ಯಾದಗಿರಿ: ಕೋವಿಡ್-19 ಮೂರನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಯಾದಗಿರಿ ಜಿಲ್ಲೆಯ ಗಡಿ ಭಾಗಗಳಲ್ಲಿ ಹತ್ತು ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್. ತಿಳಿಸಿದರು. ಯರಗೋಳ ಚೆಕ್‌ಪೋಸ್ಟ್‌ಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಅವರು ಮಾತನಾಡಿದರು.
ಯಾದಗಿರಿ ತಾಲೂಕಿನ ಯರಗೋಳ, ಕಡೆಚೂರು. ಸುರಪುರ ತಾಲೂಕಿನ ಮಲ್ಲಾ ಬಿ, ತಿಂಥಣಿ. ಶಹಾಪುರ ತಾಲೂಕಿನ ಮುಡಬೋಳ. ಗುರುಮಿಠಕಲ್ ತಾಲೂಕಿನ ಗುರುಮಿಠಕಲ್ ಮತ್ತು ಕುಂಠಿಮರಿ, ಪುಟಪಾಕ್. ಹುಣಸಗಿ ತಾಲೂಕಿನ ನಾರಾಯಣಪುರ, ಮಾಳನೂರಗಳಲ್ಲಿ ಜಿಲ್ಲೆಗೆ ಹೊರರಾಜ್ಯ, ಬರುವ ಪ್ರಯಾಣಿಕರಿಗೆ ಪರಿಶೀಲಿಸಲು ಚೆಕ್ ಪೋಸ್ಟ್‌ಗಳಲ್ಲಿ ಶೆಡ್ ಗಳನ್ನು (ಕಂಟೇನರ್) ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಕೋವಿಡ್ ಶೆಡ್ (ಕಂಟೇನರ್) ವಿಶೇಷತೆ
ಕೋವಿಡ್ ತಪಾಸಣಾ ಕೇಂದ್ರವು ವ್ಯವಸ್ಥಿತ ಹಾಗೂ ಸುಂದರವಾಗಿ ನಿರ್ಮಿಸಲಾಗಿದೆ. ಕಬ್ಬಿಣದ ಶೀಟ್‌ನಿಂದ ನಿರ್ಮಿಸಿದ್ದು ಬಿಸಿಲಿನ ತಾಪವಾಗದಂತೆ ಒಳಗಡೆ ಪ್ಲೈವುಡ್‌ನಿಂದ ಲ್ಯಾಮಿನೇಟ್ ಮಾಡಲಾಗಿದೆ. ವ್ಯವಸ್ಥಿತವಾಗಿ ವಿದ್ಯುತ್ ಸಾಧನೆಗಳಾದ ಫ್ಯಾನ್ ಮತ್ತು ಟ್ಯೂಬ್ ಲೈಟ್‌ಗಳನ್ನು ಅಳವಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಯರಗೋಳ ಚೆಕ್‌ಪೋಸ್ಟ್‌ನಲ್ಲಿ ನಿರ್ಮಿಸ ಲಾದ ಶೆಡ್‌ನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ, ಪ್ರತಿಯೊಬ್ಬ ಪ್ರಯಾಣಿಕರನ್ನು ಕಡ್ಡಾಯವಾಗಿ ಕೋವಿಡ್ ತಪಾಸಣೆ ಮಾಡಿ ಪರಿಶೀಲಿಸಬೇಕು ಎಂದು ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಪ್ರಶಾಂತ ಹನಗಂಡಿ, ಯಾದಗಿರಿ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ನಿರ್ಮಿತಿ ಕೇಂದ್ರದ ಅಧಿಕಾರಿ ಕಿರಣ್ ಕುಮಾರ್ ಇದ್ದರು.