ಹಾವೇರಿ : ಕೋವಿಡ್ ಸೋಂಕು ಹರಡದಂತೆ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಮಾಸ್ಕ್ ಧರಿಸುವ ಕುರಿತಂತೆ ಜಾಗೃತಿ ಮೂಡಿಸಲು, ಜಿಲ್ಲಾ ಧಿಕಾರಿ ಸಂಜಯ ಶೆಟ್ಟೆಣ್ಣವರ ನಗರದ ಗಾಂಧಿ ವೃತ್ತದಿಂದ ಹೊಸಮನಿ ಸಿದ್ಧಪ್ಪ ವೃತ್ತದವರೆಗೆ ಪಾದಯಾತ್ರೆ ನಡೆಸಿದರು.
ನಗರದ ಗಾಂ ಧಿ ವೃತ್ತದಲ್ಲಿ ಪೊಲೀಸ್ ಇಲಾಖೆ ಕೋವಿಡ್-19ರ ಜಾಗೃತಿಗಾಗಿ ಹಮ್ಮಿಕೊಂಡಿದ್ದ ವಾಹನ ರ್ಯಾಲಿಗೆ ಹಸಿರು ನಿಶಾನೆ ತೋರಿಸಿ, ಗಾಂಧಿ ವೃತ್ತದಿಂದ ಮೈಲಾರ ಮಹದೇವ ವೃತ್ತದ ವರೆಗೆ ಬೀದಿಬದಿ ವ್ಯಾಪಾರಸ್ಥರು, ಸಾರ್ವಜನಿಕರು, ರೈತಾಪಿ ಜನರು ಹಾಗೂ ಕಾರ್ಮಿಕರಿಗೆ ಉಚಿತವಾಗಿ ಮಾಸ್ಕ್ ವಿತರಿಸಿದರು. ಅಲ್ಲದೇ, ಸುರಕ್ಷತಾ ಕ್ರಮ ಅನುಸರಿಸಿ ಕೋವಿಡ್‌ನಿಂದ ದೂರ ಉಳಿಯಿರಿ ಎಂದು ತಿಳಿವಳಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಬೀದಿ ಬದಿಯ ವಿಕಲಚೇತನ ವ್ಯಾಪಾರಿಯೋರ್ವನ ಯೋಗಕ್ಷೇಮ ವಿಚಾರಿಸಿದ ಜಿಲ್ಲಾಧಿಕಾರಿಗಳು, ಅವನ ಆರ್ಥಿಕ ಸ್ಥಿತಿಗತಿಗಳು, ಕೌಟುಂಬಿಕ ಹಿನ್ನೆಲೆಯ ಮಾಹಿತಿ ಪಡೆದರು. ಪ್ರಧಾನ ಮಂತ್ರಿ ಸ್ವನಿಧಿಯೋಜನೆಯಡಿ ಈತನಿಗೆ ಸೌಲಭ್ಯ ಒದಗಿಸುವಂತೆ ಹಾವೇರಿ ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಕೋವಿಡ್ ಜಾಗೃತಿ ಕುರಿತಂತೆ ಮಾಹಿತಿ ನೀಡಿ, ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಸೋಂಕಿನ ನಿಯಂತ್ರಣಕ್ಕೆ ಸಾರ್ವಜನಿಕರು ಸ್ವಯಂ ರಕ್ಷಣೆ ಕುರಿತಂತೆ ಪೊಲೀಸ್ ಇಲಾಖೆ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಗುಂಪುಗೂಡದೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸಿ ಓಡಾಡುವ ಕುರಿತಂತೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇಂದು ಪೊಲೀಸ್ ವಾಹನಗಳ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು. ಮಾಸ್ಕ್ ಧರಿಸದೇ ನಿರ್ಲಕ್ಷ್ಯ ವಹಿಸುವವರಿಗೆ 100 ರೂ. ದಂಡ ಹಾಕಲಾಗುತ್ತದೆ. ಈಗಾಗಲೇ 700ಕ್ಕೂ ಹೆಚ್ಚು ಜನರಿಗೆ ದಂಡ ವಿಧಿಸಲಾಗಿದೆ. ಕೋವಿಡ್ ನಿಯಮಗಳ ಉಲ್ಲಂಘನೆ ಮೇಲೆ ನಿಗಾ ವಹಿಸಲು ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ತಲಾ ಐದು ಜನರಂತೆ 100 ತಂಡಗಳನ್ನು ರಚಿಸಿ ನಿಗಾ ವಹಿಸಲಾಗಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿಕೊಂಡರು.
ರ್ಯಾಲಿಯಲ್ಲಿ ಪೌರಾಯುಕ್ತ ಚಲವಾದಿ, ಡಿವೈಎಸ್‌ಪಿ ಶಂಕರ ಮಾರಿಹಾಳ, ಡಿವೈಎಸ್‌ಪಿ ವಿಜಯಕುಮಾರ ಸಂತೋಷ, ಸಿಪಿಐ ಸಂತೋಷ ಪವಾರ್, ನಾಗಮ್ಮ, ಬಸವರಾಜ, ಸಂತೋಷಕುಮಾರ, ಪಿಎಸ್‌ಐಗಳಾದ ನಂದಿ, ಬೆಟಗೇರಿ, ಆರ್‌ಪಿಐ ಮಾರುತಿ ಹೆಗಡೆ, ಶಹರ, ಗ್ರಾಮೀಣ ಹಾಗೂ ಸಂಚಾರಿ ಪೊಲೀಸ್ ಠಾಣೆ ಅ ಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.