ಬಾಗಲಕೋಟೆ: ಜಿಲ್ಲೆಯಲ್ಲಿರುವ ಜೈವಿಕ ಮತ್ತು ವೈದ್ಯಕೀಯ ತ್ಯಾಜ್ಯ ವೈಜ್ಞಾನಿಕವಾಗಿ ಹಾಗೂ ಕಾನೂನಾತ್ಮವಾಗಿ ವಿಲೇವಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಸೂಚಿಸಿದರು.
ನವನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಜೈವಿಕ-ವೈದ್ಯಕೀಯ ತ್ಯಾಜ್ಯ ವಿಲೇವಾರಿ ನಿರ್ವಹಣೆ ಕುರಿತು ಜಿಲ್ಲಾ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಮಾನವ ಹಾಗೂ ಪ್ರಾಣಿಗಳ ರೋಗ ನಿರ್ಣಯ ಚಿಕಿತ್ಸೆ ಅಥವಾ ಪ್ರತಿರಕ್ಷಣೆ ಸಮಯದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಜಿಲ್ಲಾ ತ್ಯಾಜ್ಯ ವಿಲೇವಾರಿ ಘಟಕಕ್ಕೆ ತರುವ ಜವಾಬ್ದಾರಿ ಗ್ರಾಮ ಮತ್ತು ನಗರ ಸ್ಥಳೀಯ ಸಂಸ್ಥೆಯ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ವೈದ್ಯಕೀಯ ತ್ಯಾಜ ಮುಖ್ಯವಾಗಿ ಹಾಸ್ಪಿಟಲ್, ನರ್ಸಿಂಗ್ ಹೋಮ್, ಕ್ಲಿನಿಕ್, ವೆಟರ್‌ನರಿ ಇಸ್ಟಿಟ್ಯೂಟ್ ಅಥವಾ ಎನಿಮಲ್ ಹೌಸ್, ಬ್ಲಿಡ್ ಬ್ಯಾಂಕ್, ಬ್ಲಿಡ್ ಡೊನೇಷನ್ ಕ್ಯಾಂಪ್, ಆಯುಷ ಹಾಸ್ಪಿಟಲ್, ಹೆಲ್ತ್ಕ್ಯಾಂಪ್, ಮೆಡಿಕಲ್ ಅಥವಾ ಸರ್ಜಿಕಲ್ ಕ್ಯಾಂಪ್, ಪ್ರಥಮ ಚಿಕಿತ್ಸಾ ಕೇಂದ್ರಗಳಿಂದ ಬರುತ್ತಿದ್ದು, ಬಾಗಲಕೋಟೆಯಲ್ಲಿ ನಿರ್ಮಿಸಲಾದ ವೈದ್ಯಕೀಯ ತ್ಯಾಜ್ಯ ಘಟಕದಲ್ಲಿ ವಿಲೇವಾರಿಯಾಗಬೇಕು ಎಂದರು.
ಆಸ್ಪತ್ರೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಇಲ್ಲವಾದಲ್ಲಿ ಬೇರೆ ರೋಗಿಗಳಿಗೆ ಇನ್‌ಪೆಕ್ಷನ್ ಆಗುವ ಸಾದ್ಯತೆ ಇರುತ್ತದೆ. ಅಲ್ಲದೇ ದ್ರವ ಮತ್ತು ಘನ ತ್ಯಾಜ್ಯ ಪ್ರತ್ಯೇಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡಬೇಕು. ಇದಕ್ಕಾಗಿಯೇ 2016 ಮಾ. 28ರಂದು ಬಯೋ ಮೆಡಿಕಲ್ ತ್ಯಾಜ್ಯ ನಿರ್ವಹಣಾ ನಿಯಮಗಳು ಜಾರಿಗೆ ಬಂದಿದ್ದು, ಜೈವಿಕ, ವೈದ್ಯಕೀಯ ತ್ಯಾಜ್ಯ ಪ್ರತ್ಯೇಕಿಸಿ ಸಂಸ್ಕರಣೆ ಮತ್ತು ವಿಲೇವಾರಿ ಮಾಡುವುದು, ತ್ಯಾಜ್ಯ ಉತ್ಪಾದನೆ ಕಡಿಮೆಗೊಳಿಸಿ ಪರಿಸರದ ಮೇಲೆ ಪರಿಣಾಮ ಬೀರುವದನ್ನು ಕಡಿಮೆಗೊಳಿಸುವುದಾಗಿದೆ ಎಂದು ತಿಳಿಸಿದರು.
ತ್ಯಾಜ್ಯ ವಿಲೇವಾರಿ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ನಗರಸಭೆಯವರು ಸಂಗ್ರಹಿಸುವ ತ್ಯಾಜ್ಯ ಹಾಗೂ ವೈದ್ಯಕೀಯ ತ್ಯಾಜ್ಯ ಕೂಡಿಸುವಂತಿಲ್ಲ. ಪ್ರತ್ಯೇಕವಾಗಿ ವಿಲೇವಾರಿಯಾಗಬೇಕು. ವೈದ್ಯಕೀಯ ತ್ಯಾಜ್ಯವನ್ನು ಸಂಗ್ರಹಿಸುವ ವಾಹನಗಳ ಮೇಲೆ ಮಾಹಿತಿ ಇರಬೇಕು ಎಂದು ತಿಳಿಸಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಅನಂತ ದೇಸಾಯಿ, ಕುಟುಂಬ ಕಲ್ಯಾಣಾಧಿಕಾರಿ ಡಾ| ಪಟ್ಟಣಶೆಟ್ಟಿ, ಆರ್‌ಸೆಟ್ ಸಂಸ್ಥೆಯ ಆಡಳಿತಾಧಿಕಾರಿ ಪಂಚಮುಖೀ, ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ|ಪ್ರಕಾಶ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.