Advertisement

ಡೀಸಿ ವಿಜಯ್‌ ಶಂಕರ್‌, ಎಸಿ ನಾಗರಾಜ್‌ ಜೈಲಿಗೆ

01:06 AM Jul 13, 2019 | Lakshmi GovindaRaj |

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್‌ ಖಾನ್‌ ಬಳಿ ಲಂಚ ಸ್ವೀಕರಿಸಿದ ಆರೋಪ ಎದುರಿಸುತ್ತಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಎಂ.ವಿಜಯ್‌ ಶಂಕರ್‌ ಹಾಗೂ ಉತ್ತರ ವಿಭಾಗದ ಉಪವಿಭಾಗಾಧಿಕಾರಿ (ಎಸಿ) ಎಲ್‌.ಸಿ.ನಾಗರಾಜ್‌ ಅವರನ್ನು ಜು.25ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಎಸಿಎಂಎಂ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ.

Advertisement

ಮತ್ತೂಂದೆಡೆ ಮನ್ಸೂರ್‌ ಖಾನ್‌ನಿಂದ 1.5 ಕೋಟಿ ರೂ. ಲಂಚ ಪಡೆದ ಆರೋಪದಲ್ಲಿ ಜೈಲು ಸೇರಿರುವ ಡೀಸಿ ವಿಜಯ್‌ ಶಂಕರ್‌ ವಿರುದ್ಧ ದಾಖಲಾಗಿರುವ ಮತ್ತೂಂದು ಪ್ರತ್ಯೇಕ ಪ್ರಕರಣದಲ್ಲಿ ಒಂದು ಕೋಟಿ ರೂ. ಲಂಚ ಸ್ವೀಕರಿಸಿದ ಆರೋಪ ಕೇಳಿಬಂದಿದೆ.

ಎಸ್‌ಐಟಿ ತನಿಖೆಯಲ್ಲಿ ವಿಜಯ್‌ ಶಂಕರ್‌ ಮತ್ತೂಂದು ಕೇಸ್‌ನಲ್ಲಿ ಒಂದು ಕೋಟಿ ರೂ. ಲಂಚ ಪಡೆದಿರುವುದು ಕಂಡುಬಂದಿದ್ದು, ಆ ಹಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಈ ಕುರಿತ ಮುಂದಿನ ಕಾನೂನು ಕ್ರಮ ಜರುಗಿಸಲು ಭ್ರಷ್ಟಾಚಾರ ನಿಗ್ರಹ ದಳಕ್ಕೆ ವರದಿ ಸಲ್ಲಿಸಲಾಗುವುದು ಎಂದು ಎಸ್‌ಐಟಿ ತಿಳಿಸಿದೆ.

ಮನ್ಸೂರ್‌ ಖಾನ್‌ ಲಂಚದ ರೂಪವಾಗಿ ಪಡೆದಿದ್ದ 1.5 ಕೋಟಿ ರೂ.ಗಳನ್ನು ನಗರದ ಬಿಲ್ಡರ್‌ ಒಬ್ಬರಿಗೆ ಫ್ಲಾಟ್‌ ಹಾಗೂ ನಿವೇಶನ ಖರೀದಿಗಾಗಿ ವಿಜಯ್‌ಶಂಕರ್‌ ನೀಡಿದ್ದರು. ಈ ಸುಳಿವು ಆಧರಿಸಿ ಬಿಲ್ಡರ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ವಿಜಯ್‌ ಶಂಕರ್‌ ಪರವಾಗಿ ಮತ್ತೂಬ್ಬರಿಂದ ಒಂದು ಕೋಟಿ ರೂ. ನಗದು ಪಡೆದುಕೊಂಡಿದ್ದಾಗಿ ಬಿಲ್ಡರ್‌ ಮಾಹಿತಿ ನೀಡಿದ್ದ.

ಹೀಗಾಗಿ ಬಿಲ್ಡರ್‌ ಬಳಿಯಿದ್ದ ವಿಜಯ್‌ ಶಂಕರ್‌ಗೆ ಸೇರಿದ ಲಂಚದ ರೂಪದ 2.5 ಕೋಟಿ ರೂ.ಗಳನ್ನೂ ಜಪ್ತಿ ಮಾಡಿದ್ದು, ತನಿಖೆ ಮುಂದುವರಿಸಿರುವುದಾಗಿ ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

1.5 ಕೋಟಿ ರೂ. ತಂದೊಪ್ಪಿಸಿದ ಅಡೋನಿ: ನಗರದಲ್ಲಿ ಫ್ಲೈ ಓವರ್‌ ನಿರ್ಮಾಣಕ್ಕೆ ಐಎಂಎ ಸಹಭಾಗಿತ್ವ ಹೊಂದಿದ್ದ ಅಡೋನಿ ಕಂಪನಿ ಎಚ್ಚೆತ್ತುಕೊಂಡಿದೆ. ಮುಂಗಡವಾಗಿ ಒಪ್ಪಂದದ ಕರಾರಿನಂತೆ ಐಎಂಎ ನೀಡಿದ್ದ 1.5 ಕೋಟಿ ರೂ.ಗಳನ್ನು ಅಡೋನಿ ಕಂಪನಿ ಎಸ್‌ಐಟಿ ನೀಡಿದೆ. 1.5 ಕೋಟಿ ರೂ.ಗಳ ಡಿಡಿಯನ್ನು ಅಡೋನಿ ಸಂಸ್ಥೆ ಶುಕ್ರವಾರ ಒಪ್ಪಿಸಿದ್ದು, ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ರೌಡಿ ಶೀಟರ್‌ ಗನ್‌ ಮುನೀರ್‌ ಬಂಧನ: ಐಎಂಎ ಕಂಪನಿಯಲ್ಲಿ ಹಣ ಕಳೆದುಕೊಂಡು ಕಂಗೆಟ್ಟ ಹೂಡಿಕೆದಾರರನ್ನು ವಂಚಿಸಲು ಯತ್ನಿಸಿದ ರೌಡಿಶೀಟರ್‌ ಗನ್‌ ಮುನೀರನನ್ನು ಎಸ್‌ಐಟಿ ಬಂಧಿಸಿದೆ. ರಿಚ್‌ಮಂಡ್‌ ರಸ್ತೆಯಲ್ಲಿರುವ ಐಎಂಎಗೆ ಸೇರಿದ ಅಪಾರ್ಟ್‌ಮೆಂಟ್‌ಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಮುನೀರ್‌ ಹಾಗೂ ಬ್ರಿಗೇಡ್‌ ಬಾಬು, ಫ್ಲಾಟ್‌ಗಳನ್ನು ಮಾರಾಟ ಮಾಡಲು ಯತ್ನಿಸಿದ್ದರು. ತನಿಖೆ ವೇಳೆ ಈ ಮಾಹಿತಿ ಗೊತ್ತಾಗಿದ್ದರಿಂದ ಇಬ್ಬರೂ ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಕೆಲವು ಮೌಲ್ವಿಗಳಿಗೆ ಸಂಕಷ್ಟ: ಐಎಂಎಯಲ್ಲಿ ಜನರಿಗೆ ಹಣ ಹೂಡಿಕೆ ಮಾಡಲು ಹಲವು ಮಂದಿ ಮೌಲ್ವಿಗಳು ಪ್ರೇರೆಪಿಸಿ ಅದಕ್ಕೆ ಪ್ರತಿಯಾಗಿ ಮನ್ಸೂರ್‌ನಿಂದ ಹಣ, ಉಡುಗೊರೆ ಪಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದ್ದು. ಈ ಪೈಕಿ ಹಲವು ಮಂದಿ ಮೌಲ್ವಿಗಳಿಗೆ ಜುಲೈ 15ರಂದು ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next