ಯಾದಗಿರಿ: ಬರುವ 2021ರ ಜನವರಿ ಒಂದಕ್ಕೆ ಸಂಬಂಧಿ ಸಿದ ಮತದಾರರ ಪರಿಷ್ಕರಣೆಗೆ ಕುರಿತಂತೆ ನಮೂನೆ 6, 7, 8 ಹಾಗೂ 8ಎ ಅರ್ಜಿ ತ್ವರಿತವಾಗಿ ಪರಿಶೀಲಿಸಿ ಇತ್ಯರ್ಥ ಪಡಿಸುವಂತೆ ಜಿಲ್ಲಾಧಿಕಾರಿ ಡಾ| ರಾಗಪ್ರಿಯ ಆರ್. ಶಹಾಪುರ ತಹಶೀಲ್ದಾರ್‌ಗೆ ನಿರ್ದೇಶನ ನೀಡಿದರು.
ಶಹಾಪುರ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ಗ್ರಾಪಂಗಳಿಗೆಚುನಾವಣೆ ಘೋಷಣೆಯಾಗಿದೆ. ಈ ದಿಸೆಯಲ್ಲಿ ಚುನಾವಣೆ ನಿಷ್ಪಕ್ಷಪಾತ ಹಾಗೂ ಪಾರದರ್ಶಕವಾಗಿ ನಡೆಸಬೇಕು. ಶಹಾಪುರ ತಾಲೂಕು ವ್ಯಾಪ್ತಿಯ ಎಲ್ಲ ಗ್ರಾಪಂ ವ್ಯಾಪ್ತಿಯ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆ ಗುರುತಿಸಬೇಕು. ಆ ಮತಗಟ್ಟೆಗಳಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಬೇಕು ಎಂದರು.
ಅರ್ಹ ವಿಕಲಚೇತನ ಮತದಾರರ ಮಾಹಿತಿ ಸಂಗ್ರಹಿಸಬೇಕು. ಮತದಾನಕ್ಕೆ ಆಗಮಿಸುವ ವಿಕಲಚೇತನ ಮತದಾರರು ಮತಗಟ್ಟೆಗೆಬಂದು ಮತದಾನ ಮಾಡಲು ವ್ಹೀಲ್‌ಚೇರ್ ಸೇರಿದಂತೆ ಅಗತ್ಯ ಸೌಕರ್ಯ ಒದಗಿಸುವಂತೆ ತಿಳಿಸಿದರು.
ಚುನಾವಣಾ ಆಯೋಗದ ಮಾರ್ಗಸೂಚಿಗಳಂತೆ ಡಿ.15ರಂದುಪಿಆರ್‌ಒ ತರಬೇತಿ ಏರ್ಪಡಿಸಲಾಗಿದೆ. ಆ ತರಬೇತಿಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಮುಖ್ಯವಾಗಿ ಚುನಾವಣೆ ನೀತಿಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರವಹಿಸಬೇಕು. ನೀತಿಸಂಹಿತೆ ಉಲ್ಲಂಘಿಸುವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಚುನಾವಣೆ ಪ್ರಕ್ರಿಯೆಯಲ್ಲಿ ವಿದ್ಯುತ್ ಅಡಚಣೆಯಾಗಬಾರದು, ಡಾಟಾ ಎಂಟ್ರಿ ಆಪರೇಟರ್, ಆಸನಗಳು, ಕುಡಿಯುವ ನೀರು ಪೂರೈಕೆ, ಟೇಬಲ್‌ಗಳು ಸೇರಿದಂತೆ ಅಗತ್ಯ ಸಕಲ ವ್ಯವಸ್ಥೆ ಅಚ್ಚುಕಟ್ಟಾಗಿ ಕಲ್ಪಿಸುವಂತೆ ತಾಪಂ ಇಒ ಜಗನ್ನಾಥ ಮೂರ್ತಿಗೆ ಸೂಚಿಸಿದರು.
ಈ ವೇಳೆ ಶಹಾಪುರ ತಹಶೀಲ್ದಾರ್ ಮೆಹಬೂಬ್‌ಬಿ,ಶಿರಸ್ತೇದಾರ್ ವೆಂಕಟೇಶ್, ಸಿಬ್ಬಂದಿ ರಮೇಶ್ ಸೇರಿದಂತೆ ಇತರರಿದ್ದರು.