ಹಾಸನ: ಜಿಲ್ಲೆಯಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರ ಪತ್ತೆಗೆ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಹೆಚ್ಚಿಸಬೇಕು. ಸೋಂಕಿತರ ಸಂಪರ್ಕಿತರು ಹಾಗೂ ಮೈಕ್ರೋ ಕಂಟೈನ್‌ಮೆಂಟ್ ವಲಯದ ವರನ್ನು ಎರೆಡೆರಡುಬಾರಿ ಕೊರೊನಾ ಪರೀಕ್ಷೆಗೆ ಒಳಪಡಿಸಬೇಕು ಹಾಗೂ ಮೊಬೈಲ್ ಟೀಂಗಳ ಮೂಲಕ ಪರೀಕ್ಷೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಎಲ್ಲಾ ತಾಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣ ದಲ್ಲಿ ಕೋವಿಡ್ ನಿಯಂತ್ರಣಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸೋಂಕಿತರ ಪತ್ತೆಗಾಗಿ ಆರ್‌ಟಿ -ಪಿಸಿಆರ್ ಹಾಗೂ ರ್ಯಾಟ್ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಎಲ್ಲಾ ತಾಲೂಕುಗಳಿಗೂ ನಿರ್ದಿಷ್ಟ ಗುರಿ ನೀಡಿದ್ದು, ಅದರಂತೆ ಗುರಿ ಸಾಧನೆಗೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.
ಯಾವುದಾದರು ತಾಲೂಕುಗಳಲ್ಲಿ ಆ್ಯಂಬುಲೆನ್ಸ್ ಹಾಗೂ ಮತ್ತಿತರ ವಾಹನಗಳ ಕೊರತೆಯಿದ್ದಲ್ಲಿ ಎಸ್‌ಟಿಆರ್‌ಎಫ್ ಹಣವನ್ನು ಬಳಸಿ ಖರೀದಿಸಬೇಕು. ಯಾವುದೇ ರೋಗಿಗೂ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಹಾಟ್‌ಸ್ಪಾಟ್‌ಗಳ ಕಡೆ ಹೆಚ್ಚಿನ ಗಮನಹರಿಸಿ ಪರೀಕ್ಷೆಗೆ ಒಳಪಡಿಸಿ ಹಾಗೂ ಜಿಲ್ಲೆಯಲ್ಲಿರುವ ಪ್ರತಿಯೊಂದು ಹಾಟ್‌ಸ್ಪಾಟ್‌ಗಳನ್ನು ಗುರುತಿಸಿ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಪ್ರಾಥಮಿಕಆರೋಗ್ಯ ಕೇಂದ್ರದ ಮಿತಿಯಲ್ಲಿ ಹೋಂ ಐಸೋಲೇಷನ್‌ನಲ್ಲಿರುವ ವ್ಯಕ್ತಿಗಳ ಬಗ್ಗೆ ಮತ್ತು ಅವರಿಗೆ ನೀಡುತ್ತಿರುವ ಚಿಕಿತ್ಸಾ ವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಹಾಗೂ ನಿಗಾವಹಿಸಬೇಕು. ಹೋಂ ಐಸೋಲೇಷನ್‌ನಲ್ಲಿರುವ 17 ದಿನಗಳಲ್ಲಿ ಬಿಎಲ್‌ಓಗಳು ಮೂರು ಅಥವಾ ನಾಲ್ಕು ಬಾರಿ ಭೇಟಿ ನೀಡಿ ಆರೋಗ್ಯ ಕುರಿತು ಮಾಹಿತಿ ನೀಡಬೇಕು ಮತ್ತು ಆಶಾ ಕಾರ್ಯಕರ್ತೆಯರು ಭೇಟಿ ನೀಡಿರುವ ಕುರಿತು ವರದಿ ನೀಡಬೇಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಪ್ರತಿ ವಾರದ ವರದಿ ನೀಡುವಂತೆ ಆರೋಗ್ಯಾಧಿಕಾರಿಗಳಿಗೆ ನಿರ್ದೇಶಿಸಿದರು. ಜಿಪಂ ಸಿಇಒ ಬಿ.ಎ.ಪರಮೇಶ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿನ ಜನರ ಮನವೊಲಿಸಿ ಹಾಗೂ ಕೋವಿಡ್ ಪರೀಕ್ಷೆ ಕುರಿತು ಅರಿವು ಮೂಡಿಸಿ ನಂತರ ಪರೀಕ್ಷೆಗೆ ಒಳಪಡಿಸಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್‌ಕುಮಾರ್, ಸರ್ವೆಕ್ಷಣಾಧಿ ಕಾರಿ ಡಾ.ಹಿರಣ್ಣಯ್ಯ, ತಾಲೂಕುಗಳ ವೈದ್ಯಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.