Advertisement

ಪಡೀಲ್‌ನ ದ.ಕ. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ಗ್ರಹಣ!

10:15 PM Mar 14, 2021 | Team Udayavani |

ಮಹಾನಗರ: ಮಂಗಳೂರಿನ ಬೆಳವಣಿಗೆಯಲ್ಲಿ ಮಹತ್ವದ ಹೆಗ್ಗುರುತಾಗಲಿರುವ ಪಡೀಲ್‌ನ ದ.ಕ. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ನಿರ್ಮಾಣ ಕಾಮಗಾರಿ ಶೇ.60ರಷ್ಟು ಪೂರ್ಣ ಗೊಂಡಿದ್ದು, ಉಳಿದ ಕಾಮಗಾರಿ ನಡೆಸಲು ಅನುದಾನವನ್ನು ವಿವಿಧ ಇಲಾಖೆಗಳಿಂದ ನಿರೀಕ್ಷಿಸಲಾಗುತ್ತಿದೆ!

Advertisement

41 ಕೋ.ರೂ. ಅಂದಾಜು ವೆಚ್ಚದ ನಿರೀಕ್ಷೆ ಯೊಂದಿಗೆ ಆರಂಭಿಸಲಾದ ಸಂಕೀರ್ಣಕ್ಕೆ ಇಲ್ಲಿಯವರೆಗೆ 50 ಕೋ.ರೂ. ಗಳಷ್ಟು ವೆಚ್ಚವಾಗಿದೆ. ಇನ್ನುಳಿದ ಕಾಮಗಾರಿಗೆ ಕನಿಷ್ಠ 20 ಕೋ.ರೂ.ಗಳಾದರೂ ಅಗತ್ಯವಿದೆ. ಈ ಪೈಕಿ ಆರೋಗ್ಯ ಇಲಾಖೆ 7 ಕೋಟಿ ರೂ. ಸಹಿತ ವಿವಿಧ ಇಲಾಖೆಗಳು ಅಂದಾಜು 11 ಕೋ.ರೂ.ಗಳನ್ನು ನೀಡಬೇಕಿದೆ. ಬಾಕಿ ಉಳಿಕೆ ಮೊತ್ತವನ್ನು ಸರಕಾರವೇ ಸರಿದೂಗಿಸಬೇಕು. ಆದರೆ ಇಲಾಖೆ-ಸರಕಾರದಿಂದ ಈ ಅನುದಾನ ಇನ್ನೂ ಬಿಡುಗಡೆಯಾಗದ ಕಾರಣದಿಂದ ಕಾಮಗಾರಿ ಮುಂದುವರಿಸಲು ಸಮಸ್ಯೆ ಆಗಿದೆ. ಆದರೂ ಸದ್ಯ ವಯರಿಂಗ್‌, ವೈಟ್‌ವಾಶ್‌, ಟೈಲ್ಸ್‌ ಮತ್ತು ಗ್ರಾನೈಟ್‌ ಅಳವಡಿಸುವ ಕೆಲಸಗಳು ನಡೆಯುತ್ತಿವೆ. ಸುಮಾರು 70ರಷ್ಟು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

2018ರ ಮಾರ್ಚ್‌ನಲ್ಲಿ ಕಾಮಗಾರಿಗೆ ಚಾಲನೆ ಸಿಕ್ಕಿತ್ತು. ಗುತ್ತಿಗೆ ನಿಯಮಾವಳಿ ಪ್ರಕಾರ ಮೊದಲ ಹಂತದ ಕಾಮಗಾರಿ 2019ರ ಸೆ.16ಕ್ಕೆ ಸಂಪೂರ್ಣಗೊಳ್ಳಬೇಕಿತ್ತು. ಸದ್ಯದ ಮಾಹಿತಿ ಪ್ರಕಾರ ಸಿವಿಲ್‌ ಕಾಮಗಾರಿ ಮುಂದಿನ ಒಂದೆರಡು ತಿಂಗಳಲ್ಲಿ ಪೂರ್ಣವಾ ದರೂ, ವಿದ್ಯುತ್‌ ಸಹಿತ ಒಳಾಂಗಣ ವಿನ್ಯಾಸದ ಕೆಲಸ ಪೂರ್ಣವಾ ಗಲು ಇನ್ನೂ 5-6 ತಿಂಗಳು ಹೆಚ್ಚುವರಿಯಾಗಿ ಬೇಕಿದೆ.

ಬೃಹತ್‌ ಸಭಾಂಗಣ-ಸುಸಜ್ಜಿತ ಪಾರ್ಕಿಂಗ್‌
ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಒಟ್ಟು 5.8 ಎಕ್ರೆ ಪ್ರದೇಶದಲ್ಲಿ 2.26 ಲಕ್ಷ ಚ. ಅಡಿ.ವಿಸ್ತೀರ್ಣ ವಿರಲಿದೆ. 38 ವಿವಿಧ ಇಲಾಖೆಗಳು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರ ಕಚೇರಿ ಇಲ್ಲಿರಲಿದೆ. ನೆಲ ಅಂತಸ್ತಿನಲ್ಲಿ 400 ಜನರು ಕುಳಿತುಕೊಳ್ಳಬಹುದಾದ ಬೃಹತ್‌ ಸಭಾಂಗಣ, 2ನೇ ಮಹಡಿಯಲ್ಲಿ 2 ಮೀಟಿಂಗ್‌ ಹಾಲ್‌, ತಳ ಅಂತಸ್ತು ಕಾರು ಮತ್ತು ದ್ವಿಚಕ್ರವಾಹನ ಪಾರ್ಕಿಂಗ್‌ಗೆ ಮೀಸಲಿಡಲಾಗುತ್ತದೆ. 50 ಕಾರುಗಳು ಮತ್ತು 100ಕ್ಕೂ ಅಧಿಕ ದ್ವಿಚಕ್ರ ವಾಹನ ನಿಲ್ಲಿಸಲು ಅವಕಾಶವಿದೆ. ಕಟ್ಟಡದ ಸುತ್ತ ಸುಮಾರು 70 ಕಾರುಗಳು ನಿಲ್ಲಿಸಬಹುದಾಗಿದೆ. ಸಂಕೀರ್ಣದಲ್ಲಿ ಬ್ಯಾಂಕ್‌, ಎಟಿಎಂ, ಕ್ಯಾಂಟೀನ್‌, ಅಂಚೆ ಕಚೇರಿ, ಪೊಲೀಸ್‌ ಹೊರಠಾಣೆ ನೂತನ ಸಂಕೀರ್ಣದಲ್ಲಿ ನಿರ್ಮಾಣವಾಗಲಿದೆ ಎಂದು ಡಿಸಿ ಕಚೇರಿ ಮೂಲಗಳು ತಿಳಿಸಿವೆ.

ಮತಯಂತ್ರಗಳಿಗೆ ಸುಸಜ್ಜಿತ ಪ್ರತ್ಯೇಕ ವೇರ್‌ಹೌಸ್‌
ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಹಿಂಭಾಗದಲ್ಲಿ ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳಿಗೆ ಸಂಬಂಧಿಸಿದ ಮತಯಂತ್ರದ ವಿವಿಧ ವಿಭಾಗಗಳಾದ ಇವಿಎಂ, ವಿವಿಪ್ಯಾಟ್‌ ಮತ್ತು ಕಂಟ್ರೋಲ್‌ ಯುನಿಟ್‌ಗಳನ್ನು ಸಂಗ್ರಹಿಸಿಡಲು ಸುಸಜ್ಜಿತ ವೇರ್‌ಹೌಸ್‌ (ಗೋದಾಮು) ನಿರ್ಮಾಣವಾಗುತ್ತಿದೆ. ಸ್ಟೇಟ್‌ಬ್ಯಾಂಕ್‌ ಬಳಿಯ ಈಗಿನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಸ್ಟ್ರಾಂಗ್‌ ರೂಮ್‌ನಲ್ಲಿ ಪ್ರಸ್ತುತ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಮತಯಂತ್ರಗಳನ್ನು ಇರಿಸಲಾಗಿದೆ. ಅನಂತರ ಇದನ್ನು ಪಡೀಲ್‌ಗೆ ಸ್ಥಳಾಂತರಿಸಲಾಗುತ್ತದೆ. ತಳ ಅಂತಸ್ತು ಮತ್ತು ಎರಡು ಮಹಡಿ ಹೊಂದಿರುವ ಕಟ್ಟಡವಾಗಿದ್ದು, ಒಟ್ಟು 5.19 ಕೋ.ರೂ.ವೆಚ್ಚವಾಗಲಿದೆ. ಮುಂದಿನ 30 ವರ್ಷಗಳ ಅವಧಿಗೆ ಲೆಕ್ಕಾಚಾರ ಮಾಡಿ, ಎಷ್ಟು ಮತಯಂತ್ರಗಳನ್ನು ಇರಿಸಬಹುದು ಎಂದು ಅಂದಾಜಿಸಿ, ಚುನಾವಣ ಆಯೋಗದ ನಿಯಮಾವಳಿಯಂತೆ ಕಟ್ಟಡ ನಿರ್ಮಿಸಲಾಗುತ್ತಿದೆ.

Advertisement

ಕಾಮಗಾರಿ ಶೀಘ್ರ ಪೂರ್ಣ
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಕಟ್ಟಡ ಕಾಮಗಾರಿಗಳು ಶೇ.60ರಷ್ಟು ಪೂರ್ಣಗೊಂಡಿವೆೆ. ಆರೋಗ್ಯ, ಗಣಿ, ಕಾರ್ಮಿಕ ಸೇರಿದಂತೆ ಬಹುತೇಕ ಮಹತ್ವದ ಇಲಾಖೆಗಳು ಇಲ್ಲಿಯೇ ಬರುವುದರಿಂದ ಆ ಇಲಾಖೆಯಿಂದಲೂ ಅನುದಾನವನ್ನು ನಿರೀಕ್ಷಿಸಲಾಗಿದೆ. ಇದನ್ನು ಹೊಂದಿಸಿಕೊಂಡು ಉಳಿಕೆ ಕಾಮಗಾರಿಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು.
– ಡಾ|ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ.ಕ.

Advertisement

Udayavani is now on Telegram. Click here to join our channel and stay updated with the latest news.

Next