Advertisement

ದಶಕ ಕಳೆದರೂ ನನಸಾಗದ ನಿವೇಶನ ಕನಸು

11:11 AM Mar 23, 2022 | Team Udayavani |

ಕುಂದಗೋಳ: ಕುಬಿಹಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಗ್ರಾಮವ್ಯಾಸ್ತವ್ಯ ಕಾರ್ಯಕ್ರಮ ಜರುಗಿತು.

Advertisement

ಗ್ರಾಮದಲ್ಲಿ 2010ರಲ್ಲಿ ನವಗ್ರಾಮ ಯೋಜನೆಯಡಿ ಹಣ ಪಡೆದು ಇದುವರೆಗೂ ನಿವೇಶನ ನೀಡದೆ ಇರುವುದರಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇವೆ ಎಂದು ಫಲಾನುಭವಿಗಳು ತಮ್ಮ ಅಳಲು ತೋಡಿಕೊಂಡರು. ದೀರ್ಘ‌ ವಿಳಂಬಕ್ಕೆ ಕಾರಣ ನೀಡಿ ಪರಿಹರಿಸಬೇಕೆಂದು ಆಗ್ರಹಿಸಿದರು.

ಆರ್‌ಡಿಪಿಆರ್‌ ಯೋಜನಾಧಿಕಾರಿ ಎನ್‌.ಅಜೇಯ ಮಾತನಾಡಿ, ಈ ಬಗ್ಗೆ ಕಚೇರಿಯಲ್ಲಿ ದಾಖಲಾತಿ ಪರಿಶೀಲಿಸಿ ಹೇಳುತ್ತೇನೆ ಎಂದಾಗ ಗ್ರಾಪಂನಲ್ಲಿ ಇಲ್ಲವೇ ಎಂದು ಜನರು ಮರು ಪ್ರಶ್ನಿಸಿದರು.

ಪಿಡಿಒ ಗಿರೀಶ ಅಮರಗೊಂಡ ಮಾತನಾಡಿ ಇದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದಾಗ ಕೆಲಕಾಲ ಗೊಂದಲ ಉಂಟಾಯಿತು. ನಂತರ ತಹಶೀಲ್ದಾರ್‌ ಅಶೋಕ ಶಿಗ್ಗಾಂವ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಬಗೆಹರಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಮನವಿ ಸಲ್ಲಿಸಿದರೂ ಕ್ರಮವಿಲ್ಲ: ಹೆಸ್ಕಾಂ ಅಧಿಕಾರಿ ಮಠದ ಇಲಾಖೆ ವರದಿ ಹೇಳುತ್ತಿರುವಾಗ ಹಂಚಿನಾಳ ಗ್ರಾಮದಲ್ಲಿನ ಜನತೆಗೆ ಅಪಾಯ ಉಂಟಾಗುವಂತಿರುವ ವಿದ್ಯುತ್‌ ಟಿಸಿ ಸಮಸ್ಯೆ ಸರಿಪಡಿಸುವಂತೆ ಎಷ್ಟು ಬಾರಿ ನಿಮಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಗ್ರಾಪಂ ಉಪಾಧ್ಯಕ್ಷ ನಾಗನಗೌಡ ಸಾತ್ಮಾರ ಅವರು ಅಧಿಕಾರಿ ವಿರುದ್ಧ ಹರಿಹಾಯ್ದರು. ನಮ್ಮ ತಾಳ್ಮೆ ಕಟ್ಟೆ ಒಡೆಯುವಂತೆ ನಿಮ್ಮ ಇಲಾಖೆ ಮಾಡಿದೆ, ಜನತೆಗೆ ಅಪಾಯವಾದರೆ ನಿಮ್ಮ ಇಲಾಖೆಯೇ ಹೊಣೆಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಮಠದ ಅವರು ಮಾತನಾಡಿ, ಕೂಡಲೇ ಈ ಬಗ್ಗೆ ಎಸ್ಟಿಮೇಟ್‌ ಮಾಡಿ 15 ದಿನಗಳೊಳಗಾಗಿ ಸರಿಪಡಿಸುತ್ತೇವೆ ಎಂದು ಹೇಳಿದಾಗ ಸಭೆ ಶಾಂತವಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಬಾಣಂತಿಯರಿಗೆ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮವನ್ನು ತಹಶೀಲ್ದಾರ್‌ ಅಶೋಕ ಶಿಗ್ಗಾಂವ ಉದ್ಘಾಟಿಸಿದರು. ನಂತರ ಬಾಣಂತಿಯರಿಗೆ ಉಡಿತುಂಬುವ ಕಾರ್ಯಕ್ರಮ ಜರುಗಿತು. ಸುಕನ್ಯಾ ಸಮೃದ್ಧಿ ಯೋಜನೆಯ ಪಾಸ್‌ಬುಕ್‌ ಹಾಗೂ ವೃದ್ಧಾಪ್ಯ ವೇತನ ಮಂಜೂರಿ ಪತ್ರಗಳನ್ನು ಫಲಾನುಭವಿಗಳಿಗೆ ನೀಡಲಾಯಿತು. ಮಧ್ಯಾಹ್ನದ ನಂತರ ತಹಶೀಲ್ದಾರ್‌ ಹಾಗೂ ಎಲ್ಲ ಅಧಿ ಕಾರಿಗಳು ಗ್ರಾಮದಲ್ಲಿ ಸಂಚರಿಸಿ ಕೆರೆ ಸಮಸ್ಯೆ, ರಸ್ತೆ ಸಮಸ್ಯೆ, ಚರಂಡಿ ಸಮಸ್ಯೆಗಳನ್ನು ಪರಿಶೀಲಿಸಿ ಅವುಗಳ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು. ಗ್ರಾಮದಲ್ಲಿ ನಿರ್ಮಾಣವಾದ ತ್ಯಾಜ್ಯ ವಿಲೇವಾರಿ ಘಟಕ ವೀಕ್ಷಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next