Advertisement

ಫುಟ್‌ಪಾತ್‌ ಅತಿಕ್ರಮಣ ತೆರವಿಗೆ ಡಿಸಿ ಸೂಚನೆ

02:54 PM Jun 03, 2022 | Team Udayavani |

ಬೆಳಗಾವಿ: ಫುಟ್‌ಪಾತ್‌ ಅತಿಕ್ರಮಣ ತೆರವುಗೊಳಿಸುವ ಜೊತೆಗೆ ನಗರದ ಸೌಂದಯೀìಕರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕುಡಿವ ನೀರು ಪೂರೈಕೆಗೆ ಸಂಬಂಧಿಸಿದ ದೂರು 24 ಗಂಟೆಯಲ್ಲಿ ಪರಿಹರಿಸುವಂತೆ ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಡಳಿತಾಧಿಕಾರಿ ಆಗಿರುವ ನಿತೇಶ್‌ ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಮಹಾನಗರ ಪಾಲಿಕೆ ಕಚೇರಿಗೆ ಗುರುವಾರ ಭೇಟಿ ನೀಡಿ ವಿವಿಧ ವಿಭಾಗಗಳ ಕಾರ್ಯಚಟುವಟಿಕೆ ಪರಿಶೀಲಿಸಿದ ನಂತರ ಅಧಿಕಾರಿಗಳ ಸಭೆ ನಡೆಸಿದ ಅವರು, ಕೆಲವು ಪ್ರಮುಖ ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ಪಾದಚಾರಿ ಮಾರ್ಗ (ಫುಟ್‌ ಪಾತ್‌) ಒತ್ತುವರಿ ಮಾಡಿರುವುದು ಕಂಡುಬಂದಿದೆ. ಇದರಿಂದ ಸಾರ್ವಜನಿಕರ ಓಡಾಟ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೇ ಫುಟ್‌ಪಾತ್‌ ಒತ್ತುವರಿ ತೆರವುಗೊಳಿಸಬೇಕು ಎಂದರು.

ನಗರದಲ್ಲಿ ಕುಡಿವ ನೀರಿನ ಸಮಸ್ಯೆಗೆ ಸಂಬಂಧಪಟ್ಟಂತೆ ಯಾವುದೇ ದೂರುಗಳು ಬಂದರೆ 24 ಗಂಟೆಗಳಲ್ಲಿ ಪರಿಹರಿಸುವ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಮಳೆಗಾಲ ಆರಂಭಗೊಳ್ಳುತ್ತಿರುವುದರಿಂದ ಒಳಚರಂಡಿ ಕಾಮಗಾರಿ ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು. ಪ್ರಮುಖ ರಸ್ತೆಗಳು ಹಾಗೂ ಜನವಸತಿ ಬಡಾವಣೆಗಳ ಅಕ್ಕಪಕ್ಕದಲ್ಲಿರುವ ನಾಲಾಗಳನ್ನು ಆಗಾಗ ಸ್ವತ್ಛಗೊಳಿಸಬೇಕು ಎಂದು ಹೇಳಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳಿಗೆ ಸಂಬಂಧಿಸಿದಂತೆ ಡಿಜಿಟಲ್‌ ದಾಖಲೆ ಸಿದ್ಧಪಡಿಸಿ “ಇ-ಆಸ್ತಿ’ ತಂತ್ರಾಂಶ ಮೂಲಕ ಸಾರ್ವಜನಿಕರು ಸುಲಭವಾಗಿ ಪಡೆಯಲು ಅನುಕೂಲ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು ಕಟ್ಟಡ ಪರವಾನಗಿಗೆ ಸಂಬಂಧಿಸಿದ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಬೇಕು. ವಿನಾಕಾರಣ ವಿಳಂಬ ಧೋರಣೆ ಅನುಸರಿಸಬಾರದೆಂದು ಎಚ್ಚರಿಸಿದರು.

ತೆರಿಗೆ ಸಂಗ್ರಹ ಹೆಚ್ಚಿಸಲು ಸಲಹೆ: ಮಹಾನಗರ ಪಾಲಿಕೆ ಪ್ರಸಕ್ತ ವರ್ಷದಲ್ಲಿ ಇದುವರೆಗೆ ಶೇ.48 ತೆರಿಗೆ ಸಂಗ್ರಹಿಸಿದೆ. ಇನ್ನುಳಿದ ತೆರಿಗೆ ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ ಜಿಲ್ಲಾಧಿಕಾರಿ ಪಾಲಿಕೆಯ ಆಸ್ತಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

Advertisement

ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾದ ಡಾ| ರುದ್ರೇಶ್‌ ಘಾಳಿ ಮಾತನಾಡಿ, ಕುಡಿವ ನೀರು ಪೂರೈಕೆ, ಸ್ವಚ್ಛತೆ ಸೇರಿದಂತೆ ನಾಗರಿಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಪಾಲಿಕೆ ವತಿಯಿಂದ ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ವಿವರಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಾಲಿಕೆ ಆವರಣದಲ್ಲಿ ಸಸಿ ನೆಡುವ ಮೂಲಕ ಉದ್ಯಾನವನದ ಸೌಂದರ್ಯೀಕರಣಕ್ಕೆ ಚಾಲನೆ ನೀಡಿದರು. ಪಾಲಿಕೆ ಉಪ ಆಯುಕ್ತರಾದ ಭಾಗ್ಯಶ್ರೀ ಹುಗ್ಗಿ, ಪಾಲಿಕೆ ಅಧಿಕಾರಿಗಳು ಇದ್ದರು.

ಸ್ಮಾರ್ಟ್‌ಸಿಟಿ ಕೇಂದ್ರಕ್ಕೆ ಭೇಟಿ: ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ನಾಗರಿಕರಿಗೆ ವಿವಿಧ ಸೌಲಭ್ಯ ಒದಗಿಸಲು ಅನುಕೂಲವಾಗುವಂತೆ ಸ್ಮಾರ್ಟ್‌ ಸಿಟಿ ಯೋಜನೆಯಡಿ ನಿರ್ಮಿಸಲಾಗಿರುವ ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ಸೆಂಟರ್‌ ಕಾರ್ಯಚಟುವಟಿಕೆಗಳನ್ನು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಪರಿಶೀಲಿಸಿದರು. ವಿಶ್ವೇಶ್ವರಯ್ಯ ನಗರದಲ್ಲಿ ಇರುವ ಕಮಾಂಡ್‌ ಕಂಟ್ರೋಲ್‌ ಸೆಂಟರ್‌ ಗೆ ಗುರುವಾರ ಭೇಟಿ ನೀಡಿದ ಅವರು, ಈ ಸ್ಮಾರ್ಟ್‌ ಸಿಟಿ ಕೇಂದ್ರದ ಕಾರ್ಯ ನಿರ್ವಹಣೆ ಬಗ್ಗೆ ಮಾಹಿತಿ ಪಡೆದರು. ಸಂಚಾರ ನಿರ್ವಹಣೆ, ಬಸ್‌ ಸಂಚಾರ ಮಾಹಿತಿ, ಭದ್ರತಾ ನಿಗಾ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next