Advertisement

ಡಿಸಿ ಮನ್ನಾ ಭೂಮಿ ಒತ್ತುವರಿ ತೆರವು: ಜಿಲ್ಲಾಧಿಕಾರಿ

11:28 PM Oct 12, 2019 | Sriram |

ಉಡುಪಿ: ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಡಿಸಿ ಮನ್ನಾ ಭೂಮಿಯನ್ನು ಕೂಡಲೆ ತೆರವುಗೊಳಿಸುವಂತೆ ಜಿಲ್ಲೆಯ ಎಲ್ಲ ತಹಶೀಲ್ದಾರ್‌ಗಳಿಗೆ ಜಿಲ್ಲಾಧಿಕಾರಿ ಜಗದೀಶ್‌ ಸೂಚಿಸಿದ್ದಾರೆ.

Advertisement

ರಜತಾದ್ರಿಯ ಅಟಲ್‌ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಪ.ಜಾತಿ, ಪಂಗಡದವರ ಜಿಲ್ಲಾ ಮಟ್ಟದ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ದಲಿತರಿಗೆ ಮೀಸಲಾಗಿರುವ ಡಿಸಿ ಮನ್ನಾ ಭೂಮಿಯನ್ನು ಹಲವು ಕಡೆ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಸಭೆಯಲ್ಲಿದ್ದ ದಲಿತ ಮುಖಂಡರು ದೂರಿದ ಹಿನ್ನೆಲೆಯಲ್ಲಿ, ಡಿಸಿ ಮನ್ನಾ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವವರಿಂದ ಕೂಡಲೇ ತೆರವುಗೊಳಿಸುವಂತೆ ತಹಶೀಲ್ದಾರ್‌ಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಡಿಸಿ ಮನ್ನಾ ಭೂಮಿ ಬೇರೆಯವರ ಪಾಲಾಗಲು ಬಿಡುವುದಿಲ್ಲ. ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳ ಲಾಗುವುದು ಎಂದರು.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ದಲಿತರಿಗೆ ಸಾಲ ನೀಡುತ್ತಿಲ್ಲ ಎಂಬ ಮುಖಂಡರ ದೂರಿಗೆ ಸಂಬಂಧಿಸಿದಂತೆ, ಲೀಡ್‌ ಬ್ಯಾಂಕ್‌ ಮೂಲಕ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸೂಚನೆ ನೀಡುವುದಾಗಿ ಮತ್ತು ಲೀಡ್‌ ಬ್ಯಾಂಕ್‌ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸುವಂತೆ ಲೀಡ್‌ ಬ್ಯಾಂಕ್‌ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಜಿಲ್ಲೆಯಲ್ಲಿ ಮರಳು ದಿಬ್ಬ ತೆರವು ಗೊಳಿಸುವ ಸಂದರ್ಭ ಸಾಂಪ್ರ ದಾಯಿಕ ಮರಳು ತೆಗೆಯುವವರಿಗೆ ಮತ್ತು ಪಂಗಡಕ್ಕೆ ಮೀಸಲಾತಿ ನೀಡುವ ಬಗ್ಗೆ ಈಗಾಗಲೇ ಜಿಲ್ಲೆಯಲ್ಲಿ 170 ಮಂದಿಗೆ ಪರವಾನಗಿ ನೀಡಿದ್ದು ಅದರಲ್ಲಿ 16 ಮಂದಿ ಪ.ಜಾತಿ ಪಂಗಡಕ್ಕೆ ಸೇರಿದವರಿದ್ದಾರೆ. ಸಾಂಪ್ರ ದಾಯಿಕವಾಗಿ ಮರಳು ತೆಗೆಯುವವರ ಹೆಸರಿನಲ್ಲಿ ಬೇರೆಯವರು ಕಾರ್ಯ ನಿರ್ವಹಿ ಸುತ್ತಿದ್ದಲ್ಲಿ ಈ ಬಗ್ಗೆ ತನಿಖೆ ನಡೆಸಿ, ಪರವಾನಿಗೆ ರದ್ದುಪಡಿಸುವುದಾಗಿ ಹೇಳಿದರು.

Advertisement

ಜಿಲ್ಲೆಯ ಎಲ್ಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ಪ.ಜಾತಿ ಪಂಗಡದವರ ಕುಂದುಕೊರತೆ ಸಭೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ ಹೇಳಿದರು.

ಕಾರ್ಕಳ ವಿಭಾಗದ ಎಎಸ್ಪಿ ಕೃಷ್ಣಕಾಂತ್‌, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಕುಮಾರ ಸ್ವಾಮಿ, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಜಿ.ಪಂ. ಉಪ ಕಾರ್ಯದರ್ಶಿ ಕಿರಣ್‌ ಫ‌ಡೆ°àಕರ್‌ ಉಪಸ್ಥಿತರಿದ್ದರು. ಪ.ಜಾತಿ ಪಂಗಡದ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸಮಸ್ಯೆಗಳ ಬಗ್ಗೆ ಚರ್ಚೆ
ಉಡುಪಿ ಇ.ಎಸ್‌.ಐ. ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತು ಸರಿಯಾಗಿ ಸ್ಪಂದಿಸದಿರುವುದು, ನಾಲ್ಕೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಲುಷಿತ ನೀರು ಸರಬರಾಜು, ಕುಂದಾಪುರದ ಖಾಸಗಿ ಶಾಲೆಗಳಲ್ಲಿ ಡೊನೇಷನ್‌ ಹಾವಳಿ, ಆರೂರು ಗ್ರಾ.ಪಂ. ನಲ್ಲಿ ಅಕ್ರಮ ಕಲ್ಲುಕೋರೆ, ಕುಂದಾಪುರದ ಅಂಗಡಿಕೋಣೆ ಏಲಂನಲ್ಲಿ ಮೀಸಲಾತಿ ಅನುಸರಿಸದಿರುವುದು, ಮನೆ ನಿವೇಶನ ಹಂಚಿಕೆ, ಕುಕ್ಕೆಹಳ್ಳಿಯ ಮೀನು ಸಂಸ್ಕರಣ ಘಟಕದಿಂದ ತೊಂದರೆಯಾಗುತ್ತಿರುವುದು, ಹಂಗಾರಕಟ್ಟೆಯ ಫಿಶ್‌ ಕಟ್ಟಿಂಗ್‌ ಫ್ಯಾಕ್ಟರಿಯಿಂದ ಪ.ಜಾತಿ,ಪಂಗಡದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಕುರಿತಂತೆ ವಿಸ್ತೃತ ಚರ್ಚೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next