ಹುಬ್ಬಳ್ಳಿ: ನಗರದಲ್ಲಿ ನಡೆಯುತ್ತಿರುವ ಸಿಆರ್‌ಎಫ್ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗಿರುವ ಅತಿಕ್ರಮಣ ತೆರವು ಕಾರ್ಯಾಚರಣೆ ಆರಂಭಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ದೀಪಾ ಚೋಳನ್ ಖಡಕ್ ಸೂಚನೆ ನೀಡಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ನೇತೃತ್ವದಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳಲ್ಲಿ ಸಭೆಯ ಗಂಭೀರತೆ ಇಲ್ಲದಂತಾಗಿದೆ. ಕೆಲ ಅಧಿಕಾರಿಗಳು ಉದಾಸೀನ ತೋರುತ್ತಿದ್ದು, ಕಾಟಾಚಾರಕ್ಕೆ ಬಂದು ಹಾರಿಕೆ ಉತ್ತರ ನೀಡುವುದನ್ನು ರೂಢಿಸಿಕೊಂಡಿದ್ದಾರೆ. ಅಭಿವೃದ್ಧಿ ಯೋಜನೆಗಳ ವಿಚಾರದಲ್ಲಿ ಇಂತಹ ನಿರ್ಲಕ್ಷ್ಯ ಸರಿಯಲ್ಲ. ಕೂಡಲೇ ಅತಿಕ್ರಮಣ ಕುರಿತ ಮಾಹಿತಿ ನೀಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ತಡಕಾಡಿದ ಅಧಿಕಾರಿಗಳು: ರಸ್ತೆ ಅತಿಕ್ರಮಣ ಮಾಡಿದವರಿಗೆ ನೋಟಿಸ್ ನೀಡಿರುವ ಕುರಿತು ಜಿಲ್ಲಾಧಿಕಾರಿ ದೀಪಾ ಚೋಳನ್ ಪ್ರಶ್ನಿಸಿದ್ದಕ್ಕೆ, ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ನೋಟಿಸ್ ಪ್ರತಿ ನೀಡುವಂತೆ ಜಿಲ್ಲಾಧಿಕಾರಿ ಕೇಳಿದಾಗ ಪಾಲಿಕೆ ಅಧಿಕಾರಿಗಳು ತಡಕಾಡಿದ ಪ್ರಸಂಗ ನಡೆಯಿತು. ಕೆಲವರಿಗೆ ನೀಡಲಾಗಿದೆ ಇನ್ನೂ ಕೆಲವರಿಗೆ ನೀಡಲಾಗುವುದು ಎಂದು ಸಬೂಬು ನೀಡುವ ಪ್ರಯತ್ನಕ್ಕೆ ಮುಂದಾದಾಗ, ಇಂತಹ ಹಾರಿಕೆ ಉತ್ತರ ನಡೆಯೋದಿಲ್ಲ. ಕಾನೂನು ಪ್ರಕಾರ ನೋಟಿಸ್ ನೀಡಿ ರಸ್ತೆ ಅತಿಕ್ರಮಣವಾಗಿದ್ದರೆ ಪೊಲೀಸ್ ಭದ್ರತೆಯಲ್ಲಿ ಯಾವುದೇ ಮುಲಾಜಿಲ್ಲದೆ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅನುದಾನ ಬಿಡುಗಡೆಯಾಗುತ್ತಿಲ್ಲ: ಸಿಆರ್‌ಎಫ್ ಯೋಜನೆಯ ರಸ್ತೆಗಳ ಕಾಮಗಾರಿ ಯಾಕೆ ನಿಧಾನವಾಗಿ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಅಧಿಕಾರಿಗಳಿಗೆ ಪ್ರಶ್ನಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಇ ಎನ್.ಎಂ. ಕುಲಕರ್ಣಿ, ಗುತ್ತಿಗೆದಾರರು ಇದಕ್ಕೆ ಕಾರಣ ಎಂದು ಉತ್ತರಿಸಿದರು. ಇದರಿಂದ ಅಸಮಾಧಾನಗೊಂಡ ಗುತ್ತಿಗೆದಾರರು, ಇದುವರೆಗೆ ಪ್ರತಿಯೊಬ್ಬ ಗುತ್ತಿಗೆದಾರ ಸುಮಾರು 20-30 ಕೋಟಿ ರೂ. ವೆಚ್ಚದ ಕಾಮಗಾರಿ ಮಾಡಿದ್ದಾರೆ. ಆದರೆ ನಮಗೆ ಬಂದಿರೋದು ಕೇವಲ 4-6 ಕೋಟಿ ರೂ. ಮಾತ್ರ. ಸರಕಾರ ಯಾವುದೇ ಬಿಲ್ ಪಾವತಿ ಮಾಡುತ್ತಿಲ್ಲ. ಹೀಗಿರುವಾಗ ಕೆಲಸ ಮಾಡುವುದಾರೂ ಹೇಗೆ ಎಂದು ಪ್ರಶ್ನಿಸಿದರು.
ತೆರವಿಗೆ ಚೋಳನ್ ಒಪ್ಪಿಗೆ: ಇಂಡಿ ಪಂಪ್-ಉಣಕಲ್ಲ ವರೆಗೆ ನಡೆಯುತ್ತಿರುವ ಕಾಮಗಾರಿಗೆ ತೊಡಕಾಗಿರುವ ವಾಯವ್ಯ ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿ ಕಾಂಪೌಂಡ್ ಗೋಡೆ ತೆರವುಗೊಳಿಸಲು ಅನುಮತಿ ನೀಡುವುದಾಗಿ ವಾಯವ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಸಭೆಯಲ್ಲಿ ತಿಳಿಸಿದರು. ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.