ಕೋಲಾರ: ಕೊರೊನಾದಿಂದ ಕಳೆದ 2 ವರ್ಷ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಿದ್ದು, ಈ ಬಾರಿ ರಾಜ್ಯಕ್ಕೆ ಮಾದರಿಯಾಗುವಂತೆ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದರು.
ಶುಕ್ರವಾರ ತಮ್ಮ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ನಡೆದ 2022ನೇ ಸಾಲಿನ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಬಗ್ಗೆ ಚರ್ಚಿಸುವ ಸಭೆಯಲ್ಲಿ ಮಾತನಾಡಿ, ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸರ್ಕಾರಿ ಕಚೇರಿಗಳಿಂದ ಸ್ತಬ್ಧ ಚಿತ್ರಗಳ ಮೆರವಣಿಗೆ ಮಾಡಬೇಕು. ಕೋಲಾರ ಜಿಲ್ಲೆಯಲ್ಲಿ ವಿಶೇಷ ಸಾಧನೆ ಮಾಡಿರುವ ವ್ಯಕ್ತಿಗಳ ಭಾವಚಿತ್ರ ಹಾಗೂ ಜಿಲ್ಲೆಯ ಕಲೆ, ಸಂಸ್ಕೃತಿಗೆ ಸಂಬಂಧಿಸಿದ ಸ್ತಬ್ಧಚಿತ್ರಗಳ ಮೆರವಣಿಗೆ ಶ್ರೀವಿಶ್ವೇಶ್ವರಯ್ಯ ಕ್ರೀಡಾಂಗಣದಿಂದ ಪ್ರಾರಂಭವಾಗಲಿದೆ ಎಂದರು.
ಸಾಧನೆಗೈದ ವ್ಯಕ್ತಿಗಳ ಭಾವಚಿತ್ರ ಮೆರವಣಿ: ಕರ್ನಾಟಕ ರಾಜ್ಯದಲ್ಲಿ ವಿಶೇಷ ಸಾಧನೆಗೈದ ವ್ಯಕ್ತಿಗಳ ಬಗ್ಗೆ ಸ್ತಬ್ಧಚಿತ್ರಗಳಲ್ಲಿ ಹಾಗೂ ಜಿಲ್ಲೆಯ ಕೆ.ಸಿ.ರೆಡ್ಡಿ, ಡಿ.ವಿ.ಗುಂಡಪ್ಪ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಇನ್ನು ಮುಂತಾದ ವ್ಯಕ್ತಿಗಳ ಭಾವಚಿತ್ರವನ್ನು ಮೆರವಣಿಯಲ್ಲಿ ಪ್ರದರ್ಶನ ಮಾಡಲಾಗುವುದು. ವಿವಿಧ ಇಲಾಖೆಗಳಿಗೆ ವಹಿಸಿದ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ನಾಡಿನ ಸಂಸ್ಕೃತಿ, ನೆಲ, ಜಲ ಹಾಗೂ ಕರ್ನಾಟಕದ ಬಗ್ಗೆ ತಿಳಿಸುವ ಒಳ್ಳೆಯ ವಿಚಾರಧಾರೆಗಳನ್ನು ಜನರಿಗೆ ಮತ್ತು ಮಕ್ಕಳಿಗೆ ಕನ್ನಡದ ಸಂಸ್ಕೃತಿ ಮತ್ತು ಭಾಷೆಯ ಬಗ್ಗೆ ತಿಳುವಳಿಕೆ ನೀಡುವಂತಹ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಬೇಕು ಎಂದು ತಿಳಿಸಿದರು.
ಎಲ್ಲಾ ಗ್ರಾಪಂಗಳಲ್ಲಿ ಮೆರವಣಿಗೆ: ಜಿಪಂ ಸಿಇಒ ಎಸ್.ಯುಕೇಶ್ ಕುಮಾರ್ ಮಾತನಾಡಿ, ಕೋಲಾರ ತಾಲೂಕಿನ ಎಲ್ಲಾ ಗ್ರಾಪಂಗಳಿಂದಲೂ ಸ್ತಬ್ಧಚಿತ್ರ, ಪಲ್ಲಕ್ಕಿಗಳ ಮೆರವಣಿಗೆ ನಡೆಯಲಿದೆ. ಕನ್ನಡ ರಾಜ್ಯೋತ್ಸವವನ್ನು ಜಿಲ್ಲೆಯ ಎಲ್ಲರೂ ಸೇರಿ ಯಶಸ್ವಿಯಾಗಿ ಆಚರಿಸೋಣ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಯಿಂದ ವಿವೇಕಾನಂದ, ವಿಶ್ವೇಶ್ವರಯ್ಯ ವೇಷ ಧಾರಿಗಳಾಗಿ ಶಾಲಾ ಮಕ್ಕಳು ಭಾಗವಹಿಸುವರು. ಪಶು ಸಂಗೋಪನೆ ಇಲಾಖೆಯಿಂದ ಹಳ್ಳಿಯ ಪರಿಸರದ ವಾತಾವರಣ, ಶಿಕ್ಷಣ ಇಲಾಖೆಯಿಂದ ವಚನಕಾರರ ಸ್ತಬ್ಧಚಿತ್ರ, ಜಿಪಂನಿಂದ ಶಿವಾರಪಟ್ಟಣದ ಶಿಲ್ಪಿಗಳು ಹಾಗೂ ಚೋಳರ ಕಾಲದ ದೇವಾಲಯಗಳಾದ ಕುರುಡುಮಲೆ, ಕೋಲಾರಮ್ಮ ದೇವಸ್ಥಾನ, ಸಣ್ಣ ನೀರಾವರಿ ಇಲಾಖೆಯಿಂದ ಡಿ.ವಿ.ಗುಂಡಪ್ಪ ಭಾವಚಿತ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 40 ಕಲಾ ತಂಡಗಳ ಮೆರವಣಿಗೆ ಸೇರಿದಂತೆ ವಿವಿಧ ಇಲಾಖೆ ಗಳಿಂದ ಇನ್ನು ಮುಂತಾದ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮೀ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜಗದೀಶ್, ತಹಶೀಲ್ದಾರ್ ನಾಗರಾಜ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸರೆಡ್ಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕಿ ಶಶಿಕಲಾ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.