Advertisement

ರಸ್ತೆಗಳ ದುರಸ್ತಿಗೆ ಡಿಸಿ ಆದೇಶ

03:49 PM Oct 27, 2018 | Team Udayavani |

ದಾವಣಗೆರೆ: ಸುಗಮ ಸಂಚಾರಕ್ಕಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ರಸ್ತೆಗಳನ್ನು ದುರಸ್ತಿಗೊಳಿಸಲು ಕ್ರಮ ವಹಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಸೂಚಿಸಿದ್ದಾರೆ.

Advertisement

ಶುಕ್ರವಾರ, ತಮ್ಮ ಕಚೇರಿಯಲ್ಲಿ ಸಭಾಂಗಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ದಾವಣಗೆರೆಯಲ್ಲಿ ಸಾಕಷ್ಟು ರಸ್ತೆಗಳು ಹದಗೆಟ್ಟಿರುವುದರಿಂದ ಸಾರ್ವಜನಿಕರು, ವಾಹನ ಸವಾರರು, ಪಾದಚಾರಿಗಳಿಗೆ ತೀವ್ರ ತೊಂದರೆ ಆಗುತ್ತಿದೆ. ಕೂಡಲೇ ಈ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದರು. 

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ಕುಮಾರ್‌ ಮಾತನಾಡಿ, ನಗರದಲ್ಲಿ ಶೇ. 40ರಷ್ಟು ಬೀದಿ ದೀಪಗಳು ಸರಿಯಿಲ್ಲ. ಇದರಿಂದ ಅಪಘಾತದ ಸಂಖ್ಯೆ ಹೆಚ್ಚಾಗುತ್ತಿವೆ. ಪಾಲಿಕೆಯು ರಸ್ತೆ ಅಭಿವೃದ್ಧಿ ಜೊತೆಗೆ ಸಿಗ್ನಲ್‌ಗಳಲ್ಲಿ ಪೇಂಟ್‌ ಮಾಡಿಸಬೇಕು ಎಂದರು.

ಆಗ ಪಾಲಿಕೆ ಅಧಿಕಾರಿ, ವಿದ್ಯುತ್‌ ದೀಪಗಳಿಗೆ ಸಂಬಂಧಿಸಿದಂತೆ ಕಂಟ್ರಾಕ್ಟರ್‌ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಉತ್ತರಿಸಿದರು. ಆಗ ಜಿಲ್ಲಾಧಿಕಾರಿ, ಅವರಿಗೆ ದಂಡಹಾಕಿ ಇಲ್ಲವೇ ಅವರನ್ನು ಬ್ಲಾಕ್‌ ಲೀಸ್ಟ್‌ಗೆ ಸೇರಿಸಿ ಎಂದು ಸೂಚಿಸಿದರಲ್ಲದೆ, ನವೆಂಬರ್‌ನಲ್ಲಿ ಅಧಿಕಾರಿಗಳೊಂದಿಗೆ ಸರ್ವೆ ಮಾಡಲಿದ್ದು ಅಷ್ಟರೊಳಗೆ ಎಲ್ಲಾ ಕೆಲಸ ಕಾರ್ಯಗಳು ಮುಗಿದಿರಬೇಕು ಎಂದು ಖಡಕ್‌ ಆಗಿ ಆದೇಶಿಸಿದರು.

ನಗರದ ಕೆಲವು ಕಡೆ ಬೆಸ್ಕಾಂನಿಂದ ಭೂಗತ ವಿದ್ಯುತ್‌ ಸಂಪರ್ಕ ಕಲ್ಪಿಸುತ್ತಿದ್ದು, ಕಂಟ್ರಾಕ್ಟರ್‌ಗೆ ನೀಡಿದ ಬಳಿಕ ನಿಮ್ಮ ಕೆಲಸ ಮುಗಿಯುವುದಿಲ್ಲ. ಈ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವುದಕ್ಕೆ ಮುಂದಾಗಬೇಕು ಎಂದು ಬೆಸ್ಕಾಂ ಅಧಿಕಾರಿಗೆ ಜಿಲ್ಲಾಧಿಕಾರಿ ತಿಳಿಸಿದರು.
 
ತ್ರಿಚಕ್ರ ಮತ್ತು ನಾಲ್ಕು ಚಕ್ರ ವಾಹನ ಮಾಲೀಕರ ಸಂಘದ ಫಳನೀಸ್ವಾಮಿ ಮಾತನಾಡಿ, ನಗರದಲ್ಲಿ ಎಲ್ಲಿಯೂ ಗೂಡ್ಸ್‌ ವಾಹನ ನಿಲುಗಡೆಗೆ ಜಾಗವಿಲ್ಲ. ಈಗ ಕೆ.ಆರ್‌ ಮಾರುಕಟ್ಟೆ ಬಳಿ ವಾಹನ ನಿಲ್ಲಿಸಿಕೊಳ್ಳುತ್ತಿದ್ದು, ಅದರ ಬದಲಾಗಿ ಕೆಎಸ್‌ಆರ್‌ಟಿಸಿ, ಹಳೇ ಬಸ್‌ ನಿಲ್ದಾಣ ಹೀಗೆ ಐದು ಕಡೆ ನಿಲ್ದಾಣಕ್ಕೆ ಜಾಗಕ್ಕೆ ಅವಕಾಶ ಮಾಡಿಕೊಡಬೇಕು ಎಂಬ ಮನವಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚೇತನ್‌, ಕನಿಷ್ಠ ಐದರಿಂದ ಹತ್ತು ಗಾಡಿ ನಿಲ್ಲುವುದಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Advertisement

ಗ್ರಾಮಾಂತರ ಡಿವೈಎಸ್‌ಪಿ ಮಂಜುನಾಥ್‌ ಗಂಗಲ್‌ ಮಾತನಾಡಿ, ಚನ್ನಗಿರಿ ಅಜ್ಜಿಹಳ್ಳಿ ಸರ್ಕಲ್‌, ಹೊನ್ನಾಳಿ ಐಬಿ ಸರ್ಕಲ್‌, ಹರಿಹರ ಎಂ.ಜಿ ವೃತ್ತ, ಬೋಂಗಾಳಿ ವೃತ್ತಗಳಲ್ಲಿ ಸಿಗ್ನಲ್‌ ವ್ಯವಸ್ಥೆ ಬಗ್ಗೆ ಸಭೆ ಗಮನ ಸೆಳೆದರು. ನಗರ ಸಾರಿಗೆ ಬಸ್‌ಗಳಿಗೆ ಪ್ರತ್ಯೇಕ ಬಸ್‌ ನಿಲ್ದಾಣದ ಬಗ್ಗೆ ಪ್ರಸ್ತಾಪಕ್ಕೆ ಎಸ್ಪಿ ಚೇತನ್‌ ಪ್ರತಿಕ್ರಿಯಿಸಿ, 54 ನಗರ ಸಾರಿಗೆ ಬಸ್‌ಗಳು ಸಂಚರಿಸುತ್ತಿದ್ದು, ಸುರಕ್ಷತಾ ಕ್ರಮದಿಂದ ಎಲ್ಲಾ ಬಸ್‌ಗಳು ಡೋರ್‌ಗಳನ್ನು ಕ್ಲೋಸ್‌ ಮಾಡಿಕೊಂಡು ಸಂಚರಿಸಬೇಕು ಎಂದು ತಿಳಿಸಿದರು.

ಅಶೋಕ ಚಿತ್ರಮಂದಿರ, ಅರುಣ ಚಿತ್ರಮಂದಿರ ಎದುರಿನ ರೈಲ್ವೇ ಗೇಟ್‌ ಹತ್ತಿರ ಮೇಲ್ಸೇತುವೆ ಕುರಿತು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಇದೇ ವೇಳೆ ಒತ್ತಾಯಿಸಿದರು. ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀನಿವಾಸಯ್ಯ, ಪಾಲಿಕೆ ಉಪ ಆಯುಕ್ತ ರವೀಂದ್ರ ಮಲ್ಲಾಪುರ, ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next