Advertisement

ಕುಡಿವ ನೀರಿನ ಮೂಲ ಕಲುಷಿತವಾಗದಿರಲಿ

04:27 PM Jan 17, 2023 | Team Udayavani |

ತುಮಕೂರು: ಕುಡಿಯುವ ನೀರಿನ ಮೂಲಗಳಿಗೆ ಕಲುಷಿತ ನೀರು ಸೇರ್ಪಡೆ ಆಗುತ್ತಿರುವ ಬಗ್ಗೆ ದೂರು ಬಂದಲ್ಲಿ ತಕ್ಷಣ ಗ್ರಾಪಂ, ಗ್ರಾಮ ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ತ್ಯಾಜ್ಯ ಅಥವಾ ರಾಸಾಯನಿಕ ಶುದ್ಧ ನೀರಿನ ಮೂಲಗಳಿಗೆ ಸೇರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಖಡಕ್‌ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್‌ ಸಭಾಂಗಣದಲ್ಲಿ ನಡೆದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗಿನ ವಿಡಿಯೋ ಕಾನ್ಫರೆನ್ಸ್‌ ನಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳಗೊಳ್ಳದಂತೆ ಫಾಗಿಂಗ್‌, ಮನೆ ಸುತ್ತ ನೀರು ನಿಲ್ಲದಂತೆ ಸ್ವತ್ಛತೆ ಕಾಪಾಡಿಕೊಳ್ಳುವಿಕೆ ಮುಂತಾದವುಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವಿಕೆ ಸೇರಿ ಅಗತ್ಯ ಮುನ್ನಚ್ಚರಿಕೆ ಕ್ರಮ ವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಲಸಿಕೆಗಳ ದಾಸ್ತಾನು ಪಡೆಯಿರಿ: ಜಿಲ್ಲೆಯಲ್ಲಿ ಯಾವುದೇ ಸಕ್ರಿಯ ಕೋವಿಡ್‌ ಪ್ರಕರಣ ಇಲ್ಲದಿ ದ್ದರೂ, ವೈದ್ಯಾಧಿಕಾರಿಗಳು ನಿರ್ಲಕ್ಷ್ಯ ವಹಿಸದೆ ಕೋವಿ ಶೀಲ್ಡ್‌, ಕೋವ್ಯಾಕ್ಸಿನ್‌ ಲಸಿಕೆ ನೀಡುವಿಕೆಗೆ ಆದ್ಯತೆ ನೀಡಬೇಕು. ಜಿಲ್ಲೆಗೆ 14 ಸಾವಿರ ಕೋವಿಶೀಲ್ಡ್‌ ಲಸಿಕೆ ಬರಲಿದ್ದು, ಈಗಾಗಲೇ 41 ಸಾವಿರದಷ್ಟು ದಾಸ್ತಾನು ಇರುವಂತಹ ಕೋವ್ಯಾಕ್ಸಿನ್‌ ಲಸಿಕೆ ಅರ್ಹರಿಗೆ ನೀಡ ಬೇಕು, ತಾಲೂಕು ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಲಸಿಕೆ ಗಳ ದಾಸ್ತಾನು ಪಡೆಯಬೇಕು ಎಂದು ಸೂಚಿಸಿದರು.

ತಿಂಗಳ ಮೊದಲನೇ ಶನಿವಾರ ಸ್ವತ್ಛತಾ ದಿವಸ ಎಂದು ಪರಿಗಣಿಸಲಾಗಿದ್ದು, ಸರ್ಕಾರಿ ಕಚೇರಿ ಮುಖ್ಯಸ್ಥರು ತಮ್ಮ ಕಚೇರಿ ಆವರಣ ಸ್ವತ್ಛವಾಗಿಟ್ಟು ಕೊಳ್ಳುವಂತೆ ಸಲಹೆ ನೀಡಿದರು. ಅಭಾ ಕಾರ್ಡ್‌ ಪ್ರಗತಿ ಅಶಾದಾಯಕವಾಗಿರು ವುದಿಲ್ಲ ಮತ್ತು ಯುಡಿಐಡಿ ಕಾರ್ಡ್‌ ಜನರೇಟಿಂಗ್‌ ಕಾರ್ಯ ಬಾಕಿಯಿದೆ. ಎಲ್ಲರೂ ಈ ನಿಟ್ಟಿನಲ್ಲಿ ಲಕ್ಷ್ಯ ಕೊಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ದುರ್ಬಲ ಮತಗಟ್ಟೆಗಳ ಪಟ್ಟಿ ಮಾಡಿ : ಜಿಲ್ಲಾಧಿಕಾರಿಗಳು ಮತಗಟ್ಟೆಗಳನ್ನು ವೀಕ್ಷಿಸಲಿದ್ದು, ಈ ಸಂಬಂಧ ರೂಟ್‌ ಮ್ಯಾಪ್‌ ಸಿದ್ಧಮಾಡಿಟ್ಟುಕೊಳ್ಳುವಂತೆ ಮತ್ತು ಕಳೆದ ಎಂಪಿ ಚುನಾವಣೆಯಲ್ಲಿ ಗಮನಿಸಿದಂತೆ ಕ್ರಿಟಿಕಲ್‌, ದರ್ಬಲ ಮತಗಟ್ಟೆಗಳ ಪಟ್ಟಿ ಮಾಡಿ ಸಲ್ಲಿಸುವಂತೆ ಮತ್ತು ಜ.25ರ ರಾಷ್ಟ್ರೀಯ ಮತದಾರರ ದಿನವನ್ನು ವ್ಯವಸ್ಥಿತವಾಗಿ ಆಚರಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಅವರು ಎಇಆರ್‌ಒ, ಇಅರ್‌ಒಗಳಿಗೆ ಸೂಚಿಸಿದರು.

Advertisement

ತ್ಯಾಜ್ಯ ವಿಲೇವಾರಿಗೆ ನಿವೇಶನ ಹಸ್ತಾಂತರಿಸಿ : ಘನ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಸಂಬಂಧಿಸಿದಂತೆ ನಿವೇಶನ ಹಸ್ತಾಂತರ ಪ್ರಕ್ರಿಯೆ ಮಾ.31 ರೊಳಗಾಗಿ ಗುರಿ ಮುಟ್ಟಬೇಕಿದ್ದು, ಎಲ್ಲಾ ಇಒ, ಪಿಡಿಒ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಮಳೆ ಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ 810 ಮನೆಗಳ ಪೈಕಿ 279 ಮನೆ ತಳಪಾಯ ಹಂತದಲ್ಲಿವೆ. 44 ಮನೆಗಳು ಚಾವಣಿ ಹಂತದವರೆಗೂ ತರಬೇಕು, ಈಗಾಗಲೇ ಪರಿಹಾರವಾಗಿ 1 ಲಕ್ಷ ರೂ. ಪಡೆದಿರುವ ಸಂತ್ರಸ್ತರು ಇನ್ನೂ ಮನೆ ನಿರ್ಮಾಣ ಮಾಡದಿದ್ದಲ್ಲಿ ಅವರಿಗೆ ನೋಟಿಸ್‌ ನೀಡಿ ಮನೆ ಕಟ್ಟಲು ಪ್ರಾರಂಭಿಸುವಂತೆ ಸೂಚನೆ ನೀಡಬೇಕು ಎಂದು ಜಿಪಂ ಸಿಇಒ ಡಾ.ಕೆ.ದ್ಯಾಕುಮಾರಿ ಪಿಡಿಒಗಳಿಗೆ ಸೂಚಿಸಿದರು.

ಹೆಲಿಪ್ಯಾಡ್‌ಗೆ ಜಾಗ ಗುರುತಿಸಿ : ಮಧುಗಿರಿ, ತಿಪಟೂರು, ಶಿರಾ, ಗುಬ್ಬಿ ಸೇರಿ ಉಪಭಾಗೀಯ ಮಟ್ಟದಲ್ಲಿ ಮತ್ತು ತಾಲೂಕು ಮಟ್ಟದಲ್ಲಿ ಪಟ್ಟಣಗಳಿಗೆ ಸಮೀಪ ಇರುವಂತೆ 1-2 ಎಕರೆ ಜಮೀನನ್ನು ಹೆಲಿಪ್ಯಾಡ್‌ ನಿರ್ಮಾಣ ಸಂಬಂಧ ಗುರುತಿಸಿ, ಪ್ರಸ್ತಾವನೆ ಸಲ್ಲಿಸುವಂತೆ ತಹಶೀಲ್ದಾರ್‌ಗೆ ಸೂಚಿಸಿದ ಜಿಲ್ಲಾಧಿಕಾರಿ ವೈ. ಎಸ್‌.ಪಾಟೀಲ, ಸ್ಮಶಾನ ಭೂಮಿ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಆರ್‌ಟಿಸಿ ಪ್ರಕಾರವೇ ಜಮೀನು ಲಭ್ಯವಿದ್ದಲ್ಲಿ ಸ್ಕೆಚ್‌ ಮಾಡಿ, ಭೂಮಿ ಹಸ್ತಾಂತರಕ್ಕೆ ಕ್ರಮವಹಿಸಬೇಕು, ಆರ್‌ಟಿಸಿಗಿಂತ ವ್ಯತ್ಯಾಸ ಇರುವ ಜಮೀನು ಇದ್ದಲ್ಲಿ ಸ್ಕೆಚ್‌ಗೆ ಮರು ಪ್ರಸ್ತಾವನೆ ಸಲ್ಲಿಸುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಬಂದಂತಹ ಅರ್ಜಿಗಳು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ್ದಲ್ಲಿ ನಿಗದಿತ ಸಮಯ ದೊಳಗೆ ಇತ್ಯರ್ಥಗೊಳಿಸಬೇಕು, ಇತರೆ ಇಲಾಖೆ ಗಳಿಗೆ ಸಂಬಂಧಿಸಿದ ಅರ್ಜಿ ಆದಲ್ಲಿ ಆ ಇಲಾಖೆಗೆ ವರ್ಗಾಯಿಸಿ ಸೂಕ್ತ ಹಿಂಬರಹ ನೀಡಬೇಕು ಎಂದು ತಹಶೀಲ್ದಾರ್‌ಗಳಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next