Advertisement

ಉದ್ಯೋಗಾಕಾಂಕ್ಷಿಗಳ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ

03:57 PM Sep 17, 2019 | Suhan S |

ಯಾದಗಿರಿ: ಉದ್ಯೋಗಾಕಾಂಕ್ಷಿಗಳಿಗೆ ಅವಶ್ಯ ವಿರುವ ಮತ್ತು ಅವರಿಗೆ ಉಪಯೋಗವಾಗುವ ರೀತಿಯಲ್ಲಿ ಕೌಶಲ್ಯಾಧಾರಿತ ತರಬೇತಿ ಆಯೋಜಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನೇರ ಫೋನ್‌-ಇನ್‌ ಕಾರ್ಯಕ್ರಮದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಅವಶ್ಯ ಇರುವ ತರಬೇತಿ ಹಾಗೂ ಸ್ಪರ್ಧಾತ್ಮಕ ವಿಷಯಗಳ ಬಗ್ಗೆ ಜಿಲ್ಲೆಯ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ವಯಂ ಉದ್ಯೋಗಾಕಾಂಕ್ಷಿಗಳಿಂದ ದೂರವಾಣಿ ಮೂಲಕ ಸಮಸ್ಯೆಗಳನ್ನು ಆಲಿಸಿದ ನಂತರ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

ಜಿಲ್ಲೆಯ ಯುವಕ-ಯುವತಿಯರು ಪದವಿ ಪೂರ್ಣಗೊಳಿಸಿದರೂ ಮುಂದೇನು ಎನ್ನುವ ಚಿಂತೆ ಅವರಲ್ಲಿದೆ. ಸರಿಯಾದ ಮಾರ್ಗದರ್ಶನ ಸಿಗುತ್ತಿಲ್ಲ. ಇದರಿಂದ ಅವರ ಮೇಲೆ ಅವರಿಗೆ ಆತ್ಮವಿಶ್ವಾಸ ಇಲ್ಲವಾಗಿದೆ. ಪ್ರತಿಯೊಬ್ಬರಿಗೂ ಉದ್ಯೋಗ ಕೊಡಿಸಲು ಆಗುವುದಿಲ್ಲ. ಆದರೆ, ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಡಿಯಲ್ಲಿ ನೀಡಲಾಗುತ್ತಿರುವ ವಿವಿಧ ತರಬೇತಿ, ಕೋಚಿಂಗ್‌ಗಳು ಉದ್ಯೋಗಾಕಾಂಕ್ಷಿಗಳನ್ನು ಆಕರ್ಷಿಸಿದರೆ ಅವರ ಬದುಕಿಗೆ ದಾರಿದೀಪವಾಗಬಲ್ಲವು. ಈ ನಿಟ್ಟಿನಲ್ಲಿ ತರಬೇತಿ ನೀಡಲು ನಿರ್ದೇಶಿಸಿದರು.

ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳಲ್ಲಿ ಗ್ರಂಥಾಲಯಕ್ಕೆ ಹೋಗುವ ಮತ್ತು ಓದುವ ಅಭ್ಯಾಸವನ್ನು ರೂಢಿಸಬೇಕು. ಓದುವ ವಿಧಾನವನ್ನು ಹೇಳಿಕೊಡಬೇಕು. ದಿನಪತ್ರಿಕೆಗಳನ್ನು ಓದಲು ತಿಳಿಸಬೇಕು. ತರಬೇತಿಗೆ ನೋಂದಾಯಿಸಿಕೊಳ್ಳುವ ಅಭ್ಯರ್ಥಿಗಳ ಸಮಸ್ಯೆಗಳನ್ನು ಆಲಿಸಿ, ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತರಬೇತಿ ಕೊಡಬೇಕು. ಜಿಲ್ಲೆಯ ಹೆಚ್ಚಿನ ಅಭ್ಯರ್ಥಿಗಳು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅಂತಹವರಿಗೆ ತರಬೇತಿ ಅವಧಿಯಲ್ಲಿ ಉಚಿತ ಬಸ್‌ ಪಾಸ್‌, ಊಟದ ವ್ಯವಸ್ಥೆ ಮಾಡಬೇಕು. ಇಲಾಖೆ ಅನುದಾನದಲ್ಲಿ ಕೊಡಲು ಸಾಧ್ಯವಿಲ್ಲದಿದ್ದರೆ ಸಂಘ-ಸಂಸ್ಥೆಗಳು, ದಾನಿಗಳಿಂದ ನೆರವು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ನೇರ ಫೋನ್‌-ಇನ್‌ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಒಟ್ಟು 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಂದ ಕರೆಗಳು ಸ್ವೀಕೃತವಾದವು. ಪದವಿ ಪೂರ್ಣಗೊಳಿಸಿದ ಹೆಚ್ಚಿನ ಅಭ್ಯರ್ಥಿಗಳು ಕರೆ ಮಾಡಿದರು. ಸ್ವಯಂ ಉದ್ಯೋಗಕ್ಕೆ ನೆರವು, ಹೈನುಗಾರಿಕೆ, ಕಂಪ್ಯೂಟರ್‌ ತರಬೇತಿ, ಮೋಟಾರು ವಾಹನ ಚಾಲನಾ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಸಲುವಾಗಿ ಕೋಚಿಂಗ್‌ ನೀಡಲು ಕೋರಿದರು. ಎಲ್ಲಾ ಕರೆಗಳನ್ನು ಶಾಂತಚಿತ್ತದಿಂದ ಆಲಿಸಿದ ಜಿಲ್ಲಾಧಿಕಾರಿಗಳು, ಅವರು ಕೇಳುತ್ತಿದ್ದ ಪ್ರಶ್ನೆ, ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. ಪ್ರತಿಯೊಬ್ಬ ಅಭ್ಯರ್ಥಿಗಳು https://www.kaushalkar.com/>ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ತಿಳಿಸಿದರು.

Advertisement

ಕೆಲ ಅಭ್ಯರ್ಥಿಗಳು ಗ್ರಂಥಾಲಯಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬು ದಾಗಿ ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಗ್ರಂಥಾಲಯಗಳ ಸಮಯ ಪಾಲನೆ ಕಡ್ಡಾಯ. ಬೆಳಗ್ಗೆ 9ರಿಂದ 11:00 ಗಂಟೆ ಮತ್ತು ಸಂಜೆ 4ರಿಂದ 6:00 ಗಂಟೆಗೆ ಗ್ರಂಥಾಲಯಗಳನ್ನು ತೆರೆಯಬೇಕು. ಓದುಗರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೆರವಾಗುವ ನಿಯತಕಾಲಿಕೆಗಳು, ದಿನಪತ್ರಿಕೆಗಳು, ಪುಸ್ತಕಗಳು ಗ್ರಂಥಾಲಯಗಳಲ್ಲಿ ಇರಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾ ಹಕ ಅಧಿಕಾರಿ ಶಿಲ್ಪಾ ಶರ್ಮಾ, ಅಪರ ಜಿಲ್ಲಾಧಿಕಾರಿ ಪ್ರಕಾಶ್‌ ಜಿ. ರಜಪೂತ, ಜಿಲ್ಲಾ ಪಂಚಾಯಿತಿಯ ಗುರುನಾಥ ಗೌಡಪ್ಪನೋರ್‌, ಜಿಲ್ಲಾ ಉದ್ಯೋಗಾಧಿಕಾರಿ ಭಾರತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಶೈಲ ಬಿರಾದಾರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next