ದಾವಣಗೆರೆ: ಹೊನ್ನಾಳಿ ತಾಲೂಕು ಅರಬಗಟ್ಟೆಯ ಕೋವಿಡ್ ಆರೈಕೆ ಕೇಂದ್ರದಲ್ಲಿ ಹೋಮ ನಡೆಸಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರಿಗೆ ನೊಟೀಸ್ ನೀಡುವಂತೆ ಹೊನ್ನಾಳಿ ತಹಸೀಲ್ದಾರರಿಗೆ ಸೂಚನೆ ನೀಡಿದ್ದೇನೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆಸಲು ಅವಕಾಶ ಇಲ್ಲ. ಕಾನೂನು ಎಲ್ಲರಿಗೂ ಒಂದೇ ಆಗಿದೆ. ಆದ್ದರಿಂದ ಹೊನ್ನಾಳಿ ಶಾಸಕರಿಗೆ ನೊಟೀಸ್ ನೀಡುವಂತೆ ತಹಸೀಲ್ದಾರರಿಗೆ ಸೂಚನೆ ನೀಡಿದ್ದು ವಿಪತ್ತು ನಿರ್ವಹಣಾ ಕಾಯಿದೆಯಡಿ ಕ್ರಮವಹಿಸಲಾಗುವುದು ಎಂದರು.
ಇದನ್ನೂ ಓದಿ: ಬ್ಯಾಟ್ ನಿಂದ ತಲೆಗೆ ಹೊಡೆದು ಸಹೋದರಿಯನ್ನು ಕೊಲೆಗೈದ ಸಹೋದರ: ಆರೋಪಿಯನ್ನು ಬಂಧಿಸಿದ ಪೋಲಿಸರು
ಕೋವಿಡ್ ನಿಯಂತ್ರಣಕ್ಕಾಗಿ ಪ್ರಾರ್ಥಿಸಿ ರೇಣುಕಾಚಾರ್ಯ ಶುಕ್ರವಾರ ಮೃತ್ಯುಂಜಯ ಮತ್ತು ಧನ್ವಂತರಿ ಹೋಮ ನಡೆಸಿದ್ದರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಜತೆಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಹೊನ್ನಾಳಿ ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ, ರೇಣುಕಾಚಾರ್ಯ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೇಳಿದ್ದರು. ಆದರೆ, ಇದಕ್ಕೆ ಸೋಂಕಿತರು ಪ್ರತಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು.
ಈ ನಡುವೆ ರೇಣುಕಾಚಾರ್ಯ, ತಾವು ಲೋಕ ಕಲ್ಯಾಣಕ್ಕಾಗಿ ಹೋಮ ಮಾಡಿಸಿದ್ದು ನನ್ನ ವಿರುದ್ಧ ಕೇಸ್ ದಾಖಲಿಸಲು ಮುಂದಾಗಿರುವ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಆರೋಪಿಸಿ, ತಾಕತ್ತಿದ್ದರೆ ಕೇಸ್ ದಾಖಲಿಸಲಿ ಎಂದು ಸವಾಲು ಹಾಕಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ.