Advertisement

ಚಾಮರಾಜನಗರ: ಸರಕು ಸಾಗಣೆ ವಾಹನ ಚಾಲಕರಿಗೆ ಕ್ವಾರಂಟೈನ್, ಪ್ರವಾಸಿ ತಾಣಗಳಿಗೆ ನಿರ್ಬಂಧ

12:57 PM Jul 03, 2020 | keerthan |

ಚಾಮರಾಜನಗರ: ಅಂತಾರಾಜ್ಯ ಸರಕು ಸಾಗಣೆ ವಾಹನ ಚಾಲಕರ ಕ್ವಾರಂಟೈನ್,ಅಂತರ ಜಿಲ್ಲೆ, ಅಂತಾರಾಜ್ಯ ಚೆಕ್‌ಪೋಸ್ಟ್ ಗಳ ಆರಂಭ, ಜಿಲ್ಲೆಯ ಪ್ರೇಕ್ಷಣೀಯ ಪ್ರವಾಸಿ ತಾಣಗಳ ಪ್ರವೇಶಕ್ಕೆ ನಿರ್ಬಂಧ ಸೇರಿದಂತೆ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಅವರು ಜಾರಿಗೊಳಿಸುವ ಮೂಲಕ ಕೋವಿಡ್19 ಅನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಎದುರಿಸಲು ಮುಂದಾಗಿದ್ದಾರೆ.

Advertisement

ಗುರುವಾರ ಫೇಸ್‌ಬುಕ್ ಲೈವ್ ಮೂಲಕ ಜಿಲ್ಲೆಯ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚುವಿಕೆ ಬಗ್ಗೆ ಸಾರ್ವಜನಿಕರು ಆತಂಕ ಪಡುವುದು ಬೇಡ. ತಮಿಳುನಾಡಿಗೆ ಹೋಗಿದ್ದ ಸರಕು ವಾಹನ ಚಾಲಕನ ಸಂಪರ್ಕಿತರಿಂದ ಹೆಚ್ಚು ಪ್ರಕರಣಗಳಾಗಿವೆ. ಈ ಪರಿಸ್ಥಿತಿಯನ್ನು ಎದುರಿಸಲು ನಾವು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದರು.

ಜಿಲ್ಲೆಯಿಂದ ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಗೆ ಹೋಗುವ ವರ್ತಕರು, ವಾಹನ ಚಾಲಕರು, ಸರಕು ಸಾಗಣೆ ಮಾಡುವವರು ಜಿಲ್ಲೆಗೆ ಹಿಂದಿರುಗಿದಾಗ 3 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಇದಕ್ಕೆ ಒಪ್ಪಿದರೆ ಮಾತ್ರ ಅನುಮತಿಸಲಾಗುತ್ತದೆ ಒಪ್ಪದಿದ್ದಲ್ಲಿ ಅವರು ಅಲ್ಲೆ ಇರಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ  ತಿಳಿಸಿದರು.

ಜಿಲ್ಲೆಗೆ ಸಂಪರ್ಕ ಹೊಂದಿರುವ ಅಂತರ ಜಿಲ್ಲಾ ಚೆಕ್‌ಪೋಸ್ಟ್ ಗಳನ್ನು ಮತ್ತೆ ತೆರೆಯಲಾಗಿದೆ. ಅಂತಾರಾಜ್ಯ ಚೆಕ್‌ಪೋಸ್ಟ್ ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸಲಿದೆ. ವಿಶೇಷವಾಗಿ ಮೈಸೂರು ಮತ್ತು ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಗಡಿಗಳಲ್ಲಿ ಚೆಕ್‌ಪೋಸ್ಟ್ ಕಾರ್ಯ ನಿರ್ವಹಿಸುತ್ತಿದೆ. ಅನಗತ್ಯವಾಗಿ ಜಿಲ್ಲೆ ಒಳಗೆ ಬರುವಂಥವರ ಹಾಗೂ ಜಿಲ್ಲೆಯಿಂದ ಹೊರ ಹೋಗದೆ ಇರುವ ಹಾಗೆ ನೋಡಿಕೊಳ್ಳುವುದು, ಅತಿ ಹೆಚ್ಚಿನ ತುರ್ತು ಪರಿಸ್ಥಿತಿಯ ಸಂರ್ದಭದಲ್ಲಿ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಚೆಕ್‌ಪೋಸ್ಟ್ ಗಳನ್ನು ಪ್ರಾರಂಭಿಸಲಾಗಿದೆ ಎಂದರು.

ತಮಿಳುನಾಡಿನಲ್ಲಿ ಹೆಚ್ಚು ಪ್ರಕರಣಗಳು ಕಂಡುಬರುತ್ತಿರುವುದರಿಂದ ಪಾಲಾರ್ ಹಾಗೂ ನಾಲ್ ರೋಡ್ ಚೆಕ್‌ಪೋಸ್ಟ್ ಅನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಅಂತಾರಾಜ್ಯ ಪ್ರಯಣಿಸಲು ಸೇವಾಸಿಂಧುವಿನ ಮೂಲಕ ಹೆಸರನ್ನು ನೋಂದಾಯಿಸಿಕೊಂಡು ಬಂದವರು ಸಾಂಸ್ಥಿಕ ಕ್ವಾರಂಟೈನ್‌ ನಲ್ಲಿ ಇರಬೇಕಿದೆ.  ಜಿಲ್ಲೆಯ ಪ್ರೇಕ್ಷಣೀಯ ಪ್ರವಾಸಿ ಸ್ಥಳಗಳಿಗೆ ಬರುವ ಪ್ರವಾಸಿಗರಿಗೆ ಇಂದಿನಿಂದ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.

Advertisement

ಜಿಲ್ಲೆಯಲ್ಲಿ ಕಂಟೈನ್‌ಮೆಂಟ್ ಜೋನ್‌ಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಸೋಂಕಿತರಿಂದ ಪ್ರಾಥಮಿಕ, ದ್ವಿತೀಯ, ಹಾಗೂ ಇರುವಂತವರ ಗಂಟಲು ದ್ರವದ ಪರೀಕ್ಷೆಗಾಗಿ ಮೊಬೈಲ್ ಸ್ವ್ಯಾಬ್ ಕಲೆಕ್ಷನ್ ಯೂನಿಟ್‌ಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ವಿವಿಧ ಖಾಯಿಲೆಗಳಿಂದ ಬಳಲುತ್ತಿರುವವರು, 60 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, ಬಾಣಂತಿಯರಿಗೆ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗುತ್ತಿದೆ. ಇಂತಹ ಪರೀಕ್ಷೆಗಳು ಸಹ ಹೆಚ್ಚು ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಾರ್ವಜನಿಕರು ಅವಶ್ಯಕವಾದ ಔಷಧಿ ಕೊಳ್ಳಲು ಮಾತ್ರ ಬನ್ನಿ, ಅನಗತ್ಯವಾಗಿ ಕಚೇರಿ ಕೆಲಸಗಳಿಗೆ ಬರುವುದು, ಇತರೆ ಕಾರ್ಯಗಳಿಗಾಗಿ ಓಡಾಡುವುದನ್ನು ನಿಲ್ಲಿಸಬೇಕು. ಶುಭ ಕಾರ್ಯಗಳಲ್ಲಿ ಹೆಚ್ಚು ಜನರು ಸೇರಬಾರದು, ಮುಂದೆ ಬರಲಿರುವ ಒಂದಷ್ಟು ಸಂಕಷ್ಟದ ದಿನಗಳಾಗಿರುವುದರಿಂದ ಆರೋಗ್ಯದ ದೃಷ್ಠಿಯಿಂದ ಇಂತಹ ಕಾರ್ಯಕ್ರಮಗಳನ್ನು ಮುಂದೂಡಿ ಜಿಲ್ಲಾಡಳಿತದ ಜೊತೆ ಸಹಕರಿಸಿ. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೆಸರ್ ಬಳಸಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಡಾ. ಎಂ.ಆರ್. ರವಿ ಅವರು ಮನವಿ ಮಾಡಿದರು.

ಲಕ್ಷಣಗಳಿಲ್ಲದ ಸೋಂಕಿತರಿಗೆ ಆಸ್ಪತ್ರೆ ಬದಲು ಕೋವಿಡ್ ಕೇರ್

ಕೋವಿಡ್ ಸೋಂಕಿನ ಲಕ್ಷಣಗಳು ಕಡಿಮೆ ಇರುವವರನ್ನು ಆಸ್ವತ್ರೆಯಲ್ಲಿ ಚಿಕಿತ್ಸೆ ನೀಡಿ ಸ್ವಲ್ಪ ದಿನಗಳ ನಿಗಾವಣೆ ನಂತರ ಬಳಿಕ ಕೋವಿಡ್ ಕೇರ್ ಸೆಂಟರ್‌ನಲ್ಲಿ ಇರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ನೂರು ಹಾಸಿಗೆಯುಳ್ಳ ಕೋವಿಡ್ ಆಸ್ವತ್ರೆ ಈಗಾಗಲೇ ಜಿಲ್ಲಾ ಕೇಂದ್ರದಲ್ಲಿದೆ. ಇದರಲ್ಲಿ 38 ಐ.ಸಿ.ಯು ಹಾಸಿಗೆ  ವ್ಯವಸ್ಥೆ ಮಾಡಲಾಗಿದೆ.  ಜಿಲ್ಲೆಯ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು, ಖಾಸಗಿ ಆಸ್ವತ್ರೆಗಳಾದ ಬಸವ ರಾಜೇಂದ್ರ ಆಸ್ವತ್ರೆ ಹಾಗೂ ಕಾಮಗೆರೆಯ ಹೋಲಿ ಕ್ರಾಸ್ ಆಸ್ವತ್ರೆಯಲ್ಲಿ ತಲಾ ನೂರು ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಮಾಡಲಾಗಿದೆ, ಒಟ್ಟು 400 ಹಾಸಿಗೆ ಲಭ್ಯವಾಗಲಿದೆ. ನಗರದ ಜೆ.ಎಸ್.ಎಸ್. ಆಸ್ವತ್ರೆಯನ್ನು ಸಹ ಬಳಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಅನುಮತಿ ಸಿಕ್ಕಿದಲ್ಲಿ ಆಸ್ವತ್ರೆ ಬಳಸಿಕೊಳ್ಳುವ ಅವಕಾಶ ಸಿಗಲಿದೆ ಎಂದು ರವಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next