ಮೈಸೂರು: ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗಿದೆ, ಸಾವಿನ ಸಂಖ್ಯೆಯೂ ಇಳಿದಿದೆ ಎಂಬ ತಾತ್ಸಾರಬೇಡ. ಎಲ್ಲರೂ ಎಚ್ಚರಿಕೆಯಿಂದಿರುವ ಮೂಲಕ ಕೋವಿಡ್ ಮುಕ್ತ ಮೈಸೂರಿಗೆ ಎಲ್ಲರೂಸಹಕರಿಸಿ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಮನವಿ ಮಾಡಿದರು.
ಕೋವಿಡ್ ಸೋಂಕಿನ ಕುರಿತು ಫೇಸ್‌ಬುಕ್ ಲೈವ್ ಮೂಲಕ ಶುಕ್ರವಾರ ಮಾತನಾಡಿದ ಅವರು, ಕಳೆದ 20 ರಿಂದ 25 ದಿನಗಳಲ್ಲಿ ಸೋಂಕಿತರ ಸಾವು ಪ್ರಕರಣದಲ್ಲಿ ಕಡಿಮೆಯಾಗಿದೆ. ಸಾವಿನ ಪ್ರಮಾಣವುಶೇ. 2.1ರಿಂದ ಶೇ.1.5ಕ್ಕೆ ಇಳಿದಿದೆ. ಒಟ್ಟಾರೆ ಸಾವಿನ ಸಂಖ್ಯೆ ಇಳಿಮುಖದಲ್ಲಿ ಪ್ರಗತಿಯಾಗಿದೆ ಎಂದರು. ಸರ್ಕಾರದ ನಿಯಮಾವಳಿ ಅನುಸಾರ ಶೇ.10ರಷ್ಟು ಮಂದಿಗೆ ಮಾತ್ರ ಆರ್‌ಇಟಿ ಪರೀಕ್ಷೆಯನ್ನು, ಉಳಿದ ಶೇ. 90ರಷ್ಟು ಮಂದಿಗೆ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲು ಸೂಚಿಸಿದೆ. ನಾವು ಬಹುಪಾಲು ಎಲ್ಲರಿಗೂ ಆರ್‌ಟಿಪಿ ಸಿಆರ್ ಪರೀಕ್ಷೆಯನ್ನೇ ನಡೆಸಿದ್ದೇವೆ ಎಂದು ತಿಳಿಸಿದರು.
ಸಾವಿರ ಹಾಸಿಗೆ: ಆಕ್ಸಿಜನ್ ಮತ್ತು ಬೆಡ್ ಲಭ್ಯತೆ ಬಗ್ಗೆ ದೂರು ಕೇಳಿ ಬರುತ್ತಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿ 1 ಸಾವಿರಕ್ಕೂ ಹೆಚ್ಚು ಬೆಡ್ ಲಭ್ಯವಿದೆ. ಹೊಸದಾಗಿ ನಿರ್ಮಿಸಲಾಗಿರುವ ಟ್ರಾಮಾ ಕೇಂದ್ರದಲ್ಲಿಯೂ 50 ಬೆಡ್ ಲಭ್ಯವಿದೆ. ಸರ್ಕಾರದ ವಶದಲ್ಲಿ 1,944 ಬೆಡ್ ಇದೆ. ಈ ಪೈಕಿ 652 ಬೆಡ್‌ನ್ನು ರೋಗಿಗಳು ಪಡೆದು ಕೊಂಡಿದ್ದಾರೆ. ಉಳಿದ 1,292 ಬೆಡ್ ಲಭ್ಯವಿದೆ. 211 ಆಕ್ಸಿಜನ್ ಬೆಡ್, 53 ವೆಂಟಿಲೇಟರ್ ಲಭ್ಯವಿದೆ. ಅಲ್ಲದೇ ತಾಲೂಕು ಮಟ್ಟದಲ್ಲಿ 50 ಆಕ್ಸಿಜನೇಟೆಡ್‌ಬೆಡ್ ಸಿದ್ಧವಿದೆ. ನಂಜನಗೂಡು, ಪಿರಿಯಾಪಟ್ಟಣ ಮತ್ತು ತಿ.ನರಸೀಪುರದಲ್ಲಿ ತಲಾ 3 ವೆಂಟಿಲೇಟರ್ ಬೆಡ್ಸ್ ಲಭ್ಯವಿದೆ ಅವರು ವಿವರಿಸಿದರು.
ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾ: ಖಾಸಗಿ ಆಸ್ಪತ್ರೆಯಿಂದ ಶೇ. 50 ರಷ್ಟು ಬೆಡ್‌ಗಳನ್ನು ಸರ್ಕಾರಕ್ಕೆ ನೀಡ ಬೇಕು ಎಂದು ಸೂಚಿಸಲಾಗಿದೆ. ಅದರಂತೆ ನಿಗಾವಹಿಸಲು ಓರ್ವ ಅಧಿಕಾರಿ ಮತ್ತು ಪೊಲೀಸರನ್ನು ಒಳಗೊಂಡ ತಂಡ ಆಗಾಗ್ಗೆ ಆಸ್ಪತ್ರೆ ತೆರಳಿ ಮಾಹಿತಿ ಕಲೆ ಹಾಕಲಿದೆ. ಹೆಚ್ಚಿನ ದರ ವಿಧಿಸಿದರೂ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಎಲ್ಲಾ ವಿವರವನ್ನು ಆಸ್ಪತ್ರೆಯ ಆವರಣದಲ್ಲಿ ಬೋರ್ಡ್‌ನಲ್ಲಿ ಹಾಕಲು ಸೂಚಿಸಲಾಗಿದೆ. ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರ ಪಡೆದರೆ ಅದನ್ನು ಹಿಂದಕ್ಕೆ ಕೊಡಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಎಂದರು.
ಸುರಕ್ಷತೆ: ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸ ಬೇಕು. ಆಗಾಗ್ಗೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳ ಬೇಕು.ಯಾವುದೇ ಲಕ್ಷಣ ಇಲ್ಲ ಎಂದು ಸುಮ್ಮನಿರ ಬಾರದು. ಸಂಪೂರ್ಣವಾಗಿ ಮೈಸೂರು ಕೋವಿಡ್ ಮುಕ್ತವಾಗುವವರೆಗೆ ನಾವು ಎಚ್ಚರಿಕೆಯಿಂದ ಹಾಗೂ ನಮ್ಮ ನಮ್ಮ ಸ್ಥಳದಲ್ಲಿಯೇ ಇದ್ದರೆ ಒಳ್ಳೆಯದು ಎಂದರು.
ಪ್ರತಿದಿನ 4-5 ಸಾವಿರ ಕೋವಿಡ್ ಪರೀಕ್ಷೆ :
ಜಿಲ್ಲೆಯಲ್ಲಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಿಎಫ್ಟಿಆರ್‌ಐನಲ್ಲಿ ಮಾತ್ರ ಕೋವಿಡ್ ಪರೀಕ್ಷೆ ನಡೆಸುವ ಪ್ರಯೋಗಾಲಯ ಇದೆ. ಈ ಎರಡೂ ಪ್ರಯೋಗಾಲಯದಿಂದ ದಿನಕ್ಕೆ 1500 ಮಂದಿಯ
ಮಾದರಿಯನ್ನು ಮಾತ್ರ ಪರೀಕ್ಷೆ ಮಾಡಬಹುದು. ಉಳಿದ ಸ್ಯಾಂಪಲ್‌ಗಳನ್ನು ನಾವು ಬೆಂಗಳೂರಿಗೆ ಕಳುಹಿಸುತ್ತೇವೆ. ಇದರಿಂದ ಫಲಿತಾಂಶ ಬರುವುದು 5 ರಿಂದ9 ದಿನದವರೆಗೆ ಕಾಯಬೇಕು. ಈ ಬಗ್ಗೆಯೂ ಸಾರ್ವಜನಿಕರಿಂದ ಸಾಕಷ್ಟು ದೂರು ಕೇಳಿ ಬರುತ್ತಿದೆ. ಹೀಗೆ ಐದಾರು ದಿನವಾದ ಬಳಿಕ ಫಲಿತಾಂಶ ನೀಡುವುದು ಸರಿಯಾದ ಪದ್ಧತಿ ಅಲ್ಲ. ಆದ್ದರಿಂದ ಹೆಚ್ಚಿನ ಪ್ರಯೋಗಾಲಯಕ್ಕೆ ಮನವಿ ಮಾಡಲಾಗಿದೆ. ಈಗ ಲಿಕ್ವಿಡ್ ಹ್ಯಾಂಡ್ಲಿಂಗ್ ವ್ಯವಸ್ಥೆ ಮಾಡಲು ಉದ್ದೇಶಿಸಿದ್ದು, 24 ಗಂಟೆಯೊಳಗೆ ಫಲಿತಾಂಶ ಲಭ್ಯವಾಗುತ್ತದೆ. ವಿಜಯದಶಮಿ ನಂತರ ನಾಗರಿಕರಿಗೆ ಆರ್‌ಟಿಪಿಸಿಆರ್ ಪರೀಕ್ಷೆ ಫಲಿತಾಂಶ ಇಲ್ಲಿಯೇ 24 ಗಂಟೆಯೊಳಗೆ ಲಭಿಸುತ್ತದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.