ಉಡುಪಿ: ಪ್ರಸಕ್ತ ಆರ್ಥಿಕ ವರ್ಷದಿಂದ ಎಲ್ಲ ಇಲಾಖೆಗಳು ತಮ್ಮ ಕಚೇರಿಗೆ ಅಗತ್ಯವಿರುವ ಸಾಮಗ್ರಿಗಳನ್ನು ಗವರ್ನಮೆಂಟ್ ಇ ಮಾರ್ಕೆಟ್ ಮೂಲಕ ಕಡ್ಡಾಯವಾಗಿ ಖರೀದಿ ಮಾಡುವಂತೆ ಸೂಚಿಸಿದ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಇಲಾಖೆಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬಂದಿಯ ವೇತನದಲ್ಲಿ ಕಡ್ಡಾಯವಾಗಿ ಪಿಎಫ್ ಹಣ ಕಡಿತ ಮಾಡುವುದು ಎಲ್ಲ ಅಧಿಕಾರಿಗಳ ಜವಾಬ್ದಾರಿ ಎಂದು ತಿಳಿಸಿದರು.
ಅವರು ಸೋಮವಾರ ಜಿ.ಪಂ. ಸಭಾಂಗಣದಲ್ಲಿ ಅಧ್ಯಕ್ಷ ದಿನಕರ ಬಾಬು ಅವರ ಅಧ್ಯಕ್ಷತೆಯಲ್ಲಿ ಜರುಗಿದ ಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯ 8 ಸ್ಥಳಗಳಲ್ಲಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಮತ್ತು ಘಟಕ ಪ್ರಾರಂಭಕ್ಕೆ ಮುಂಚೆ ಮತ್ತು ಅನಂತರ ಆ ಪ್ರದೇಶದ ಜನರ ಆರೋಗ್ಯ ಸುಧಾರಣೆಯ ಕುರಿತ ವರದಿಯನ್ನು ನೀಡುವಂತೆ ಆರೋಗ್ಯ ಇಲಾಖೆ ಮತ್ತು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.
2016-17ರಲ್ಲಿ ನಿಗದಿಪಡಿಸಿದ ಕಾರ್ಯಕ್ರಮಗಳಲ್ಲಿ ಸಂಪೂರ್ಣ ಸಾಧನೆ ತೋರದ ಇಲಾಖೆಗಳು ಸಮರ್ಪಕ ಕಾರಣ ತೋರಿಸಿ ವರದಿ ನೀಡುವಂತೆ ಹಾಗೂ 2017-18ರ ಕ್ರಿಯಾ ಯೋಜನೆಯಲ್ಲಿ ನಿಗದಿತ ಗುರಿ ಸಾಧನೆಗೆ ಕ್ರಮ ವಹಿಸುವಂತೆ ಸೂಚಿಸಿದರು.
ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಬಾಬು ಶೆಟ್ಟಿ, ಶಶಿಕಾಂತ ಪಡುಬಿದ್ರಿ, ಉದಯ ಎಸ್. ಕೋಟ್ಯಾನ್, ಜಿ.ಪಂ. ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು. ಯುವ ಸ್ಪಂದನ ಕುರಿತು ಮಾಹಿತಿ ಪತ್ರವನ್ನು ಜಿಲ್ಲಾಧಿಕಾರಿ ಬಿಡುಗಡೆ ಮಾಡಿದರು.