ದೇವನಹಳ್ಳಿ: ನೀಲಗಿರಿ ಮರಗಳು ಅಂತರ್ಜಲಕ್ಕೆ ಕಂಟಕ. ಅಂತರ್ಜಲ ಹೆಚ್ಚಳಕ್ಕೆ ನೀಲಗಿರಿ ಮರಗಳನ್ನು ಬುಡ ಸಮೇತ ತೆರವುಗೊಳಿಸಬೇಕು. ರೈತರು ಸ್ವ ಇಚ್ಛೆಯಿಂದ ತಮ್ಮ ಜಮೀನುಗಳಲ್ಲಿ ಬೆಳೆದಿರುವ ನೀಲಗಿರಿ ಮರಗಳನ್ನು ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎಸ್. ಕರೀಗೌಡ ತಿಳಿಸಿದರು.
ತಾಲೂಕಿನ ಕುಂದಾಣ ಹೋಬಳಿ ಕೊಯಿರಾ ಪಂಚಾಯಿತಿ ವ್ಯಾಪ್ತಿಯ ರಬ್ಬನಹಳ್ಳಿ ಸಮೀಪ ಬೆಳೆದಿರುವ ನೀಲಗಿರಿ ಮರಗಳನ್ನು ಜೆಸಿಬಿ ಯಂತ್ರದಿಂದ ಬುಡ ಸಮೇತ ಕಟಾವಿಗೆ ಸಾಂಕೇತಿಕ ಚಾಲನೆ ನೀಡಿ ಮಾತನಾಡಿದರು.
ಪರಿಸ್ಥಿತಿ ಅರ್ಥೈಸಿಕೊಂಡು ನೀಲಗಿರಿ ತೆರವು ಮಾಡಿ: ಪಂಚಾಯಿತಿ ಸುತ್ತಲು ಸುಮಾರು 25 ಎಕರೆಯಷ್ಟು ಪ್ರದೇಶದಲ್ಲಿ ನೀಲಗಿರಿ ಮರಗಳನ್ನು ತೆರವುಗೊಳಿಸುವ ಗುರಿ ಹೊಂದ ಲಾಗಿದೆ. ಜಿಲ್ಲೆಯಲ್ಲಿ ಸುಮಾರು 1400 ರಿಂದ 1800ಕ್ಕೂ ಹೆಚ್ಚು ಕೊಳವೆ ಬಾವಿ ಕೊರೆಸಿದರೂ ನೀರು ಸಿಗದ ಪರಿಸ್ಥಿತಿ ತಲುಪಿದ್ದೇವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಹನಿ ನೀರಿಗೂ ಹೆಚ್ಚು ಪರದಾಡುವ ಪರಿಸ್ಥಿತಿಗೆ ತಲುಪಿ ಬಿಡುತ್ತೇವೆ. ಇದನ್ನು ರೈತರು ಅರ್ಥ ಮಾಡಿ ಕೊಂಡು ವೈಯಕ್ತಿಕವಾಗಿ ಮುಂದೇ ಬಂದು ಮರಗಳನ್ನು ತೆರವುಗೊಳಿಸುತ್ತಿರುವುದು ಸಂತ ಸದ ವಿಷಯವಾಗಿದೆ ಎಂದು ಹೇಳಿದರು.
ಮಾವು, ಬೇವಿನ ಗಿಡ ಬೆಳೆಸಿ: ಪ್ರಸ್ತುತ ಜಿಲ್ಲೆಯಲ್ಲಿ ಎಷ್ಟು ಎಕರೆ ನೀಲಗಿರಿ ಮರಗಳಿವೆ ಎಂಬುದುರ ಅಂಕಿ-ಅಂಶ ಕಲೆಹಾಕಲಾಗು ತ್ತಿದೆ. ಖಾಸಗಿ ಜಮೀನುಗಳಲ್ಲಿ ಬೆಳೆದಿರುವ ಮರಗಳನ್ನು ಕಟಾವು ಮಾಡಿಸಿದ ಬಳಿಕ ಸರ್ಕಾರಿ ಜಾಗಗಳಲ್ಲಿ ಬೆಳೆದ ಮರಗಳನ್ನು ಕಟಾವುಗೊಳಿಸಲಾಗುವುದು. ಈಗಾಗಲೇ ಆಲೂರು ದುದ್ದನಹಳ್ಳಿ ಗ್ರಾಮದಲ್ಲಿ ಗ್ರಾಮ ಲೆಕ್ಕಿಗರ ಸಹಕಾರದಿಂದ 10 ಎಕರೆ ನೀಲಗಿರಿ ಮರಗಳ ಕಟಾವು ಆಗಿದೆ. ಇದೇ ಗ್ರಾಮದ ರೈತ ಮುನೇಗೌಡರ 2 ಎಕರೆ ಜಮೀನಿನಲ್ಲಿ ಬೆಳೆದಿರುವ ನೀಲಗಿರಿ ಮರಗಳನ್ನು ತೆರವು ಗೊಳಿಸುತ್ತಿರುವುದು ಶ್ಲಾಘನೀಯ ವಾಗಿದೆ. ತೆರವುಗೊಂಡ ಜಾಗದಲ್ಲಿ ಮಾವು, ಹೆಬ್ಬೇವು, ಬೇವು ಈ ತರಹದ ಗಿಡಗಳನ್ನು ಹಾಕಿದರೆ ಹೆಚ್ಚು ಅನುಕೂಲವಾಗುತ್ತದೆ. ರೈತರು ಸಹ ಇದರಿಂದ ಹೆಚ್ಚು ಪ್ರಯೋಜನ ಪಡೆಯ ಬಹುದಾಗಿದೆ. ದಿನೇ ದಿನೆ ಅಂತರ್ಜಲ ಮಟ್ಟ ಹೆಚ್ಚಿಸುವ ಕಾರ್ಯಕ್ಕೆ ಜನಸಾಮಾನ್ಯರು ಮುಂದಾಗಬೇಕು. ಮುಂದಿನ ಪೀಳಿಗೆಯ ತಲಮಾರುಗಳಿಗೆ ಉಳಿಸುವ ಕಾರ್ಯವನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಕೈಜೋಡಿಸಿದರೆ ನೀಲಗಿರಿ ಮುಕ್ತ ಜಿಲ್ಲೆ: ಸಮಾಜ ಸೇವಕ ದ್ಯಾವರಹಳ್ಳಿ ಶಾಂತ ಕುಮಾರ್ ಮಾತನಾಡಿ, ಈಗಾಗಲೇ 25 ಎಕರೆಗಳಷ್ಟು ಬಡ ರೈತರ ಜಮೀನುಗಳಲ್ಲಿ ಬೆಳೆದ ನೀಲಗಿರಿ ಮರಗಳ ತೆರವು ಕಾರ್ಯ ಮಾಡಲಾಗುತ್ತಿದೆ. ರೈತರಿಂದ ಯಾವುದೇ ಅಪೇಕ್ಷೆ ಮಾಡದೆ ವೈಯಕ್ತಿಕವಾಗಿ ತೆರವು ಮಾಡುತ್ತಿದ್ದೇವೆ. ಯಾರಾದರೂ ತಾವಾಗಿಯೇ ಮುಂದೆ ಬಂದು ನೀಲಗಿರಿ ಮರಗಳ ಕಟಾವು ಮಾಡಿಸಿಕೊಡಿ ಎಂದು ಹೇಳಿದರೆ ಮಾಡಿಕೊಡಲಾಗುತ್ತದೆ. ಕಟಾವಿನ ಬಳಿಕ ರೈತರಿಗೆ ಬಿಟ್ಟುಕೊಡಲಾಗುವುದು ಅಥವಾ ಮಾರಿ ಅದಕ್ಕೆ ಬೆಲೆ ನಿಗಪಡಿಸಿ ರೈತರಿಗೆ ನೀಡಲಾಗುತ್ತದೆ. ಜಿಲ್ಲಾಧಿಕಾರಿಗಳು ಇಂತಹ ಮಹೋನ್ನತ ಕಾರ್ಯ ಮಾಡುತ್ತಿ ದ್ದಾರೆ. ಇವರೊಂದಿಗೆ ಎಲ್ಲರೂ ಕೈಜೋಡಿಸಿ ನಡೆದರೆ ಮಾತ್ರ ಜಿಲ್ಲೆಯಾದ್ಯಂತ ನೀಲಗಿರಿ ಮುಕ್ತವಾಗುತ್ತದೆ ಎಂದು ಹೇಳಿದರು.
ನೀಲಗಿರಿ ತೆರವು ಕಾರ್ಯಕ್ರಮದಲ್ಲಿ ಸಾಂಕೇತಿಕ ಚಾಲನೆ ನೀಡಿದ ಡೀಸಿ ಸಿ.ಎಸ್. ಕರೀಗೌಡ ಹಾಗೂ ಗ್ರಾಮಸ್ಥರು ನೀಲಗಿರಿ ತೋಪಿಗೆ ನುಗ್ಗಿ ಮರಗಳನ್ನು ಉರುಳಿಸಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ. ಪ್ರಸನ್ನಕುಮಾರ್, ತಾಪಂ ಅಧ್ಯಕ್ಷೆ ಚೈತ್ರಾ ವೀರೇಗೌಡ, ಗ್ರಾಪಂ ಅಧ್ಯಕ್ಷ ಕೆ.ಶ್ರೀನಿವಾಸ್, ಮುಖಂಡರಾದ ಕೆಂಪಣ್ಣ, ವೀರೇಗೌಡ, ರಬ್ಬನಹಳ್ಳಿ ಅರ್ಜುನ್ ಗೌಡ, ರೈತರು, ಗ್ರಾಮಸ್ಥರು ಇದ್ದರು.