Advertisement

ಸತತ 5 ಸೋಲು; ಕೆಕೆಆರ್‌ ಕತೆ ಮುಗಿಯಿತೇ?

06:34 PM Apr 29, 2022 | Team Udayavani |

ಮುಂಬಯಿ: ಶ್ರೇಯಸ್‌ ಅಯ್ಯರ್‌ ಸಾರಥ್ಯದಲ್ಲಿ ಮೊದಲ ಸಲ ಕಣಕ್ಕಿಳಿದ ಕೋಲ್ಕತಾ ನೈಟ್‌ರೈಡರ್ ತೀರಾ ಸಂಕಷ್ಟಕ್ಕೆ ಸಿಲುಕಿದೆ.

Advertisement

ಆಡಿದ 9 ಪಂದ್ಯಗಳಲ್ಲಿ ಆರನ್ನು ಸೋತು ಪ್ಲೇ ಆಫ್ ಮಾರ್ಗದಿಂದ ಬೇರ್ಪಡುವ ಸೂಚನೆಯನ್ನು ರವಾನಿಸಿದೆ.

ಈಗಾಗಲೇ ಮುಂಬೈ, ಚೆನ್ನೈ ನಿರ್ಗಮನ ಬಹುತೇಕ ಖಚಿತವಾಗಿದ್ದು, ಈ ಸಾಲಿಗೆ ಕೋಲ್ಕತಾ ಕೂಡ ಸೇರಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಐಪಿಎಲ್‌ ಮುಕ್ತಾಯಕ್ಕೆ ಇನ್ನೂ ಒಂದು ತಿಂಗಳು ಬಾಕಿ ಇರುವಾಗಲೇ 3 ಸ್ಟಾರ್‌ ತಂಡಗಳು ಹೊರಬೀಳುವುದು ಒಳ್ಳೆಯ ಲಕ್ಷಣವಂತೂ ಅಲ್ಲ.

ಗುರುವಾರ ಕೆಕೆಆರ್‌-ಡೆಲ್ಲಿ ನಡುವಿನ ಪಂದ್ಯ ಇಬ್ಬರ ಪಾಲಿಗೂ “ಡು ಆರ್‌ ಡೈ ಮ್ಯಾಚ್‌’ ಆಗಿತ್ತು. ಅಕಸ್ಮಾತ್‌ ಡೆಲ್ಲಿ ಸೋತಿದ್ದರೂ ಇದೇ ಸ್ಥಿತಿ ತಲುಪುತ್ತಿತ್ತು. ಆದರಲ್ಲಿ ಅಯ್ಯರ್‌ ಪಡೆಗೆ ನಸೀಬು ಕೈಕೊಟ್ಟಿತು. ಡೆಲ್ಲಿ ವಿರುದ್ಧ ಆಡಿದ ಈ ಋತುವಿನ ಎರಡೂ ಪಂದ್ಯಗಳಲ್ಲೂ ಎಡವಿತು.

Advertisement

ಈ ಸಂದರ್ಭದಲ್ಲಿ ಮಾತಾಡಿದ ಕೆಕೆಆರ್‌ ನಾಯಕ ಶ್ರೇಯಸ್‌ ಅಯ್ಯರ್‌, “ನಮ್ಮ ಆರಂಭ ಬಹಳ ನಿಧಾನ ಗತಿಯಿಂದ ಕೂಡಿತ್ತು. ಹಂತ ಹಂತವಾಗಿ ವಿಕೆಟ್‌ ಕಳೆದುಕೊಳ್ಳುತ್ತ ಹೋದೆವು. ಹೀಗಾಗಿ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ಕ್ಷಮೆ ಇಲ್ಲ’ ಎಂದರು.

“ಗಾಯಾಳುಗಳ ಸಮಸ್ಯೆ ನಮ್ಮ ತಂಡವನ್ನು ಕಾಡುತ್ತಿದೆ. ಹೀಗಾಗಿ ಬ್ಯಾಟಿಂಗ್‌ ಆರ್ಡರ್‌ನಲ್ಲಿ ಆಗಾಗ ಬದಲಾವಣೆ ಸಂಭವಿಸುತ್ತಲೇ ಇದೆ. ಇದರಿಂದ ಆಟಗಾರರರಿಗೆ ಸೆಟ್‌ ಆಗಲು ಸಾಧ್ಯವಾಗುತ್ತಿಲ್ಲ. ಇನ್ನೂ 5 ಪಂದ್ಯಗಳನ್ನು ಆಡಲಿಕ್ಕಿದೆ. ಫ್ರಾಂಚೈಸಿ ನಮ್ಮ ಮೇಲೆ ನಂಬಿಕೆ ಇರಿಸಿದೆ. ಹಿಂದಿನದ್ದೆಲ್ಲವನ್ನೂ ಮರೆತು ಹೊಸ ಆರಂಭ ಪಡೆಯಬೇಕು…’ ಎಂದರು.

“ಸೋಲಿನ ಕುರಿತು ವಿಮರ್ಶೆ ಮಾಡಿಕೊಳ್ಳಬೇಕಿದೆ. ನಾವು ಎಡವಿದ್ದೆಲ್ಲಿ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ. ಇದು ಅತಿಯಾದ ಆತ್ಮವಿಶ್ವಾಸದ ಪರಿಣಾಮವೇನೂ ಅಲ್ಲ. ಇನ್ನಾದರೂ ನಮ್ಮ ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನ ತೋರ್ಪಡಿಸಬೇಕು’ ಎಂದು ಅಯ್ಯರ್‌ ಮುಂದಿನ ಯೋಜನೆ ಕುರಿತು ಹೇಳಿದರು.

ಸತತ ಸೋಲಿನ ಆಟ
ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈಯನ್ನು ಮಣಿಸಿ ಭರವಸೆಯ ಆರಂಭ ಮಾಡಿದ್ದ ಕೆಕೆಆರ್‌, ಬಳಿಕ ಆರ್‌ಸಿಬಿಗೆ ಶರಣಾಯಿತು. ಆದರೆ ಪಂಜಾಬ್‌ ಮತ್ತು ಮುಂಬೈಯನ್ನು ಪರಾಭವಗೊಳಿಸಿ ಮತ್ತೆ ಓಟ ಬೆಳೆಸಿತು. ಅನಂತರ ಗೆಲುವಿನ ಮುಖವನ್ನೇ ಕಂಡಿಲ್ಲ. ಕೆಲವು ಸಣ್ಣ ಅಂತರದ ಸೋಲುಗಳಾದರೂ ಸೋಲು ಸೋಲೇ!

ಡೆಲ್ಲಿ ಎದುರಿನ ಮೊದಲ ಸುತ್ತಿನ ಪಂದ್ಯವನ್ನು 44 ರನ್ನುಗಳಿಂದ ಕಳೆದುಕೊಂಡಿತು. ಇಲ್ಲಿಂದ ಆರಂಭಗೊಂಡ ಸೋಲಿನ ಆಟ ಮತ್ತೆ ಡೆಲ್ಲಿ ಎದುರು 4 ವಿಕೆಟ್‌ಗಳಿಂದ ಎಡವುವ ತನಕವೂ ಮುಂದುವರಿದಿದೆ.

ಕೆಕೆಆರ್‌ ಒಂದು ತಂಡವಾಗಿಯೂ ಆಡುತ್ತಿಲ್ಲ, ಆಟಗಾರರು ವೈಯಕ್ತಿಕವಾಗಿಯೂ ಯಶಸ್ಸು ಕಾಣುತ್ತಿಲ್ಲ. ಆರನ್‌ ಫಿಂಚ್‌, ವೆಂಕಟೇಶ್‌ ಅಯ್ಯರ್‌, ಸುನೀಲ್‌ ನಾರಾಯಣ್‌, ಆ್ಯಂಡ್ರೆ ರಸೆಲ್‌, ಪ್ಯಾಟ್‌ ಕಮಿನ್ಸ್‌, ವರುಣ್‌ ಚಕ್ರವರ್ತಿ, ಟಿಮ್‌ ಸೌಥಿ… ಎಲ್ಲರದೂ ಫ್ಲಾಪ್‌ ಶೋ. ಈವರೆಗೆ ಉತ್ತಮ ನಿರ್ವಹಣೆಯನ್ನು ಕಾಯ್ದುಕೊಂಡು ಬಂದವರು ಶ್ರೇಯಸ್‌ ಅಯ್ಯರ್‌, ನಿತೀಶ್‌ ರಾಣಾ ಮತ್ತು ಉಮೇಶ್‌ ಯಾದವ್‌ ಮಾತ್ರ. ರನ್‌ರೇಟ್‌ -0.006ಕ್ಕೆ ಕುಸಿದಿರುವುದು ಕೂಡ ಕೆಕೆಆರ್‌ಗೆ ಎದುರಾಗಿರುವ ಭಾರೀ ಹಿನ್ನಡೆ.

ಕೋಲ್ಕತಾ ನೈಟ್‌ರೈಡರ್ ಪಂದ್ಯಗಳ ಫ‌ಲಿತಾಂಶ
ಎದುರಾಳಿ ಫ‌ಲಿತಾಂಶ
1. ಚೆನ್ನೈ 6 ವಿಕೆಟ್‌ ಜಯ
2. ಆರ್‌ಸಿಬಿ 3 ವಿಕೆಟ್‌ ಸೋಲು
3. ಮುಂಬೈ 6 ವಿಕೆಟ್‌ ಜಯ
4. ಪಂಜಾಬ್‌ 54 ರನ್‌ ಜಯ
5. ಡೆಲ್ಲಿ 44 ರನ್‌ ಸೋಲು
6. ಹೈದರಾಬಾದ್‌ 7 ವಿಕೆಟ್‌ ಸೋಲು
7. ರಾಜಸ್ಥಾನ್‌ 7 ರನ್‌ ಸೋಲು
8. ಗುಜರಾತ್‌ 8 ರನ್‌ ಸೋಲು
9. ಡೆಲ್ಲಿ 4 ವಿಕೆಟ್‌ ಸೋಲು

Advertisement

Udayavani is now on Telegram. Click here to join our channel and stay updated with the latest news.

Next