ಚತ್ತೀಸ್ ಗರ್ : ಬಾಸ್ಟರ್ ಜಿಲ್ಲೆಯ ಜಿಲ್ಲಾಧಿಕಾರಿ ಚಂದನ್ ಕುಮಾರ್ ಆದೇಶದಂತೆ 18 ಡಿಸೆಂಬರ್ 2022 ರಂದು ಪೂರ್ತಿ ದಿನ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸೇರಿ ಎಲ್ಲಾ ಬಗೆಯ ಮದ್ಯಗಳ ಮಾರಾಟವನ್ನು ನಿಷೇಧಿಸಿ ಆದೇಶ ಮಾಡಿದ್ದಾರೆ. ಗುರು ಘಾಸಿದಾಸರ ಜಯಂತಿಯ ಅಂಗವಾಗಿ ಈ ನಿರ್ಧಾರ ತೆಗೆದುಕೊಂಡಿದ್ದು ಹಲವರ ಪ್ರಶಂಸೆಯ ಜೊತೆಗೆ ಕೆಲವರಿಗೆ ಬೇಸರ ತರಿಸಿದೆ.
17 ರ ರಾತ್ರಿ 10 ಗಂಟೆಯಿಂದ ಸಂಪೂರ್ಣವಾಗಿ ಮುಚ್ಚಲು ಸೂಚನೆ ನೀಡಲಾಗಿದೆ. ಮದ್ಯ ಸಾಗಾಟದ ಮೇಲೂ ನಿಗಾ ಇರಿಸಲು ಜಿಲ್ಲಾಡಳಿತ ಸೂಚಿಸಿದೆ.
ಘಾಸಿದಾಸ್ ಡಿಸೆಂಬರ್ 18, 1756 ರಂದು ಭಾರತದ ಛತ್ತೀಸ್‌ಗಢದ ಗಿರೋದ್‌ಪುರಿಯಲ್ಲಿ ಜನಿಸಿದರು. ಘಾಸಿದಾಸ್ ಬಾಲ್ಯದಿಂದಲೂ ಜಾತಿ ವ್ಯವಸ್ಥೆಯ ಘರ್ಷಣೆ ಮತ್ತು ಕಷ್ಟಗಳನ್ನು ಅನುಭವಿಸಿದವರು, ಈ ಅಸಮಾನತೆಯ ಪಿಡುಗು ಸಾಮಾಜಿಕ ಅಸಮಾನತೆಯನ್ನು ತೊಡೆದುಹಾಕುವ ಬಯಕೆಯನ್ನು ಅವರಲ್ಲಿ ರೂಪಿಸಿತು. ಗುರು ಘಾಸಿದಾಸ್ ಛತ್ತೀಸ್‌ಗಢದಲ್ಲಿ ಸತ್ನಾಮಿ ಸಮುದಾಯವನ್ನು ಸ್ಥಾಪಿಸಿದರು, ಇದು ಸತ್ನಾಮ್ (ಅಂದರೆ “ಸತ್ಯ ಮತ್ತು ಸಮಾನತೆ”) ಎಂಬ ಅರ್ಥವನ್ನು ಆಧರಿಸಿದೆ.
ಬೋಧನೆಗಳು ಮತ್ತು ತತ್ವಶಾಸ್ತ್ರವು ಹಿಂದೂ ಧರ್ಮ ಮತ್ತು ಬೌದ್ಧ ಧರ್ಮದಂತೆಯೇ ಒಂದೇ ತೆರನಾಗಿವೆ. ಅಲ್ಲಿನ ಪಂಗಡದ ವಯಸ್ಕರು ಕೇವಲ ಬಿಳಿ ಬಟ್ಟೆಗಳನ್ನು ಮಾತ್ರ ಧರಿಸಬೇಕು ಮತ್ತು ಅಮಲು ಪದಾರ್ಥ ಮತ್ತು ಮಾಂಸಾಹಾರದಿಂದ ದೂರವಿರಬೇಕು ಎಂಬ ಷರತ್ತುಗಳಿದ್ದವು. ಅವರು ವಿಗ್ರಹಗಳನ್ನು ಪೂಜಿಸುತ್ತಿರಲಿಲ್ಲ.
ಸಾಮಾಜಿಕ ಅನಿಷ್ಟಗಳ ವಿರುದ್ಧ ವಾಗ್ದಾಳಿ ನಡೆಸಿ ಹೋರಾಡಿದ ಗುರು ಘಾಸಿದಾಸ್ ಅವರು “ಸತ್ನಾಮಿ” ಸಮುದಾಯದ ಆರಾಧ್ಯ ದೈವ. ಅದರ ಪರಿಣಾಮ ಇಂದಿಗೂ ಗೋಚರಿಸುತ್ತಿದೆ ಮತ್ತು ಆ ಹೋರಾಟಗಳು ಒಂದು ಬಗೆಯ ಸಾರ್ವಕಾಲಿಕ ಕ್ರಾಂತಿಯಾಗಿ ಅನೇಕ ಪಂಗಡಗಳ ಜನರ ಜೀವನ ಮತ್ತೆ ಎಲ್ಲರಂತೆ ಕಟ್ಟಿಕೊಳ್ಳಲು ಸಹಕಾರಿಯಾಯಿತು.
ಪ್ರತಿ ವರ್ಷ ಅವರ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ರಾಯ್‌ಪುರ ಸೇರಿದಂತೆ ಛತ್ತೀಸ್‌ಗಢದಾದ್ಯಂತ ಅನೇಕ ಭವ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಸಮಾಜದಲ್ಲಿ ಅಸ್ಪೃಶ್ಯತೆ, ಮೇಲು-ಕೀಳು, ಮಿಥ್ಯೆಗಳು ಪ್ರಚಲಿತದಲ್ಲಿದ್ದ ಕಾಲದಲ್ಲಿ ಗುರು ಘಾಸಿದಾಸರು ಜನಿಸಿದರು. ಅಂತಹ ಕಾಲದಲ್ಲಿ ಗುರು ಘಾಸಿದಾಸರು ಸಮಾಜಕ್ಕೆ ಏಕತೆ, ಸಹೋದರತೆ ಮತ್ತು ಸೌಹಾರ್ದತೆಯ ಸಂದೇಶವನ್ನು ಬೋಧಿಸಿದರು. ಘಾಸಿದಾಸರ ಸತ್ಯದ ಮೇಲಿನ ಅಚಲ ನಂಬಿಕೆಯಿಂದಾಗಿ, ಅವರು ತಮ್ಮ ಬಾಲ್ಯದಲ್ಲಿ ಅನೇಕ ಪವಾಡಗಳನ್ನು ತೋರಿಸಿದರು, ಅದು ಜನರ ಮೇಲೆ ಹೆಚ್ಚಿನ ಪ್ರಭಾವ ಬೀರಿತು ಮತ್ತು ಅವು ಇಂದೂ ಉಳಿದುಕೊಂಡಿದೆ.