Advertisement

ಭಟ್ಕಳ: ಪ್ರತ್ಯೇಕ ಸಭೆ ನಡೆಸಿ ಮೊಗೇರ ಸಮಾಜದವರ ಅಹವಾಲು ಕೇಳಿದ ಜಿಲ್ಲಾಧಿಕಾರಿ

07:24 PM Apr 12, 2022 | Team Udayavani |

ಭಟ್ಕಳ: ಕಳೆದ 21 ದಿನಗಳಿಂದ ಇಲ್ಲಿನ ತಾಲೂಕು ಆಡಳಿತ ಸೌಧದ ಪಕ್ಕದಲ್ಲಿ ಧರಣಿ ನಡೆಸುತ್ತಿರುವ ಮೊಗೇರ ಸಮಾಜದವರ ಅಹವಾಲು ಕೇಳಲು ಜಿಲ್ಲಾಧಿಕಾರಿ ಭಟ್ಕಳಕ್ಕೆ ಭೇಟಿ ನೀಡಿ ಮೊಗೇರ ಸಮಾಜದವರ ಮುಖಂಡರೊಂದಿಗೆ ಪ್ರತ್ಯೇಕ ಸಭೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಮೊಗೇರ ಸಮಾಜದ ಪ್ರಮುಖರಾದ ನ್ಯಾಯವಾದಿ ನಾಗರಾಜ ಈ.ಎಚ್. ಅವರು ಜಿಲ್ಲಾಧಿಕಾರಿಗಳಿಗೆ ಮೊಗೇರ ಸಮಾಜದ ಪ್ರಮಾಣ ಪತ್ರವನ್ನು ನೀಡುವ ಸಲುವಾಗಿ ರಾಜ್ಯದ ಉಚ್ಚ ನ್ಯಾಯಾಲಯ, ಸರ್ವೋಚ್ಚ ನ್ಯಾಯಾಲಯ ಹಾಗೂ ರಾಷ್ಟ್ರೀಯ ಜಾತಿ ಪರಿಶೀಲನಾ ಆಯೋಗಗಳ ತೀರ್ಪುಗಳನ್ನು ಉಲ್ಲೇಖಿಸುತ್ತಾ ಮೊಗೇರ ಸಮಾಜದವರಿಗೆ ನೀಡುತ್ತಿರುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಮುಂದುವರಿಸುವಂತೆ ಕೋರಿದರು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಮೊಗೇರ ಸಮಾಜದವರು ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕಾಗಿ ಕಳೆದ 21 ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ. ಅವರು ಹೋರಾಟ ಆರಂಭ ಮಾಡಿದಾಗಿನಿಂದ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ. ಅವರ ಪ್ರಥಮ ದಿನದ ಹೋರಾಟದಂದು ಅವರಿಂದ ಮನವಿ ಸ್ವೀಕರಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಬಂದಿದ್ದರು. ನಂತರ ಅವರೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದೇನೆ. ಅವರು ಕೂಡಾ ತಮ್ಮ ಮನವಿಯನ್ನು ಲಿಖಿತವಾಗಿ ನೀಡಿದ್ದಾರೆ. ಈಗಾಗಲೇ ಸಮಾಜ ಕಲ್ಯಾಣ ಸಚಿವರು ಕೂಡಾ ಬಂದು ಅವರೊಂದಿಗೆ ಮಾತನಾಡಿದ್ದಾರೆ. ಇದರಲ್ಲಿ ಜಿಲ್ಲಾಡಳಿತದ ನಿಲುವು ಏನೂ ಇಲ್ಲ, ನಾವು ಇರುವ ವಿಷಯವನ್ನು ಸರಕಾರಕ್ಕೆ ವರದಿ ಮಾಡುವುದಷ್ಟೇ ನಮ್ಮ ಕೆಲಸವಾಗಿದೆ. ಸರಕಾರದ ಮಟ್ಟದಲ್ಲಿ ಈ ಕುರಿತು ನಿರ್ಧಾರಾವಾಗಬೇಕಾಗಿದ್ದು, ಸಮಾಜ ಕಲ್ಯಾಣ ಸಚಿವರು ಉನ್ನತ ಮಟ್ಟದ ಸಭೆಯೊಂದನ್ನು ಕರೆಯುವ ಕುರಿತು ತಿಳಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸುಮನ್ ಪನ್ನೇಕರ್ ಅವರಲ್ಲಿ ಕಳೆದ ಎ.8ರಂದು ರಾತ್ರಿ ಮೊಟ್ಟೆ ಎಸತದ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಒಟ್ಟು 5 ಜನ ಯುವಕರು ಈ ಕೃತ್ಯದಲ್ಲಿ ಭಾಗವಹಿಸಿದ್ದಾರೆ. ಅವರೆಲ್ಲರೂ ಅಪ್ರಾಪ್ತರಿದ್ದು ಅವರಲ್ಲಿ ಯಾವುದೇ ದುರುದ್ಧೇಶ ಕಂಡು ಬಂದಿಲ್ಲ. ಅವರೆಲ್ಲರೂ ಪರೀಕ್ಷೆ ಮುಗಿದ ಸಂತಸದಲ್ಲಿರುವಾಗ ಈ ಕೃತ್ಯ ಎಸಗಿದ್ದಾರೆಯೇ ವಿನಹ ಯಾವುದೇ ಹಿನ್ನೆಲೆ ಕಂಡು ಬಂದಿಲ್ಲ.  ಆದರೂ ಅವರನ್ನು ತನಿಖೆಗೊಳಪಡಿಸಿ ಸತ್ಯ ಏನೆಂದು ತಿಳಿದು ಕೊಳ್ಳಲಾಗುವುದು ಎಂದರು.

ಸಭೆಯಲ್ಲಿ ಮೊಗೇರ ಸಮಾಜದ ಪ್ರಮುಖರಾದ ಎಫ್.ಕೆ.ಮೊಗೇರ, ನಾಗರಾಜ ಈ.ಎಚ್. ದಾಸಿ ಮೊಗೇರ ಬೆಳಕೆ, ಶ್ರೀಧರ ಮೊಗೇರ ಮುಂಡಳ್ಳಿ, ವೆಂಕಟ್ರಮಣ ಮೊಗೇರ, ಜಯಶ್ರೀ ಮೊಗೇರ, ಪುಂಡಲೀಕ ಹೆಬಳೆ, ಶಂಕರ ಹೆಬಳೆ ಮುಂತಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next