ಗುಂಡ್ಲುಪೇಟೆ: ತಾಲೂಕಿನಲ್ಲಿ ನಿರಂತರ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕಿನ ಬೇಗೂರು ಹೋಬಳಿ ವ್ಯಾಪ್ತಿಯ ಹಲವು ರೈತರ ಜಮೀನು ಗಳಿಗೆ ಡೀಸಿ ಚಾರುಲತಾ ಸೋಮಲ್ ಖುದ್ದು ಭೇಟಿ ನೀಡಿ, ಅರಿಶಿನ, ಎಲೆಕೋಸು, ಹತ್ತಿ ಸೇರಿದಂತೆ ಇನ್ನಿತರ ಬೆಳೆಗಳ ಪರಿಶೀಲನೆ ನಡೆಸಿ, ನಂತರ ಬೇಗೂರು ಬಳಿಯ ವಿದ್ಯಾರ್ಥಿ ನಿಲಯ, ರೈತಸಂಪರ್ಕ ಕೇಂದ್ರ, ಪೊಲೀಸ್ ಠಾಣೆ, ಸೋಮಹಳ್ಳಿ ರಸ್ತೆಯಲ್ಲಿರುವ ವಿದ್ಯುತ್ ಸ್ಟೇಷನ್ ಹಾಗೂ ಕೋಟೆಕೆರೆ ರೈತರ ಜಮೀನಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಹಾನಿಯಾಗಿದ್ದ ಜಮೀನಿಗೆ ಭೇಟಿ: ಮಳೆಗೆ ಹಾನಿಯಾಗಿದ್ದ ವಾಸದ ಮನೆ ಗೋಡೆ ಕುಸಿತಗೊಂಡಿದ್ದ ಕೆಲ ಸ್ಥಳಕ್ಕೆ ಹಾಗೂ ನೀರು ಹರಿದು ಹಾನಿಯಾಗಿದ್ದ ಜಮೀನಿಗೆ ಭೇಟಿ ನೀಡಿದ ಬಳಿಕ ಮಾತನಾಡಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಬೆಳೆ ಹಾನಿಗೆ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಬೇಕು ಹಾಗೂ ವಾಸದ ಮನೆಗಳ ಕುಸಿತಗೊಂಡು ಹಾನಿಗೆ ಗ್ರಾಪಂ ಕಂದಾಯ, ಪಿಡಿಒ ಹಾಗೂ ಜಿಪಂ ಎಂಜಿನಿಯರ್ ಜಂಟೀಯಾಗಿ ಸರ್ವೆ ನಡೆಸಬೇಕು ಎಂದು ಆದೇಶಿಸಿದರು.
ಪರಿಹಾರ ವಿತರಣೆಗೆ ಕ್ರಮ: ಮಳೆಗೆ ಬೆಳೆ ಹಾಗೂ ಗೋಡೆ ಕುಸಿತಗೊಂಡವರಿಗೆ ಪರಿಹಾರಕ್ಕೆ ಸಂಬಂಧ ಅಧಿಕಾರಿಗಳು ತುರ್ತಾಗಿ ಸಮೀಕ್ಷೆ ನಡೆಸಬೇಕುಹಾಗೂ ಆದಷ್ಟು ಬೇಗ ಪರಿಹಾರ ವಿತರಣೆಗೆ ಕ್ರಮ ವಹಿಸಬೇಕು ಎಂದು ಹೇಳಿ, ವಿದ್ಯಾರ್ಥಿ ನಿಲಯ, ರೈತಸಂಪರ್ಕ ಕೇಂದ್ರಗಳಿಗೆ ಮಳೆಯ ನೀರು ನುಗ್ಗುತ್ತಿದೆ. ಇದು ತಪ್ಪಿಸಲು ಗ್ರಾಪಂ ಪಿಡಿಒ ಹಾಗೂ ಜಿಪಂ ಎಂಜಿನಿಯರ್ ನರೇಗಾದಲ್ಲಿ ಯೋಜನೆ ರೂಪಿಸಿ ಎಂದು ಸೂಚಿಸಿದರು.
ಎರಡು ದಿನದಲ್ಲಿ ಗುಂಡಿ ಮುಚ್ಚಬೇಕು: ತಾಲೂಕಿನ ಬೇಗೂರು-ಹೆಡಿಯಾಲ ರಸ್ತೆಯ ಕೋಟೆಕೆರೆ ಗೇಟ್ ಬಳಿ ಸೇತುವೆ ಕುಸಿದಿರುವುದನ್ನು ಕಂಡ ಜಿಲ್ಲಾಧಿಕಾರಿ ಲೋಕೋಪಯೋಗಿ ಇಲಾಖೆಯ ಎಇಇಗೆ ಎರಡು ದಿನದಲ್ಲಿ ಗುಂಡಿ ಮುಚ್ಚಬೇಕು ಎಂದು ಸೂಚಿಸಿ, ಮಳೆಯ ಸಮಯದಲ್ಲಿ ಸಿಡಿಲು ಹೊಡೆದು ನಾಲ್ವರು ಗಾಯಗೊಂಡಿದ್ದ ತಾಲೂಕಿನ ತಗ್ಗಲೂರು ಮಹದೇವಶೆಟ್ಟಿಗೆ ಮನೆಗೆ ತೆರಳಿ ಪರಿಶೀಲನೆ ನಡೆಸಿದರು. ಜಿಪಂ ಸಿಇಒ ಕೆ.ಎಂ.ಗಾಯತ್ರಿ, ತಹಶೀಲ್ದಾರ್ ಸಿ.ಜಿ.ರವಿಶಂಕರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಧುಸೂದನ್, ತಾಪಂ ಇಒ ಶ್ರೀ ಕಂಠರಾಜೇ ಅರಸ್, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ರಾಜು, ಕೃಷಿ ಸಹಾಯಕ ನಿರ್ದೇಶಕ ಪ್ರವೀಣ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಂಜುಂಡೇಗೌಡ ಇದ್ದರು.