Advertisement

ತಡಕೋಡದಲ್ಲಿ ಡಿಸಿ ನಿತೇಶ ಗ್ರಾಮ ವಾಸ್ತವ್ಯ

09:22 AM Apr 17, 2022 | Team Udayavani |

ಧಾರವಾಡ: ಸಾರ್ವಜನಿಕರು ಆಡಳಿತಾತ್ಮಕ ಕಾರಣದಿಂದ ತಾಲೂಕು, ಜಿಲ್ಲಾ ಹಂತದಲ್ಲಿ ವಿಳಂಬವಾಗಿರುವ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಮೂಲಕ ಪರಿಹರಿಸಿಕೊಳ್ಳಬಹುದು. ಸಾಮಾಜಿಕ ಭದ್ರತಾ ಯೋಜನೆಗಳಡಿ ಮಾಸಾಶನಕ್ಕೆ ನೀಡಿರುವ ಅರ್ಜಿಗಳನ್ನು ಕೂಡ ವಿಲೇವಾರಿ ಮಾಡಲಾಗುವುದು ಎಂದು ಡಿಸಿ ನಿತೇಶ ಪಾಟೀಲ ಹೇಳಿದರು.

Advertisement

ತಡಕೋಡದ ವೀರಭದ್ರೇಶ್ವರ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಕೆಳಹಂತದಿಂದ ಪ್ರಾರಂಭವಾಗಿ ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರತಿ ತಿಂಗಳು ಒಂದು ಹಳ್ಳಿಯಲ್ಲಿ ಇದ್ದು, ಸ್ಥಳೀಯ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಪರಿಹರಿಸಲು ಕ್ರಮವಹಿಸಲಾಗುವುದು. ಇದೇ ಸಂದರ್ಭದಲ್ಲಿ ಆರೋಗ್ಯ ಕಾರ್ಯಕ್ರಮವೂ ನಡೆಯುವುದರಿಂದ ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಕಾರ್ಡ್‌ ಗಳನ್ನು ವಿತರಿಸಲಾಗುತ್ತಿದೆ ಎಂದರು.

ತಾಲೂಕು ಹಾಗೂ ಜಿಲ್ಲಾ ಹಂತದಲ್ಲಿ ಪರಿಹಾರವಾಗಬೇಕಾಗಿರುವ ಸರ್ಕಾರದ ಕಾರ್ಯ, ಸಾರ್ವಜನಿಕರ ಅಹವಾಲುಗಳ ಈಡೇರಿಕೆಗೆ ಈ ಕಾರ್ಯಕ್ರಮ ವರದಾನವಾಗಿದೆ. ಗ್ರಾಮೀಣ ಜನರ ಸಮಸ್ಯೆಗಳ ಸ್ಪಂದನೆಗೆ ಸರ್ಕಾರ, ಜಿಲ್ಲಾಡಳಿತ ಆದ್ಯತೆ ನೀಡುತ್ತಿವೆ ಎಂದು ಹೇಳಿದರು.

ತಹಶೀಲ್ದಾರ್‌ ಡಾ| ಸಂತೋಷ ಕುಮಾರ ಬಿರಾದಾರ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಮಹತ್ವಾಕಾಂಕ್ಷಿ ಕಾರ್ಯಕ್ರಮದ ಭಾಗವಾಗಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಪ್ರತಿ ತಿಂಗಳು ಮೂರನೇ ಶನಿವಾರದಂದು ಹಮ್ಮಿಕೊಂಡು ಬರಲಾಗುತ್ತಿದೆ. ಸಾರ್ವಜನಿಕ ಹಿತದೃಷ್ಟಿಯ ಅನೇಕ ಕಾರ್ಯಕ್ರಮಗಳನ್ನು ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಸ್ಥಳದಲ್ಲಿಯೇ ಪರಿಹರಿಸಲು ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.

Advertisement

ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಈರಪ್ಪ ಬೆಳವಡಿ, ಉಪಾಧ್ಯಕ್ಷ ಯಲ್ಲಪ್ಪ ಹೊಳೆಪ್ಪನವರ, ಪ್ರಭಾರ ಉಪವಿಭಾಗಾಧಿಕಾರಿ ಮಾಧವ ಗಿತ್ತೆ, ತಾಪಂ ಇಒ ರಾಘವೇಂದ್ರ ಜಗಲಾಸರ, ಲೋಕೋಪಯೋಗಿ ಕಾರ್ಯ ನಿರ್ವಾಹಕ ಎಂಜಿನಿಯರ್‌ ಎಸ್‌.ಬಿ. ಚೌಡಣ್ಣವರ, ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಇಇ ರಾಜಶೇಖರ ಮುನವಳ್ಳಿ, ಆಹಾರ ಇಲಾಖೆ ಉಪನಿರ್ದೇಶಕ ಸುಧೀರ ಸಾವ್ಕಾರ, ಬಿಇಒ ಉಮೇಶ ಬಮ್ಮಕ್ಕನವರ್‌ ಇನ್ನಿತರರಿದ್ದರು.

ಗಿರೀಶ ಸುಂಕದ ಪ್ರಾರ್ಥಿಸಿದರು. ಸುನಿತಾ ಪಾಟೀಲ ಸ್ವಾಗತ ನೃತ್ಯ ಪ್ರದರ್ಶಿಸಿದರು. ಪಿಡಿಒ ತನವೀರ್‌ ಸ್ವಾಗತಿಸಿದರು. ಕಂದಾಯ ನಿರೀಕ್ಷಕ ಐ.ಎಫ್‌. ಅಯ್ಯನಗೌಡ್ರ, ಮಂಜುನಾಥ ಧೂಳಪ್ಪನವರ, ಗ್ರಾಮ ಲೆಕ್ಕಾಧಿಕಾರಿಗಳಾದ ಶೋಭಾ ಮಲಗುಂದ, ಮಹೇಶ ನಾಗವ್ವನವರ, ರೇಖಾ ಗಾಣಿಗೇರ, ಗಂಗಾಧರ ಮೇದಾರ ಸೇರಿದಂತೆ ಗ್ರಾಮ ಸಹಾಯಕರು ಸಾರ್ವಜನಿಕರ ಅಹವಾಲುಗಳ ಸ್ವೀಕಾರ, ಆಲಿಸುವಿಕೆ ಕಾರ್ಯ ನಿರ್ವಹಿಸಿದರು.

ಕಾರ್ಮಿಕರ ಬೇಡಿಕೆಗೆ ಸ್ಪಂದಿಸಲು ಮನವಿ:

ಟಾಟಾ ಮಾರ್ಕೊಪೊಲೊ ಸಂಸ್ಥೆಯ ಕಾರ್ಮಿಕರ ಪ್ರತಿಭಟನೆಗೆ ಜಿಲ್ಲಾಡಳಿತ-ಸರ್ಕಾರ ಸ್ಪಂದಿಸಿ ಕಾರ್ಖಾನೆಯ ಆಡಳಿತ ಮಂಡಳಿಯೊಂದಿಗೆ ಮಧ್ಯಸ್ಥಿಕೆ ವಹಿಸಿ ಕಾರ್ಮಿಕರ ಬೇಡಿಕೆಗೆ ಸ್ಪಂದಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ ನಿತೇಶ ಪಾಟೀಲ, ಟಾಟಾ ಮಾರ್ಕೊಪೊಲೊ ಕಾರ್ಮಿಕರ ಹೋರಾಟದ ಬಗ್ಗೆ ಜಿಲ್ಲಾಡಳಿತ, ಸರ್ಕಾರ ಗಮನ ಹರಿಸಿದೆ. ಕಾರ್ಮಿಕ ಇಲಾಖೆಯ ಕಾನೂನು ಪ್ರಕಾರ ಮಧ್ಯಸ್ಥಿಕೆ ವಹಿಸಿ ಪರಿಹರಿಸಲು ಕಾರ್ಖಾನೆ ಹಾಗೂ ಕಾರ್ಮಿಕರನ್ನು ಚರ್ಚೆಗೆ ಆಹ್ವಾನಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರ, ಪಿಯು ಕಾಲೇಜು ಸ್ಥಾಪನೆ, ತಿಮ್ಮಾಪುರ ಮಡ್ಡಿಯಲ್ಲಿ ವಾಸವಾಗಿರುವ ಜನರ ಹೆಸರಿಗೆ ಮನೆಗಳ ಹಕ್ಕು ನೀಡುವ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಡಿಸಿ, ತಡಕೋಡದ ತಿಮ್ಮಾಪುರ ಮಡ್ಡಿ ಪ್ರದೇಶದ 73 ನಿವೇಶನಗಳಲ್ಲಿ ವಾಸವಾಗಿ ಈಗಾಗಲೇ ಮನೆ ನಿರ್ಮಿಸಿಕೊಂಡಿರುವವರ ಹೆಸರಿಗೆ ಹಕ್ಕು ಪತ್ರ ಕೊಡಬೇಕು. ಉಳಿದ ನಿವೇಶನಗಳನ್ನು ಅರ್ಹರಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು. ಗ್ರಾಮದಲ್ಲಿ ಇರುವ ನಿವೇಶನ ರಹಿತರ ಪಟ್ಟಿ ಮಾಡಿ ನೀಡಿದರೆ ಸೂರು ಒದಗಿಸಲು ಕ್ರಮ ವಹಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next