Advertisement

ಡಿಸಿ ಮನ್ನಾ ಭೂಮಿ ಹಂಚಿಕೆ: ಪ್ರತಿಭಟನೆ

12:12 PM Sep 20, 2018 | Team Udayavani |

ಪುತ್ತೂರು: ಆರ್ಯಾಪು ಗ್ರಾಮದ ಡಿಸಿ ಮನ್ನಾ ಭೂಮಿಯನ್ನು ಅದೇ ಗ್ರಾಮದ ಅರ್ಹ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಫಲಾನುಭವಿಗಳಿಗೆ ನೀಡಲು ಕಂದಾಯ ಇಲಾಖೆ ನಿರ್ಲಕ್ಷ್ಯವಹಿಸಿದೆ ಎಂದು ಆರೋಪಿಸಿ ದಲಿತ ಸೇವಾ ಸಮಿತಿ ಬುಧವಾರ ಪುತ್ತೂರು ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿತು. ಮಿನಿವಿಧಾನಸೌಧಕ್ಕೆ ಮುತ್ತಿಗೆ ಹಾಕಲು, ವಿಫಲ ಯತ್ನ ನಡೆಸಿದ ಘಟನೆಯೂ ನಡೆಯಿತು.

Advertisement

ದಲಿತ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಆರ್ಯಾಪು ಗ್ರಾಮದ ಡಿಸಿ ಮನ್ನಾ ಭೂಮಿಯನ್ನು ಹಂಚಿಕೆ ಮಾಡುವಂತೆ ತಹಶೀಲ್ದಾರ್‌ ಮತ್ತು ಆರ್ಯಾಪು ಗ್ರಾ.ಪಂ.ಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಮನವಿಗೆ ಸ್ಪಂದನೆ ನೀಡಿಲ್ಲ ಎಂದು ಆರೋಪಿಸಿದರು.

ಅಂಬೇಡ್ಕರ್‌ ರಕ್ಷಣಾ ವೇದಿಕೆ ಎಂಬ ಹೆಸರಿನಲ್ಲಿ ದಲಿತರಿಗೆ ಅನ್ಯಾಯ ಮಾಡಲಾಗುತ್ತಿದೆ. ಆರ್ಯಾಪು ಗ್ರಾಮದ ಡಿಸಿ ಮನ್ನಾ ನಿವೇಶನದಲ್ಲಿ ಅರ್ಹ ಫಲಾನುಭವಿಗಳು ತಾತ್ಕಾಲಿಕ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದರು. ಆದರೆ ಗಿರಿಧರ್‌ ನಾಯ್ಕ ಅವರು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಗುಡಿಸಲನ್ನು ನೆಲಸಮಗೊಳಿಸಿದ್ದಾರೆ. ಆ ನಿವೇಶನದಲ್ಲಿ ಅರ್ಹತೆ ಇಲ್ಲದವರಿಗೆ ಗುಡಿಸಲು ನಿರ್ಮಿಸಿಕೊಟ್ಟಿದ್ದಾರೆ. ಕಂದಾಯ ಇಲಾಖೆಯ ಅ ಧಿಕಾರಿಗಳ ಕುಮ್ಮಕ್ಕು ಇರುವ ಶಂಕೆಯಿದೆ. ಬಲ್ನಾಡು, ಕಡೇ ಶಿವಾಲಯ, ಕೊಡಿಪ್ಪಾಡಿಯಲ್ಲಿ ಅಕ್ರಮ ಗುಡಿಸಲು ನಿರ್ಮಿಸುವ ಮೂಲಕ ದಲಿತ ಸಮುದಾಯಕ್ಕೆ ದ್ರೋಹ ಎಸಗುತ್ತಿದ್ದಾರೆ. ಗಿರಿಧರ ನಾಯ್ಕ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಪುತ್ತೂರು ಮರಾಠಿ ಸಂಘದ ಅಧ್ಯಕ್ಷ ಸುಂದರ ನಾಯ್ಕ ಮಾತನಾಡಿ, ಡಿಸಿ ಮನ್ನಾ ನಿವೇಶನದ ಕುರಿತು ತಹಶೀಲ್ದಾರ್‌ಗೆ ಹಲವಾರು ಬಾರಿ ಮನವಿ ಮಾಡಿದ್ದೇವೆ. ಆದರೆ ಅವರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಪರಿಶೀಲನೆ ಮಾಡದೆ ಅವ್ಯವಹಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ತತ್‌ಕ್ಷಣ ಸರ್ವೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪುತ್ತೂರು ದಲಿತ ಸೇವಾ ಸಮಿತಿಯ ಗೌರವಾಧ್ಯಕ್ಷ ಮೋಹನ್‌ ನಾಯ್ಕ, ದಲಿತ ಸೇವಾ ಸಮಿತಿ ಕಡಬ ಶಾಖೆಯ ಸಂಘಟನ ಕಾರ್ಯದರ್ಶಿ ಅಣ್ಣಿ ಯೆಳ್ತಿಮಾರ್‌, ಪ್ರಮುಖರಾದ ಐತ್ತಪ್ಪ ಕೋಡಿಂಬಾಡಿ, ಕೃಷ್ಣಪ್ಪ ನಾಯ್ಕ, ಸಂಕಪ್ಪ ನಿಡ್ಪಳ್ಳಿ, ಕೇಶವ ಪಡೀಲ್‌, ಸಾಂತಪ್ಪ ನರಿಮೊಗರು, ಲೀಲಾವತಿ ಕುಕ್ಕಾಡಿ, ರಾಮಚಂದ್ರ, ಮೋಹಿನಿ ನಾಯ್ಕ, ಸೋಮಪ್ಪ ನಾಯ್ಕ ಉಪಸ್ಥಿತರಿದ್ದರು. ದಲಿತ ಸೇವಾ ಸಮಿತಿ ತಾಲೂಕು ಅಧ್ಯಕ್ಷ  ರಾಜು ಸ್ವಾಗತಿಸಿ, ಉಪಾಧ್ಯಕ್ಷ ಮನೋಹರ್‌ ಕೋಡಿಜಾಲು ವಂದಿಸಿದರು.

Advertisement

ಮುತ್ತಿಗೆಗೆ ಯತ್ನ
ಮನವಿ ನೀಡಲು ತೆರಳಿದಾಗ ಅಧಿಕಾರಿಗಳು ಇಲ್ಲದಿರುವುದರಿಂದ ರೋಸಿಹೋದ ಪ್ರತಿಭಟನಕಾರರು, ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ತಡೆದರು. ಆಕ್ರೋಶಿತರಾದ ಪ್ರತಿಭಟನಕಾರರು ಮೆಟ್ಟಿಲಲ್ಲೇ ಕುಳಿತು ಧಿಕ್ಕಾರ ಕೂಗಿದರು. ಸ್ವಲ್ಪ ಸಮಯದ ಬಳಿಕ ತಹಶೀಲ್ದಾರ್‌ ಅನಂತಶಂಕರ ಆಗಮಿಸಿ, ಮನವಿ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next