ರಾಯಚೂರು: ಕೋವಿಡ್ 19 ಹಾವಳಿಗೆ ಸಿಲುಕಿ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಮುಂದಿನ ವಾರ ಪ್ರಧಾನ ಮಂತ್ರಿ ಗರೀಬ್ ಯೋಜನೆಯಡಿ ನೇರವಾಗಿ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ವಿವಿಧ ಬ್ಯಾಂಕ್‌ಗಳ ವ್ಯವಸ್ಥಾಪಕರ ಸಭೆ ನಡೆಸಿದ ಅವರು, ಕೋವಿಡ್ 19 ವೈರಸ್ ಹರಡಂತೆ ತಡೆಯಲು ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ್ದು, ಅದರಿಂದ ಸಾಕಷ್ಟು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಮುಖ್ಯವಾಗಿ ರೈತರು, ವಿಕಲಚೇತನರು ಹಾಗೂ ಜನ್‌ಧನ್ ಖಾತೆ ಹೊಂದಿದ ಮಹಿಳಾ ಫಲಾನುಭವಿಗಳಿಗೆ ನೆರವಾಗಲೂ ಅವರ ಬ್ಯಾಂಕ್‌ಖಾತೆಗಳಿಗೆ ಏಪ್ರಿಲ್ ಮೊದಲನೇ ವಾರದಲ್ಲಿ ಹಣ ಜಮೆ ಆಗಲಿದೆ ಎಂದು ತಿಳಿಸಿದರು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಹೆಸರು ನೋಂದಾಯಿಸಿದವರಿಗೆ ಮುಂದಿನ 3 ತಿಂಗಳು 2000 ರೂ. ಪಾವತಿಸಲಾಗುತ್ತದೆ. ಜನ್‌ಧನ್ ಖಾತೆ ಹೊಂದಿದ ಮಹಿಳೆಯರಿಗೆ 500 ರೂ. ಮತ್ತು ವಿಧವೆ, ಬಡ ನಾಗರಿಕರು, ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ 3 ತಿಂಗಳವರೆಗೆ ಸಾವಿರ ರೂ. ಜಮೆ ಮಾಡಲಾಗುತ್ತದೆ. 2 ಲಕ್ಷ ರೈತರಿಗೆ 2000 ರೂ. ಮತ್ತು 22 ಸಾವಿರಕ್ಕಿಂತ ಅಧಿಕ ವಿಕಲಚೇತನರಿಗೆ 1000 ರೂ. ಸಿಗಲಿದೆ. ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ 3 ತಿಂಗಳು ಉಚಿತ ಅಡುಗೆ ಅನಿಲ ವಿತರಿಸಲಾಗುತ್ತದೆ. ಸ್ವಸಹಾಯ ಸಂಘಗಳಿಗೆ ಹೆಚ್ಚುವರಿಯಾಗಿ 20 ಲಕ್ಷ ಮೇಲ್ಪಟ್ಟು ಸಾಲ ನೀಡುವುದಾಗಿ ತಿಳಿಸಿದರು.
ಕೋವಿಡ್ 19 ಸೋಂಕಿತರಿಗೆ ಚಿಕಿತ್ಸೆ ನೀಡುವ ವೇಳೆ ವೈದ್ಯರು, ನರ್ಸ್ ಗಳು ಮತ್ತು ಸಿಬ್ಬಂದಿ ಆಕಸ್ಮಿಕವಾಗಿ ಮೃತಪಟ್ಟರೆ ಅವರ ಕುಟುಂಬಕ್ಕೆ 50 ಲಕ್ಷ ರೂ. ವಿಮೆ ಹಣ ಪಾವತಿಸಲಾಗುತ್ತದೆ. ಈಗಾಗಲೇ ಮೂರು ತಿಂಗಳ ಪಡಿತರ ನೀಡಲು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸೂಚಿಸಲಾಗಿದೆ ಎಂದರು.
ಗುಳೆ ಹೋಗಿದ್ದ 60 ಸಾವಿರಕ್ಕೂ ಅಧಿಕ ಜನ ಮರಳಿ ಬಂದಿದ್ದು, ಅವರನ್ನು ಹೋಂ ಕ್ವಾರೆಂಟೈನ್‌ನಲ್ಲಿ ಇರಲು ಸೂಚಿಸಲಾಗಿದೆ. ಗ್ರಾಹಕರ ಖಾತೆಗಳಿಗೆ ಹಣ ಜಮಾಯಿಸಿದ ನಂತರ ಡ್ರಾ ಮಾಡಿಕೊಳ್ಳುವ ವೇಳೆ ಬ್ಯಾಂಕ್‌ಗಳಲ್ಲಿ ಜನದಟ್ಟಣೆ ಆಗದಂತೆ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಬ್ಯಾಂಕ್ ಗಳ ಮುಂದೆ ಪೆಂಡಾಲ್ ಹಾಕಿಸಬೇಕು ಎಂದು ತಿಳಿಸಿದರು. ಎಡಿಸಿ ದುರುಗೇಶ್, ಲೀಡ್ ಬ್ಯಾಂಕ್ ಸೇರಿದಂತೆ ಎಲ್ಲ ಬ್ಯಾಂಕ್ ಗಳ ವ್ಯವಸ್ಥಾಪಕರಿದ್ದರು.