Advertisement

ಉತ್ತಮ ಸೇವೆಗೆ ಡಿಸಿ ಸೂಚನೆ

12:58 PM Jan 01, 2020 | Suhan S |

ಬಾಗಲಕೋಟೆ: ಬಾಲನ್ಯಾಯ ಕಾಯ್ದೆಯಡಿ ನೋಂದಣಿಯಾದ ವಿವಿಧ ಮಕ್ಕಳ ಪಾಲನಾ ಸಂಸ್ಥೆಗಳು ಉತ್ತಮ ಸೇವೆ ಒದಗಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ|ಕೆ.ರಾಜೇಂದ್ರ ತಿಳಿಸಿದರು.

Advertisement

ನವನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಬಾಲ ನ್ಯಾಯ ಕಾಯ್ದೆಯಡಿ ನೋಂದಣಿಯಾದ ಸಂಸ್ಥೆಗಳಿಗೆ ಸಾಮಾಜಿಕ ಪರಿಶೀಲನಾ ತಂಡ ಭೇಟಿ ನೀಡಿದ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲಾ ಸಾಮಾಜಿಕ ಪರಿಶೀಲನಾ ತಂಡವು ವಿವಿಧ ಮಕ್ಕಳ ಪಾಲನಾ ಸಂಸ್ಥೆಗಳಿಗೆ ಭೇಟಿ ನೀಡಿ ವರದಿಯನ್ವಯ ಕೆಲವೊಂದು ಮಕ್ಕಳ ಪಾಲನಾ ಸಂಸ್ಥೆಗಳು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ, ಸ್ನಾನಗೃಹ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿ ಇರದ ಬಗ್ಗೆ ತಿಳಿದು ಬಂದಿದೆ. ಸಂಸ್ಥೆಗಳು ಎಲ್ಲ ಅಗತ್ಯ ಸೌಲಭ್ಯಗಳನ್ನು ವಾರದಲ್ಲಿ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲ  ಅಂತಹ ಸಂಸ್ಥೆಗಳ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಇಳಕಲ್ಲಿನ ಮುರಘೇಂದ್ರ ಶಿವಾಚಾರ್ಯ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ಕಟ್ಟಡ ದುರಸ್ತಿಯಲ್ಲಿದ್ದು, ವಾಸಕ್ಕೆ ಯೋಗ್ಯವಾಗಿರುವುದಿಲ್ಲವೆಂದು ತಿಳಿದು ಬಂದಿದೆ. ಸಂಸ್ಥೆಯಲ್ಲಿರುವ ಮಕ್ಕಳನ್ನು ಒಂದು ವಾರದಲ್ಲಿ ಬೇರೆ ಸುಸಜ್ಜಿತ ಕಟ್ಟಡಕ್ಕೆ

ಸ್ಥಳಾಂತರಿಸಬೇಕು. ಇಲ್ಲವಾದಲ್ಲಿ ಸಂಸ್ಥೆ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇಲ್ಲವೇ ಸಂಸ್ಥೆಗೆ ನೀಡುವ ಅನುದಾನವನ್ನು ತಡೆಹಿಡಿಯಲಾಗುವುದು ಎಂದು ಎಚ್ಚರಿಸಿದರು.

Advertisement

ಕಿವುಡ ಮತ್ತು ಬುದ್ದಿಮಾಂಧ್ಯ ಮಕ್ಕಳಿಗಾಗಿ ರೂಪಿಸಲಾದ ನಿಯಮ ವಿಮೆ ಸೌಲಭ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಸಹಯೋಗದಲ್ಲಿ ಒದಗಿಸುವ ಕೆಲಸವಾಗಬೇಕು. ಜಿಲ್ಲೆಯಲ್ಲಿರುವ ಎಲ್ಲ ಮಕ್ಕಳ ಪಾಲನೆ ಸಂಸ್ಥೆಗಳ ಮಕ್ಕಳಿಗೆ ವೈದ್ಯಕೀಯ ಸೌಲಭ್ಯ, ಪ್ರಥಮ ಚಿಕಿತ್ಸೆ ಕಡ್ಡಾಯವಾಗಿ ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯಲ್ಲಿ ಅಂಗವಿಕಲರಿಗೆ ವಿತರಿಸಲಾಗುತ್ತಿರುವ ಯುಡಿಐಡಿ ಕಾರ್ಡ್‌ ಗಳ ಬಗ್ಗೆ ಚರ್ಚಿಸಿದ ಅವರು ಇನ್ನು ಒಂದು ತಿಂಗಳೊಳಗಾಗಿ ಬಿಪಿಎಲ್‌ ಕಾರ್ಡ್‌ ಹೊಂದಿರುವ ಎಲ್ಲ ಅಂಗವಿಕಲ‌ರಿಗೆ ಯುಡಿಐಡಿ ಕಾರ್ಡ್‌ ನೀಡಬೇಕು. ಇಂದಿನಿಂದಲೇ ಈ ಕಾರ್ಯಕ್ಕೆ ಕಾರ್ಯಕ್ರಮ ರೂಪಿಸಿ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಅಂಗವಿಕಲ‌ರ ಇಲಾಖೆಯ ಸಹಯೋಗದಲ್ಲಿ ತಾಲೂಕುವಾರು ಅಂಗವಿಕಲರ ಪಟ್ಟಿ ಪಡೆದುಕೊಂಡು ಆಯಾ ತಾಲೂಕಾ ಕೇಂದ್ರಗಳಲ್ಲಿ ಕಾರ್ಡ್‌ ನೀಡುವ ವ್ಯವಸ್ಥೆಯಾಗಬೇಕು. ಈ ಕುರಿತು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಲು ಸೂಚಿಸಿದರು.

ಪ್ರತಿಯೊಂದು ಸಭೆಗೆ ಬರುವಾಗ ಪೂರ್ವ ತಯಾರಿಯಲ್ಲಿ ಬರಬೇಕು. ನಿಮ್ಮ ಇಲಾಖೆಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿ ನೆನಪಿನಲ್ಲಿಟ್ಟುಕೊಂಡು ಕೇಳಿದಾಗ ತಕ್ಷಣ ಫೈಲ್‌ ತೆಗೆಯದೇ ಹೇಳುವಂತರಾಗಬೇಕು. ಜೀವನದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ಒಳ್ಳೇಯ ಕೆಲಸ ಮಾಡಬೇಕು. ನೀಮಗೆ ನೀಡಿದ ಹುದ್ದೆಗೆ ತಕ್ಕಂತೆ ಕೆಲಸ ನಿರ್ವಹಿಸಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಪಂ ಉಪ ಕಾರ್ಯದರ್ಶಿ ಎ.ಜಿ. ತೋಟದ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸವಿತಾ ಕಾಳೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಎ.ಎನ್‌. ದೇಸಾಯಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಜಗದೀಶ ಹೆಬ್ಬಳ್ಳಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿ ಉಕ್ಕಲಿ, ಜಿಲ್ಲಾ ಆಸ್ಪತ್ರೆಯ ಮನೋತಜ್ಞ ಡಾ| ವಿ.ವೈ. ಪಾಟೀಲ, ಸಿಡಬ್ಲೂಸಿ ಸದಸ್ಯ ಎಸ್‌.ಎಸ್‌. ಬೆಳಗಲಿ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next