Advertisement

ಹಾಡುವಳ್ಳಿಯಲ್ಲಿ ಹಬ್ಬಿದೆ ಸಮಸ್ಯೆ ಬಳ್ಳಿ

03:13 PM Feb 20, 2021 | Team Udayavani |

ಭಟ್ಕಳ: ಸರಕಾರದ ಗ್ರಾಮ ವಾಸ್ತವ್ಯಕ್ಕೆ ಹಾಡುವಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಜ್ಜಾಗುತ್ತಿದ್ದು, ಕಳೆದ 2-3 ದಿನಗಳಿಂದ ವಿವಿಧ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.

Advertisement

ಪ್ರಥಮ ಬಾರಿಗೆ ತಮ್ಮ ಗ್ರಾಮಕ್ಕೆ ಜಿಲ್ಲಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಬರುತ್ತಿರುವುದನ್ನು ಕಣ್ತುಂಬಿಕೊಳ್ಳಲು ಗ್ರಾಮಸ್ಥರಲ್ಲಿಯೂ ಹೊಸ ಹುರುಪು ಮೂಡಿದೆ. ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದಿಂದ ಪ್ರಮುಖ ಸಮಸ್ಯೆಗಳಾದ ಕುಂಮ್ರಿ ಮರಾಠಿಗರ ಅರಣ್ಯ ಜಾಗ ಸಮಸ್ಯೆ, ಪರಿಶಿಷ್ಟ ಜಾತಿ ಪ್ರಮಾಣ ಪತ್ರದ ಸಮಸ್ಯೆ, ಕಸ್ತೂರಿ ರಂಗನ್‌ ವರದಿ ಮರು ಅಧ್ಯಯನ ಇತ್ಯಾದಿಗಳು ಪರಿಹಾರವಾದೀತೆ ಎನ್ನುವುದಕ್ಕೆ ಇಲ್ಲಿನ ಜನತೆ ಕಾತರರಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ತುತ್ತ ತುದಿ ತಾಲೂಕಾದ ಭಟ್ಕಳದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳಲ್ಲಿ ಮುಖ್ಯವಾದುದು ಅತಿಕ್ರಮಣದಾರರಸಮಸ್ಯೆ. ಹಾಡುವಳ್ಳಿ ಗ್ರಾಮ ಕೂಡಾ ಇದಕ್ಕೆ ಹೊರತಾಗಿಲ್ಲ. ಅನೇಕರು ಅತಿಕ್ರಮಣ ಮಾಡಿಕೊಂಡು ಮನೆ ಕಟ್ಟಿಕೊಂಡುವಾಸವಾಗಿದ್ದರೆ ಅವರಿಗೆ ಯಾವುದೇಸರಕಾರಿ ಸೌಲಭ್ಯ ದೊರೆಯುತ್ತಿಲ್ಲ.ಅದನ್ನು ಪಡೆಯುವುದಕ್ಕೆ ಅನುಕೂಲಮಾಡಿಕೊಡಬೇಕು. ಕಳೆದ ನುರಾರು ವರ್ಷಗಳಿಂದ ಇಲ್ಲಿ ಮರಾಠಿ ಜನಾಂಗ ವಾಸ್ತವ್ಯ ಮಾಡುತ್ತಾ ಬಂದಿದೆ. ಬ್ರಿಟೀಷರ ಕಾಲದಲ್ಲಿ ಇವರಿಗೆ ರಾಗಿ ಬೆಳೆದು (ಕುಂಮ್ರಿ ಮಾಡುವುದು) ಬದುಕು ಕಟ್ಟಿಕೊಳ್ಳಲು ಅರಣ್ಯ ಪ್ರದೇಶದಲ್ಲಿ ಜಮೀನು ಮಂಜೂರಿಯಿಂದ ನೀಡಿತ್ತು. ಹಲವರು ಕುಂಮ್ರಿ ಜಮೀನಿನ ರಶೀದಿಯನ್ನು ಇವತ್ತಿಗೂ ಹೊಂದಿದ್ದರೆ ಹಲವರಲ್ಲಿ ರಶೀದಿ ಇಲ್ಲವಾಗಿದೆ. ಇಂತಹ ಜಮೀನಿನಲ್ಲಿ ಕಾಲ ಕ್ರಮೇಣ ಅವರ ಕುಂಮ್ರಿ ಮಾಡುವುದನ್ನು ಬಿಟ್ಟಿದ್ದು ಅಲ್ಲಿ ಗಿಡಗಂಟಿಗಳು ಬೆಳೆದುಕೊಂಡಿದೆ.

ಇಂದು ಅಲ್ಲಿ ಸುಮಾರು 70-80 ಕುಟುಂಬಗಳಿವೆ. ಅವರು ತಮ್ಮ ಜೀವನ ನಿರ್ವಹಣೆ ಮಾಡಲು ಹೋದರೆ ಅರಣ್ಯ ಇಲಾಖೆಯವರು ಒಕ್ಕಲೆಬ್ಬಿಸುವ ಕಾರ್ಯ ಮಾಡುತ್ತಿದ್ದಾರೆ. ಕಾರಣ ಅಂದು ಬ್ರಿಟೀಶರು ಕುಂಮ್ರಿ ರಶೀದಿ ಕೊಟ್ಟಿದ್ದರೂ ಕೂಡಾ ಜಾಗಾ ಅರಣ್ಯ ಇಲಾಖೆ ಹೆಸರಿನಲ್ಲಿಯೇ ಮುಂದುವರಿದುಕೊಂಡು ಬಂದಿರುವುದು. ಕುಂಮ್ರಿ ಮರಾಠಿಗರೆಂದೇ ಕರೆಯುವಇವರು ಇಂದು ಬಹಳ ಸಂಕಷ್ಟದಲ್ಲಿದ್ದಾರೆ. ಇವರು ಸಾಂಪ್ರದಾಯಿಕ ಬುಡಕಟ್ಟು ಜನಾಂಗದವರಾಗಿದ್ದು ಕಾಡೇ ಇವರ ಜೀವನವಾಗಿದೆ.

ಇಂದಿಗೂ ಅದೇ ಪರಿಸ್ಥಿತಿಯಲ್ಲಿರುವ ಇವರು ಎಸ್‌ಟಿ ಪ್ರಮಾಣ ಪತ್ರದಿಂದ ವಂಚಿತರಾಗಿದ್ದಾರೆ.ಹಾಡುವಳ್ಳಿಯಿಂದ 2-3 ಕಿಮೀ ದೂರದಲ್ಲಿರುವ ಇವರ ಸಂಬಂಧಿಕರುಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಆದರೆ ಇವರು ಯಾವುದೋ ಒಂದು ತಪ್ಪು ಗ್ರಹಿಕೆಯಿಂದ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರಪಡೆಯಲು ಸಾಧ್ಯವಾಗುತ್ತಿಲ್ಲ. ಇವುಗಳು ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದಲ್ಲಿ ಬಗೆಹರಿದಾವೇ ಎಂದು ನೋಡಬೇಕಾಗಿದೆ. ಹಾಡುವಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿಇನ್ನೊಂದು ಬಹು ದೊಡ್ಡ ಸಮಸ್ಯೆ ಕಾಡುತ್ತಿರುವುದೆಂದರೆ, ಕಸ್ತೂರಿ ರಂಗನ್‌ ವರದಿಯದು. ಅವರ ವರದಿ ಪ್ರಕಾರ ಗ್ರಾಮದ 17 ಹಳ್ಳಿಗಳಲ್ಲಿ 15 ಹಳ್ಳಿಗಳೂ ಈವ್ಯಾಪ್ತಿಯಲ್ಲಿ ಬರುತ್ತವೆ. ಇವುಗಳು ವರದಿ ವ್ಯಾಪ್ತಿಯಲ್ಲಿ ಸೇರ್ಪಡೆಯಾದರೆ, ಅಲ್ಲಿ ಅಭಿವೃದ್ಧಿಯು ಮರೀಚಿಕೆಯಾಗಲಿದೆ. ಕಸ್ತೂರಿ ರಂಗನ್‌ ವರದಿಯನ್ನು ಪುನಃ ಅಧ್ಯಯನ ಮಾಡಬೇಕು. ಜನವಸತಿ ಪ್ರದೇಶಗಳನ್ನು ಗುರುತಿಸಿ ಇವುಗಳನ್ನು ಆ ವ್ಯಾಪ್ತಿಯಿಂದ ಹೊರಗಿಡಬೇಕು ಎನ್ನುವ ಕೂಗು ಬಹಳ ವರ್ಷಗಳಿಂದ ಕೇಳಿ ಬರುತ್ತಿದೆ. ಪುನಃ ಅಧ್ಯಯನಕ್ಕೆ ಅವಕಾಶ ನೀಡಿ ಸರಕಾರ ವರದಿ ತರಿಸಿಕೊಂಡು ಈ ಭಾಗದ ಜನಕ್ಕೆ ನ್ಯಾಯ ಕೊಡಬೇಕು ಎನ್ನುವುದು ಎಲ್ಲರ ಆಶಯವಾಗಿದೆ.

Advertisement

 

-ಆರ್‌.ಕೆ. ಭಟ್ಟ.

Advertisement

Udayavani is now on Telegram. Click here to join our channel and stay updated with the latest news.

Next