ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಉಪ್ಪಲದಿನ್ನಿ ಗ್ರಾಮದಲ್ಲಿ ಮಾ. 19ರಂದು ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಹೀಗಾಗಿ ಅಧಿಕಾರಿಗಳು ಸದರಿ ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳ ಸಮಸ್ಯೆಗಳನ್ನು ಆಲಿಸಿ, ತ್ವರಿತವಾಗಿ ಸ್ಪಂದಿಸುವಂತೆ ಜಿಲ್ಲಾಧಿಕಾರಿ ಸುನೀಲಕುಮಾರ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಬುಧವಾರ ತಮ್ಮ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಜರುಗಿದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.
ಉಪ್ಪಲದಿನ್ನಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ, ಸ್ಮಶಾನ ಭೂಮಿ ಸಮಸ್ಯೆ, ಪಿಂಚಣಿ, ವೈಯಕ್ತಿಕ ಮತ್ತು ಸಮುದಾಯ ಶೌಚಾಲಯ, ರಸ್ತೆ, ವಿವಿಧ ಯೋಜನೆಗಳಲ್ಲಿನ ಮನೆಗಳ ನಿರ್ಮಾಣ ಸೇರಿದಂತೆ ಗ್ರಾಮದ ಅಗತ್ಯ ಮೂಲಭೂತ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಉಪ್ಪಲದಿನ್ನಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಯವರ ಕಾಲೋನಿಯಲ್ಲಿ ಚರಂಡಿ ಸಮಸ್ಯೆ ಗಂಭೀರವಾಗಿದೆ. ಕೂಡಲೇ ಪರಿಹರಿಸಲು ನಾನೇ ಖುದ್ದಾಗಿ ಭೇಟಿ ನೀಡಿ ಸ್ಥಳೀಯರೊಂದಿಗೆ ಚರ್ಚೆ ನಡೆಸುತ್ತೇನೆ. ಕಳೆದ ಕೆಲವು ವರ್ಷಗಳಿಂದ ಇಲ್ಲಿನ ಎಸ್ಸಿ ಕಾಲೋನಿಯಲ್ಲಿ ಚರಂಡಿ ಸಮಸ್ಯೆಯು ಜನರಿಗೆ ಮಳೆಗಾಲದಲ್ಲಿ ದೊಡ್ಡ ಸಮಸ್ಯೆಯಾಗುತ್ತಿರುವುದು ತಿಳಿದು ಬಂದಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಿ, ಜನರ ಈ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದರು.
ಸ್ಥಳೀಯ ರೈತರೊಂದಿಗೆ ಸಂವಾದ ಸಭೆ ನಡೆಸಿ ಹೊಲಕ್ಕೆ ಹೋಗುವ ಕಾಲುದಾರಿ, ಮಮದಾಪುರ ಕೆರೆ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುತ್ತದೆ. ಸರ್ಕಾರ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೈಗೊಂಡಿರುವ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯ ಹಿನ್ನೆಲೆಯಲ್ಲಿ ಅಂದೂ ಕೂಡ ಗ್ರಾಮದ ಕೆಲವು ಜನರಿಗೆ ತಾವೂ ಖುದ್ದಾಗಿ ದಾಖಲೆಗಳನ್ನು ವಿತರಿಸುವುದಾಗಿ ಹೇಳಿದರು.
ಗ್ರಾಮದ ಪ್ರತಿಯೊಬ್ಬರಿಗೂ ಸರ್ಕಾರದ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಕಾರ್ಡ್ ವಿತರಿಸಬೇಕು. ಸದರಿ ಕಾರ್ಯಕ್ರಮವನ್ನು ಅತ್ಯಂತ ಸುವ್ಯವಸ್ಥಿತವಾಗಿ ಆಯೋಜಿಸಲು ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಜಿಪಂ ಸಿಇಒ ರಾಹುಲ್ ಶಿಂಧೆ ಮಾತನಾಡಿ, ಉಪ್ಪಲದಿನ್ನಿ ಗ್ರಾಮದಲ್ಲಿ ಕಣ್ಣಿನ ಸಮಸ್ಯೆ ಇರುವ ಜನರಿಗೆ ನೇತ್ರ ತಪಾಸಣಾ ಶಿಬಿರ ಆಯೋಜಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ, ಬಬಲೇಶ್ವರ ತಹಶೀಲ್ದಾರ್ ಸಂತೋಷ ಮ್ಯಾಗೇರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.