ಬ್ಯಾಂಕ್‌ಗಳು ವರ್ತಮಾನ ಹಣಕಾಸಿನ ನಿಯಂತ್ರಣ ಆವಶ್ಯಕತೆಗಳನ್ನು ಪೂರ್ಣಗೊಳಿಸಿದಂತಾಗುತ್ತಿದೆ.
ಇದೇ ರೀತಿ 2021ರ ಮಾರ್ಚ್‌ನಲ್ಲಿ 14500 ಕೋಟಿ ರೂ.ಅನ್ನು 4 ಬ್ಯಾಂಕ್‌ಗಳಿಗೆ ಹಂಚಿಕೆ ಮಾಡಲಾಗಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಗೆ 4800 ಕೋಟಿ ರೂ.ಯುಕೋ ಬ್ಯಾಂಕ್‌ಗೆ 2600 ಕೋಟಿ ರೂ. ಬ್ಯಾಂಕ್ ಆಫ್ ಇಂಡಿಯಾಗೆ 3000 ಕೋಟಿ ರೂ.,ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗೆ 4100 ಕೋಟಿ ರೂ. ನೀಡಲಾಗಿದೆ.
ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರದ ರಾಜ್ಯ ಹಣಕಾಸು ಸಚಿವರು ಕಳೆದ 5 ವರ್ಷಗಳಲ್ಲಿ 2,86,043 ಕೋಟಿ ರೂ.ಬಂಡವಾಳ ಸೇರ್ಪಡೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಮಾಡಲಾಗಿದೆ ಎಂದು ಹೇಳಿದ್ದಾರೆ. ದೇಶದಲ್ಲಿರುವ ಎಲ್ಲ ಸಹಕಾರಿ ಕ್ಷೇತ್ರದ ಬ್ಯಾಂಕ್‌ಗಳನ್ನು ಬಲಪಡಿಸಬೇಕೇ ವಿನಾ ಅವುಗಳನ್ನು ವಿಲೀನಗೊಳಿಸಿ, ನಾಶಮಾಡಬಾರದು ಅಥವಾ ಕ್ಷೀಣಿಸಬಾರದು. ಈಗ ಚಾಲ್ತಿಯಲ್ಲಿರುವ 3 ಹಂತದ ಸಹಕಾರಿ ಅಂದರೆ ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್, ಪಿಎಸಿಎಸ್‌ಗಳನ್ನು ಮುಂದುವರಿಸುತ್ತಾ, ಪ್ರೋತ್ಸಾಹ ನೀಡಿ ಬಲವರ್ಧನೆ ಮಾಡಲು ರಾಜ್ಯ ಸರಕಾರ ಕೈ ಜೋಡಿಸಬೇಕಾಗಿದೆ.
ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ರಾಜ್ಯದಲ್ಲಿ 21 ಡಿಸಿಸಿ ಬ್ಯಾಂಕ್‌ಗಳು ಲಾಭದಾಯಕವಾಗಿ ಕಾರ್ಯ ನಿರ್ವಹಿಸುತ್ತಿದ್ದು ಯಾವ ಬ್ಯಾಂಕ್ ಕೂಡ ಮುಚ್ಚಿಲ್ಲ. ಡಿಸಿಸಿ ಬ್ಯಾಂಕ್ ಮುಖಾಂತರ ಅಲ್ಪಾವಧಿ ಸಾಲ, ದೀರ್ಘಾವಧಿ ಸಾಲ, ಮಹಿಳಾ ಸ್ವಸಹಾಯ ಸಂಘ, ಪುರುಷ ಸ್ವಸಹಾಯ ಸಾಲ, ಪಶುಸಂಗೋಪನಾ ಸಾಲ, ಚಿನ್ನಾಭರಣ ಸಾಲ, ಅಡಮಾನ ಸಾಲ, ವಾಹನ ಸಾಲ ನೀಡಲಾಗುತ್ತಿದೆ. ಇದರಲ್ಲಿ ಅಲ್ಪಾವಧಿ ಸಾಲ, ದೀರ್ಘಾವಧಿ ಸಾಲ, ಮಹಿಳಾ ಸ್ವಸಹಾಯ ಸಂಘ, ಪುರುಷ ಸ್ವಸಹಾಯ ಸಂಘಕ್ಕೆ ಮಾತ್ರ ನಬಾರ್ಡ್‌ನಿಂದ ರಿಫೈನಾನ್ಸ್ ಸಾಲ ದೊರೆಯುತ್ತಿದ್ದು ಇನ್ನುಳಿದ ಸಾಲಗಳನ್ನು ಡಿಸಿಸಿ ಬ್ಯಾಂಕ್‌ಗಳು ಸ್ವಂತ ಬಂಡವಾಳದಲ್ಲಿ ನೀಡುತ್ತಾ ಬಂದಿರುತ್ತವೆ.
ರಾಷ್ಟ್ರದಲ್ಲಿ ಒಟ್ಟು ಡಿಸಿಸಿ ಬ್ಯಾಂಕ್‌ಗಳ ಮುಖಾಂತರ ಅಂದಾಜು 25 ಲಕ್ಷ ರೈತರಿಗೆ 19 ಸಾವಿರ ಕೋಟಿ ರೂ. ಸಾಲ ವಿತರಿಸಿದ್ದು, ಇದರಲ್ಲಿ 10 ಸಾವಿರ ಕೋಟಿ ರೂ.ಮಾತ್ರ ನಬಾರ್ಡ್‌ನಿಂದ ರಿಫೈನಾನ್ಸ್ ನೀಡುತ್ತಿದೆ. ಇನ್ನುಳಿದ 9 ಸಾವಿರ ಕೋಟಿ ರೂ. ಡಿಸಿಸಿ ಬ್ಯಾಂಕ್‌ಗಳು ಸ್ವಂತ ಬಂಡವಾಳದಿಂದ ಸಾಲ ನೀಡುತ್ತಾ ಬಂದಿರುತ್ತವೆ. ಅಲ್ಪಾವಧಿ ಸಾಲಕ್ಕೆ ರಾಜ್ಯ ಸರಕಾರದಿಂದ 2018-19ರಲ್ಲಿ ಶೇ.7.10ರಷ್ಟು, 2019-20ರಲ್ಲಿ ಶೇ.6.80ರಷ್ಟು ಹಾಗೂ 2020-21ರಲ್ಲಿ ಶೇ.5.60ರಷ್ಟು ಬಡ್ಡಿ ಸಹಾಯಧನ ನೀಡಿರುತ್ತದೆ. ಇದು ಪ್ರತೀ ವರ್ಷ ಬರಬರುತ್ತಾ ಕಮ್ಮಿಯಾಗಿರುತ್ತದೆ. ಆದರೂ ಸಹ ಯಾವುದೇ ಡಿಸಿಸಿ ಬ್ಯಾಂಕ್‌ಗಳು ನಷ್ಟಕ್ಕೆ ಹೋಗಿಲ್ಲ.
– ಜಿ.ಟಿ.ದೇವೇಗೌಡ, ಮಾಜಿ ಸಚಿವರು, ರಾಜ್ಯ ಸಹಕಾರ ಮಹಾ ಮಂಡಲದ ಅಧ್ಯಕ್ಷರು