ಚಾಮರಾಜನಗರ: ಮಳೆ ಹಾಗೂ ತಾಲೂಕಿನ ಸುವರ್ಣಾವತಿ ಜಲಾಶಯದಿಂದ ನೀರಿನ ಹೊರ ಹರಿವು ಹೆಚ್ಚಳ ಹಿನ್ನೆಲೆಯಲ್ಲಿ ತೊಂದರೆಗೆ ಒಳಗಾದ ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಳೆ, ಜಲಾಶಯಗಳ ನೀರಿನ ಹರಿವಿನಿಂದ ಉಂಟಾಗಿರುವ ಪರಿಸ್ಥಿತಿಯ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಜಲಾವೃತವಾಗಿರುವ ಗ್ರಾಮಗಳು, ಇನ್ನಿತರ ಭಾಗಗಳಲ್ಲಿ ಪರಿಹಾರ ಕಾರ್ಯಾಚರಣೆ ಕೈಗೊಳ್ಳಬೇಕು. ಅಗತ್ಯವಿರುವೆಡೆ ಅಗ್ನಿಶಾಮಕ ದಳ, ಇನ್ನಿತರ ಸಿಬ್ಬಂದಿ ನೆರವಿನಿಂದ ನೀರು ತೆರವುಗೊಳಿಸಬೇಕು ಎಂದು ಸೂಚಿಸಿದರು.
ಕಾಲಕಾಲಕ್ಕೆ ಮಾಹಿತಿ ನೀಡಿ: ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸುವರ್ಣಾವತಿ, ಚಿಕ್ಕ ಹೊಳೆ ಜಲಾಶಯಕ್ಕೆ ಭೇಟಿ ಕೊಟ್ಟು, ನೀರಾವರಿ ಇಲಾಖೆ ಅಧಿಕಾರಿಗಳಿಂದ ವಿವರ ಪಡೆದುಕೊಂಡರು. ಕಾಳಜಿ ಕೇಂದ್ರ ತೆರೆಯಿರಿ: ನೀರು ನುಗ್ಗಿರುವ ಹರದನಹಳ್ಳಿಯ ಗ್ರಾಪಂ, ಅಂಚೆ ಕಚೇರಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ನೀರು ತೆರವುಗೊಳಿಸುವ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿ ಗಳಿಗೆ ಸೂಚನೆ ನೀಡಿದರು. ಕೆಲವು ಮನೆ ಜಲಾವೃತ ವಾಗಿದ್ದ ಹಿನ್ನೆಲೆಯಲ್ಲಿ ಕಾಳಜಿ ಕೇಂದ್ರ ತೆರೆದು ಅಲ್ಲಿ ಎಲ್ಲಾ ಸೌಲಭ್ಯ ಒದಗಿಸಲು ತಹಶೀಲ್ದಾರ್, ಕಂದಾಯ ನಿರೀಕ್ಷಕರಿಗೆ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರ್ವಹಣೆ ಯಿಂದ ಕೆಲವೆಡೆ ಜಲಾವೃತವಾಗಿರುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ, ತಕ್ಷಣವೇ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು.
ಜಲಾವೃತ ಪ್ರದೇಶ ವೀಕ್ಷಣೆ: ಕೋಡಿಮೋಳೆ ಗ್ರಾಮದಲ್ಲಿ ಜನರ ಅಹವಾಲು ಆಲಿಸಿ ಅಲ್ಲಿನ ಜಲಾವೃತ ಪ್ರದೇಶ ವೀಕ್ಷಣೆ ಮಾಡಿದರು. ಜಾನು ವಾರುಗಳನ್ನು ಅಲ್ಲಿನ ಸಮುದಾಯ ಭವನಕ್ಕೆ ಸ್ಥಳಾಂತರ ಮಾಡಿರುವ ಬಗ್ಗೆ ವಿವರ ಪಡೆದುಕೊಂಡರು. ಕಾಳಜಿ ಕೇಂದ್ರದಲ್ಲಿ ಊಟ, ಉಪಾಹಾರ, ಕುಡಿಯುವ ನೀರು ಕೊರತೆ ಆಗದಂತೆ ನೋಡಿ ಕೊಳ್ಳಬೇಕೆಂದು ಡೀಸಿ ನಿರ್ದೇಶನ ನೀಡಿದರು.
ನಾಗವಳ್ಳಿ ಗ್ರಾಮಕ್ಕೂ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿಯವರು ಅಲ್ಲಿನ ಸೇತುವೆ ಇನ್ನಿತರ ಪ್ರದೇಶಗಳನ್ನು ವೀಕ್ಷಿಸಿದರು.
ತಹಶೀಲ್ದಾರ್ ಬಸವರಾಜು, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್, ಸಹಾಯಕ ಎಂಜಿನಿಯರ್ ಮಹದೇವಸ್ವಾಮಿ, ಕಂದಾಯ ಇಲಾಖೆಯ ಅಧಿಕಾರಿ ಗಳು, ಆಯಾ ಭಾಗದ ಪಿಡಿಒಗಳು ಇದ್ದರು.